
ಕೊಳ್ಳೇಗಾಲ: ಇಲ್ಲಿಂದ ಚಾಮರಾಜನಗರಕ್ಕೆ ತೆರಳಲು ಸಮರ್ಪಕವಾಗಿ ಬಸ್ ಇಲ್ಲದಿರುವುದನ್ನು ಖಂಡಿಸಿ ಇಲ್ಲಿನ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಬಸ್ ನಿಲ್ದಾಣದ ಒಳಗೆ ಯಾವ ಬಸ್‌ಗಳೂ ಪ್ರವೇಶ ಮಾಡದಂತೆ ತಡೆದರು. ಅರ್ಧ ಕಿ.ಮೀ. ಸಂಚಾರ ದಟ್ಟಣೆ ಉಂಟಾಯಿತು. ವಾಹನ ಸವಾರರು ಪರದಾಡುವಂತಾಯಿತು.
ವಿದ್ಯಾರ್ಥಿ ದರ್ಶನ್ ಮಾತನಾಡಿ, ಪ್ರತಿನಿತ್ಯ ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಸಮರ್ಪಕವಾಗಿ ಬಸ್‌ಗಳು ಇಲ್ಲದೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ . 10 ನಿಮಿಷ ಕಾಲೇಜಿಗೆ ತಡವಾಗಿ ಹೋದರೆ ಪ್ರಾಧ್ಯಾಪಕರು ನಮ್ಮನ್ನು ತರಗತಿಗೆ ಸೇರಿಸಿಕೊಳ್ಳುವುದಿಲ್ಲ , ಒಂದು ದಿನವೇ ವ್ಯರ್ಥವಾಗುತ್ತಿದೆ. ನಮ್ಮ ಪೋಷಕರು ಕೂಲಿ ಮಾಡಿ ಹಾಗೂ ಸಾಲ ಮಾಡಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಉನ್ನತ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯಯುವ ಕನಸನ್ನು ಕಂಡಿದ್ದೇವೆ. ಆದರೆ ಬಸ್‌ಗಳು ಸಕಾಲದಲ್ಲಿ ಸಂಚರಿಸಲದೆ ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಕೆಎಸ್‌ಆರ್‌ಟಿಸಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಾಮರಾಜನಗರಕ್ಕೆ ಕೊಳ್ಳೇಗಾಲದಿಂದ ಬೆಳಿಗ್ಗೆ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು ಹೋಗುತ್ತಾರೆ. ಆದರೂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಮೈಸೂರು , ಹೊರ ಜಿಲ್ಲೆಗಳಿಗೆ 10 ನಿಮಿಷಕ್ಕೆ ಒಂದು ಬಸ್ ಕಳುಹಿಸುತ್ತಾರೆ ಆದರೆ ಚಾಮರಾಜನಗರಕ್ಕೆ ಅರ್ಧ ಗಂಟೆಗೆ ಒಂದು ಬಸ್ ಕಳುಹಿಸಿಕೊಡುತ್ತಿದ್ದಾರೆ. ಕೆಟ್ಟು ನಿಂತ, ಹಳೆಯ ಬಸ್‌ಗಳನ್ನು ಕಳುಹಿಸುತ್ತಿದ್ದಾರೆ ಇ ಎಂದು ದೂರಿದರು.
ಕೆಎಸ್‌ಆರ್‌ಟಿಸಿ ಚಾಲಕರು ಹಾಗೂ ನಿರ್ವಾಹಕರು ವಿದ್ಯಾರ್ಥಿಗಳನ್ನು ಏಕವಚನದಲ್ಲಿ ಹಾಗೂ ಏರು ಧ್ವನಿಯಲ್ಲಿ ಮಾತನಾಡುತ್ತಾರೆ. ಬೇಸತ್ತು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಗುರುವಾರದಿಂದ ವಿದ್ಯಾರ್ಥಿಗಳು ಚಾಮರಾಜನಗರಕ್ಕೆ ಹೋಗುವಾಗ ಹೆಚ್ಚಿನ ಬಸ್ ವ್ಯವಸ್ಥೆಯನ್ನು ಮಾಡಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ‘ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ, ಪ್ರತಿಭಟನೆಯನ್ನು ಕೈಬಿಡಿ’ ಎಂದು ಮನವಿ ಮಾಡಿದರು. ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು. ವಿದ್ಯಾರ್ಥಿಗಳಾದ ಸುಜಯ್, ಉದಯ್, ಮನೋಜ್, ಮಹೇಶ್, ಶ್ರೇಯಸ್, ರಾಘವೇಂದ್ರ, ಪ್ರಭು, ನಟರಾಜು, ರಾಜಶೇಖರ್, ಮರಿಸ್ವಾಮಿ, ಸಿದ್ದರಾಜು ಪ್ರತಿಭಟನೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.