ADVERTISEMENT

ಎಸ್‌ಟಿ ಮೀಸಲಾತಿ: 20ರಂದು ಧರಣಿ

​ಪ್ರಜಾವಾಣಿ ವಾರ್ತೆ
Published 14 ಮೇ 2022, 16:12 IST
Last Updated 14 ಮೇ 2022, 16:12 IST
ಶ್ರೀನಿವಾಸನಾಯಕ
ಶ್ರೀನಿವಾಸನಾಯಕ   

ಚಾಮರಾಜನಗರ: ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ಸಂಬಂಧ ನ್ಯಾ.ನಾಗಮೋಹನ್ ದಾಸ್ ಅವರು ನೀಡಿರುವ ವರದಿ ಜಾರಿಗೆ ಆಗ್ರಹಿಸಿ ಇದೇ 20ರಂದು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಾಯಕ ಜನಾಂಗದಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ಮುಖಂಡ ಪು.ಶ್ರೀನಿವಾಸನಾಯಕ ಅವರು ಶನಿವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರದಿ ಜಾರಿಗೆ ಆಗ್ರಹಿಸಿ 91 ದಿನಗಳಿಂದಲೂ ದಾವಣಗೆರೆಯ ರಾಜನಹಳ್ಳಿಯ ಪ್ರಸನ್ನಾನಂದಪುರಿಸ್ವಾಮೀಜಿ ಅವರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಸರ್ಕಾರ ಕ್ರಮವಹಿಸಿಲ್ಲ.‌ ಈ ಧರಣಿಯು 20ಕ್ಕೆ 100 ದಿನಗಳು ಪೂರೈಸುತ್ತಿದೆ. ಅಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಜನಾಂಗದವರು ಧರಣಿ ನಡೆಸಲಿದ್ದಾರೆ. ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗುವುದು’ ಎಂದರು.

2011ರ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರವು ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಳಕ್ಕೆ ನಾಗಮೋಹನ್‌ದಾಸ್ ಅವರು ವರದಿ ನೀಡಿದ್ದರು. ಆದರೆ, ಸರ್ಕಾರ ಈ ವರದಿಯನ್ನು ಇನ್ನೂ ಕೂಡ ಜಾರಿ ಮಾಡದೆ ಮೀನ ಮೇಷ ಎಣಿಸುತ್ತಿದೆ’ ಎಂದು ದೂರಿದರು.

ADVERTISEMENT

‘ನಾಯಕ ಜನಾಂಗದವರು ಪಕ್ಷಾತೀತವಾಗಿ ಒಗ್ಗೂಡಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡಲಿದ್ದೇವೆ. ಸರ್ಕಾರವು ಎಚ್ಚೆತ್ತುಕೊಂಡು ಕೂಡಲೇ ಮೀಸಲಾತಿ ಹೆಚ್ಚಳ ಮಾಡಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಎಂ.ರಾಮಚಂದ್ರ, ಸುರೇಶ್‌ನಾಯಕ, ಕಪಿನಿನಾಯಕ, ಜಯಸುಂದರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.