ADVERTISEMENT

ಚಾಮರಾಜನಗರ ಲೋಕಸಭಾ ಚುನಾವಣೆ | ಅಖಾಡದಲ್ಲಿ ಏಕೈಕ ಮಹಿಳೆ

ಸೂರ್ಯನಾರಾಯಣ ವಿ
Published 16 ಏಪ್ರಿಲ್ 2024, 5:18 IST
Last Updated 16 ಏಪ್ರಿಲ್ 2024, 5:18 IST
ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿರುವ ಸುಮ ಅವರು ಸೋಮವಾರ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು
ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿರುವ ಸುಮ ಅವರು ಸೋಮವಾರ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು   

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ 14 ಮಂದಿ ಅಭ್ಯರ್ಥಿಗಳಲ್ಲಿ ಮಹಿಳಾ ಅಭ್ಯರ್ಥಿ ಇರುವುದು ಒಬ್ಬರೇ. ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದಿಂದ (ಕಮ್ಯುನಿಸ್ಟ್‌) (ಎಸ್‌ಯುಸಿಐ–ಸಿ) ಸುಮ ಎಸ್‌ ಅವರು ಹುರಿಯಾಳಾಗಿದ್ದಾರೆ. 

ಚಾಮರಾಜನಗರ ಲೋಕಸಭಾ ಕ್ಷೇತ್ರದ ಇತಿಹಾಸ ನೋಡಿದರೆ, ಇಲ್ಲಿ ಇದುವರೆಗೂ ಒಬ್ಬ ಮಹಿಳೆಯೂ ಸಂಸದೆಯಾಗಿ ಆಯ್ಕೆಯಾಗಿಲ್ಲ. 1962ರಿಂದ ಇಲ್ಲಿಯವರೆಗೆ 15 ಲೋಕಸಭಾ ಚುನಾವಣೆಗಳು ನಡೆದಿವೆ. ಸ್ಪರ್ಧಿಸಿರುವ ಮಹಿಳಾ ಹುರಿಯಾಳುಗಳ ಸಂಖ್ಯೆಯೂ ಕಡಿಮೆಯೇ. 

ಮಣೆ ಹಾಕದ ರಾಜಕೀಯ ಪಕ್ಷಗಳು: 1962ರಿಂದ 2019ರವರೆಗೂ ರಾಜಕೀಯ ಪ‍ಕ್ಷಗಳು ಮಹಿಳೆಯರಿಗೆ ಟಿಕೆಟ್‌ ನೀಡಲು ಮನಸ್ಸು ಮಾಡಿಲ್ಲ.

ADVERTISEMENT

1998ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಲೋಕಶಕ್ತಿ ಪಕ್ಷವು ಸುಶೀಲಾ ಕೇಶವಮೂರ್ತಿ ಅವರನ್ನು ಕಣಕ್ಕಿಳಿಸಿತ್ತು. ದೊಡ್ಡ ಪಕ್ಷದಿಂದ ಸ್ಪರ್ಧಿಸಿದ್ದ ಏಕೈಕ ಮಹಿಳಾ ಅಭ್ಯರ್ಥಿ ಎಂದರೆ ಅವರೊಬ್ಬರೇ. ಅವರು ಗೆದ್ದಿರಲಿಲ್ಲ. 

15 ಚುನಾವಣೆಗಳ ಪೈಕಿ, ಅತಿ ಹೆಚ್ಚು ಬಾರಿ, ಅಂದರೆ 10 ಸಲ ಗೆದ್ದಿರುವ ಕಾಂಗ್ರೆಸ್‌ ಮಹಿಳೆಯರಿಗೆ ಮಣೆ ಹಾಕಿಲ್ಲ. ಈ ಬಾರಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್‌ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೂ ಟಿಕೆಟ್‌ ಸಿಗಲಿಲ್ಲ. ಎರಡು ಬಾರಿ ಗೆದ್ದಿರುವ ಜನತಾದಳ, ತಲಾ ಒಂದೊಂದು ಬಾರಿ ಗೆದ್ದಿರುವ ಜೆಡಿಎಸ್‌, ಜೆಡಿಯು, ಬಿಜೆಪಿಯೂ ಮಹಿಳೆಯರಿಗೆ ಟಿಕೆಟ್‌ ನೀಡಿಲ್ಲ. 

