ADVERTISEMENT

ಅಕ್ರಮ ಬಿಪಿಎಲ್‌ ಕಾರ್ಡ್‌ ವಿರುದ್ಧ ಕಾರ್ಯಾಚರಣೆ

10 ಸಾವಿರದಿಂದ 15 ಸಾವಿರ ಅನರ್ಹರು ಸೌಲಭ್ಯ ಪಡೆಯುತ್ತಿರುವ ಸಾಧ್ಯತೆ, ರಾಜ್ಯದಾದ್ಯಂತ ನಡೆಯುತ್ತಿರುವ ಪ್ರಕ್ರಿಯೆ

ಸೂರ್ಯನಾರಾಯಣ ವಿ
Published 3 ಸೆಪ್ಟೆಂಬರ್ 2019, 19:45 IST
Last Updated 3 ಸೆಪ್ಟೆಂಬರ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಆರ್ಥಿಕವಾಗಿ ಸದೃಢವಾಗಿದ್ದರೂ ಸುಳ್ಳು ಮಾಹಿತಿ ನೀಡಿಬಿಪಿಎಲ್‌ ಪಡಿತರ ಚೀಟಿ ಮಾಡಿಸಿಕೊಂಡಿರುವವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನುಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆರಂಭಿಸಿದೆ.

ಜಿಲ್ಲೆಯಲ್ಲಿ 10 ಸಾವಿರದಿಂದ 15 ಸಾವಿರದಷ್ಟು ಮಂದಿ ಬಡತನ ರೇಖೆಗಿಂತ ಕೆಳಗೆ ಇರುವುದಾಗಿ ಹೇಳಿಕೊಂಡು ಬಡವರಿಗೆ ಮೀಸಲಾಗಿರುವ ಸೌಲಭ್ಯವನ್ನು ಪಡೆಯುತ್ತಿರುವ ಸಾಧ್ಯತೆ ಇದೆ ಎಂದು ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್‌ ಪಡಿತರ ಚೀಟಿ ಪಡೆದಿರುವವರು ಸ್ವಯಂ ಪ್ರೇರಿತರಾಗಿ ಸೆಪ್ಟೆಂಬರ್‌ 30ರ ಒಳಗಾಗಿ ಪಡಿತರ ಚೀಟಿಗಳನ್ನು ಹಿಂದಿರುಗಿಸುವಂತೆ ಇಲಾಖೆ ಸಾರ್ವಜನಿಕರನ್ನು ಕೇಳಿಕೊಂಡಿದೆ. ಒಂದು ವೇಳೆ ಹಿಂದಿರುಗಿಸದಿದ್ದರೆ, ಅಕ್ರಮವಾಗಿ ಪಡಿತರ ಚೀಟಿ ಹೊಂದಿರುವ ಆರೋಪದಲ್ಲಿ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸುವ ಎಚ್ಚರಿಕೆಯನ್ನೂ ಅಧಿಕಾರಿಗಳು ನೀಡಿದ್ದಾರೆ.

ADVERTISEMENT

‘ರಾಜ್ಯದಾದ್ಯಂತ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದೇ ರೀತಿ ಜಿಲ್ಲೆಯಲ್ಲೂ ಆರಂಭಿಸಿದ್ದೇವೆ. ತಪ್ಪು ಮಾಹಿತಿ ನೀಡಿ ಬಿಪಿಎಲ್‌ ಚೀಟಿ ಪಡೆದವರು ಅವರಾಗಿಯೇ ಚೀಟಿಯನ್ನು ವಾಪಸ್‌ ನೀಡಲು ತಿಂಗಳ ಅವಕಾಶ ನೀಡಲಾಗಿದೆ. ಇದೇ 30ರ ಒಳಗಾಗಿ ಆಯಾ ತಾಲ್ಲೂಕಿನ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಚೇರಿಯಲ್ಲಿ ಪಡಿತರ ಚೀಟಿಯನ್ನು ನೀಡಬಹುದು’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಆರ್‌.ರಾಚಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಪಿಎಲ್‌ ಕುಟುಂಬಗಳೇ ಹೆಚ್ಚು: 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 2,44,898 ಕುಟುಂಬಗಳಿವೆ. ಎಂಟು ವರ್ಷಗಳಲ್ಲಿ ಗರಿಷ್ಠ 20 ಸಾವಿರದಷ್ಟು ಕುಟುಂಬಗಳು ಹೆಚ್ಚಾಗಿರಬಹುದು ಎಂಬುದು ಅಧಿಕಾರಿಗಳ ಅಂದಾಜು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಿಲ್ಲೆಯಲ್ಲಿ 2,94,265 ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಿದೆ. ಈ ಪೈಕಿ 21,265 ಕುಟುಂಬಗಳು ಅಂತ್ಯೋದಯ ಚೀಟಿ ಹೊಂದಿವೆ. ಕೇವಲ 4,932 ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಪಡೆದಿವೆ. ಉಳಿದೆಲ್ಲ ಕುಟುಂಬಗಳು ಬಿಪಿಎಲ್‌ ಕಾರ್ಡ್‌ಗಳನ್ನೇ ಹೊಂದಿವೆ.

2,86,068 ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಹೊಂದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು 4,932 ಮಾತ್ರ ಇವೆಯೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.

ಅರ್ಹ ಫಲಾನುಭವಿಗಳಲ್ಲದೆ, ವಿವಿಧ ಇಲಾಖೆಗಳ ಸರ್ಕಾರಿ ನೌಕರರು, ಹೋಟೆಲ್‌ ವರ್ತಕರು, ಅಂಗಡಿಗಳ ಮಾಲೀಕರು, ಗುತ್ತಿಗೆದಾರರು, ಶಿಕ್ಷಕರು ಸೇರಿದಂತೆ ಆರ್ಥಿಕವಾಗಿ ಸಬಲರಾಗಿರುವವರು ತಮ್ಮ ಪ್ರಭಾವ ಬಳಸಿ ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್‌ ಪಡಿತರ ಚೀಟಿ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

‘ಕೆಲವು ಕುಟುಂಬಗಳು ಎರಡೆರಡು ಪಡಿತರ ಚೀಟಿ ಪಡೆದಿರುವ ಸಾಧ್ಯತೆಯೂ ಇದೆ. ಗಡುವು ಮುಗಿದ ಬಳಿಕ ಇಲಾಖೆಯ ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ ಹಾಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಪರಿಶೀಲನೆ ನಡೆಸುತ್ತೇವೆ’ ಎಂದು ರಾಚಪ್ಪ ಅವರು ತಿಳಿಸಿದರು.

**

ಅಂಕಿ ಅಂಶ

2.94 ಲಕ್ಷ – ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳು

2.89 ಲಕ್ಷ – ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳು (ಅಂತ್ಯೋದವೂ ಸೇರಿ)

4,932 – ಎಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.