1984ರಲ್ಲಿ ನಡೆದ ಚುನಾವಣೆಯಲ್ಲಿ ಸುಶೀಲಾ ಎಂಬುವವರು ಪಕ್ಷೇತರರಾಗಿ ಸ್ಪ‍ರ್ಧಿಸಿದ್ದರು. 1991ರಲ್ಲಿ ಪಿ.ಮಹದೇವಮ್ಮ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷಿಸಿದ್ದರು. ಆ ಬಳಿಕದ ಚುನಾವಣೆಗಳಲ್ಲಿ ಮಹಿಳೆಯರು ಕಣಕ್ಕಿಳಿಯುವ ಸಾಹಸ ಮಾಡಿಲ್ಲ. 

1998ರ ಬಳಿಕ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸುಮ ಅವರು ಸ್ಪರ್ಧಿಸಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕಾರ್ಮಿಕರ ಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ಸುಮ ಅವರಿಗೆ ಇದು ಮೊದಲ ಚುನಾವಣೆ.

ಪ್ರಭಾವಿಗಳ ನಡುವೆ ಮಹಿಳೆಯೊಬ್ಬಳು ಧೈರ್ಯವಾಗಿ ಸ್ಪರ್ಧಿಸುತ್ತಿದ್ದಾಳೆ ಎಂದು ಎಲ್ಲರೂ ಶುಭ ಕೋರುತ್ತಿದ್ದಾರೆ. .ಜನರ ಸ್ಪಂದನೆ ಚೆನ್ನಾಗಿದೆ.
ಸುಮ ಎಸ್‌, ಎಸ್‌ಯುಸಿಐ–ಸಿ ಅಭ್ಯರ್ಥಿ

‘ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಮಹಿಳೆಯರ ಸಂಖ್ಯೆ ಕಡಿಮೆ. ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ನನ್ನ ವೈಯಕ್ತಿಕ ಆಕಾಂಕ್ಷೆಯಲ್ಲ. ಕಮ್ಯುನಿಸ್ಟ್‌ ಪಕ್ಷದಲ್ಲಿರುವವರಿಗೆ ವೈಯಕ್ತಿಕ ಆಸೆ, ಆಕಾಂಕ್ಷೆಗಳು ಇರುವುದಿಲ್ಲ. ಪಕ್ಷದ ತತ್ವ, ಸಿದ್ಧಾಂತಗಳ ಅಡಿಯಲ್ಲಿ ಕೆಲಸ ಮಾಡುತ್ತಾ ಇರುತ್ತೇವೆ. ಈ ಬಾರಿ ಪಕ್ಷವು ನನ್ನನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ’ ಎಂದು ಸುಮ ‘ಪ್ರಜಾವಾಣಿ’ಗೆ ತಿಳಿಸಿದರು. 

ತಿ.ನರಸೀಪುರದರಾದ ಅವರು, ಎಂಎ ಸ್ನಾತಕೋತ್ತರ ಪದವೀಧರೆ. ಎಂಟು ವರ್ಷಗಳಿಂದ ಬಡವರು, ಶೋಷಿತರು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. 

ಕ್ಷೇತ್ರದಲ್ಲಿ ಜನರ ಸ್ಪಂದನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಹೋರಾಟದಿಂದ ಅನುಕೂಲ ಪಡೆದ ಫಲಾನುಭವಿಗಳು ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ನನ್ನನ್ನು ಬೆಂಬಲಿಸುತ್ತಿದ್ದಾರೆ’ ಎಂದರು.   

‘ಹಣ, ಅಧಿಕಾರದ ಬಲದಲ್ಲಿ ಕೆಲವರು ಚುನಾವಣೆ ಎದುರಿಸುತ್ತಿದ್ದಾರೆ. ನಾವು ಜನರ ಹಕ್ಕುಗಳಿಗಾಗಿ ಮಾಡಿರುವ ಹೋರಾಟದ ಬಲ ಇಟ್ಟುಕೊಂಡು ಸ್ಪರ್ಧಿಸುತ್ತಿದ್ದೇವೆ. ಜನರು ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ಸುಮ ತಿಳಿಸಿದರು. 

ಹನೂರು ವ್ಯಾಪ್ತಿಯಲ್ಲಿ ಪ್ರಚಾರ

ಹನೂರು: ಸುಮ ಅವರು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹನೂರು ಕೌದಳ್ಳಿ ರಾಮಾಪುರ ಮಧುವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತಯಾಚನೆ ಮಾಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ನಮ್ಮ ದೇಶದಲ್ಲಿ ಸಂಪತ್ತನ್ನು ಸೃಷ್ಟಿಸುತ್ತಿರುವ ದುಡಿಯುವ ಜನರಿಗೆ ಅವರ ಬದುಕು ಹಸನಾಗುವಂತಹ ಸ್ವಾತಂತ್ರ್ಯ ಸಿಗಬೇಕು  ದುಡಿಯುವ ಕೈಗಳಿಗೆ ಕೆಲಸ ಸಿಗುಬೇಕು ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ದುಡಿಯುವ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮತ್ತು ಅವರ ಪರವಾಗಿ ಸತತವಾಗಿ ಹೋರಾಟ ನಡೆಸುತ್ತಿರುವ ನಮ್ಮ ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸಿ’ ಎಂದು ಮನವಿ ಮಾಡಿದರು. 

ಎಸ್‌ಯುಸಿಐ (ಕಮ್ಯುನಿಸ್ಟ್) ಜಿಲ್ಲಾ ಸಮಿತಿ ಸದಸ್ಯೆ ಸಂಧ್ಯಾ ಮಾತಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಅಥವಾ ಪ್ರಾದೇಶಿಕ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ರಾಜ್ಯ ಸರ್ಕಾರಗಳು ಇಂದು ಜನಪರವಾಗಿಲ್ಲ. ಗರೀಬಿ ಹಟಾವೋ ಎಂಬ ಘೋಷಣೆಗಳೊಂದಿಗೆ 65 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಬಡತನ ನಿವಾರಣೆ ಮಾಡಿಲ್ಲ. ಇಂದಿಗೂ ದೇಶ ಬಡತನದಿಂದ ನರಳುತ್ತಿದೆ. ಕಾಂಗ್ರೆಸ್ ನಂತರ ಬಂದ ಬಿಜೆಪಿ ಸರ್ಕಾರ ಶಿಕ್ಷಣ ಆರೋಗ್ಯ ರೈಲ್ವೆ ಎಲ್ಲವನ್ನೂ  ತೀವ್ರ ಗತಿಯಲ್ಲಿ ಖಾಸಗೀಕರಣಕ್ಕೆ ಒಳಪಡಿಸಿದೆ’ ಎಂದು ದೂರಿದರು. 

ರಾಜ್ಯ ಸಮಿತಿಯ ಸದಸ್ಯ ಕೆ.ವಿ.ಭಟ್ ಜಿಲ್ಲಾ ಸಮಿತಿಯ ಸದಸ್ಯರಾದ ಚಂದ್ರಶೇಖರ ‌ಮೇಟಿ ಸೀಮಾ ಹರೀಶ್ ಬಸವರಾಜು ನೀತು ಮುದ್ದು ಕೃಷ್ಣ ನಿತಿನ್ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.