ADVERTISEMENT

ಬೇಸಗೆ | ಹಣ್ಣು ತರಕಾರಿ ದುಬಾರಿ; ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:23 IST
Last Updated 24 ಫೆಬ್ರುವರಿ 2026, 7:23 IST
ಚಾಮರಾಜನಗರದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀಸುತ್ತಿರುವ ಗ್ರಾಹಕರು
ಚಾಮರಾಜನಗರದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀಸುತ್ತಿರುವ ಗ್ರಾಹಕರು   

ಚಾಮರಾಜನಗರ: ಬೇಸಗೆಯ ದಗೆ ಹೆಚ್ಚುತ್ತಿದ್ದಂತೆ ತರಕಾರಿ ಹಾಗೂ ಹಣ್ಣುಗಳ ಬೆಲೆ ನಿಧಾನವಾಗಿ ಏರುಮುಖವಾಗುತ್ತಿದೆ. ನೀರಿನ ಕೊರತೆ, ಇಳುವರಿ ಕುಸಿತ, ರೋಗಬಾಧೆ ಸೇರಿದಂತೆ ಹಲವು ಕಾರಣಗಳಿಂದ ಮಾರುಕಟ್ಟೆಯಲ್ಲಿ ಹಣ್ಣು ಹಾಗೂ ತರಕಾರಿಗಳ ಬೆಲೆ ಹೆಚ್ಚಾಗುತ್ತಿದೆ.

ಬೀನ್ಸ್‌ ದುಬಾರಿ: ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ತರಕಾರಿ ಬೀನ್ಸ್ ದರ ಹೆಚ್ಚಾಗಿದೆ. ಕಳೆದವಾರವೂ ಕೆ.ಜಿಗೆ 80ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದ ಬೀನ್ಸ್ ಈ ವಾರವೂ ₹ 60 ರಿಂದ 80ರವರೆಗೆ ಬೆಲೆ ಕಾಯ್ದುಕೊಂಡಿದೆ. ‌

ಭಾರಿ ಕುಸಿತ ಕಂಡಿದ್ದು ಬೆಳ್ಳುಳ್ಳಿ ದರ ಚೇತರಿಕೆ ಕಂಡಿದ್ದು ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ಕೆಜಿಗೆ ₹ 180ರಿಂದ ₹ 200ರವರೆಗೆ ಮಾರಾಟವಾಗುತ್ತಿದೆ. ಆದರೆ, ಈರುಳ್ಳಿ ಬೆಲೆ ಕೊಂಚ ಇಳಿದಿದೆ. ಎರಡು ವಾರಗಳ ಹಿಂದೆ ಕೆ.ಜಿಗೆ ₹30 ರಿಂದ ₹40ರವರೆಗೆ ಮಾರಾಟವಾಗಿದ್ದ ಈರುಳ್ಳಿ ಮತ್ತೆ ₹25ಕ್ಕೆ ಇಳಿದಿದೆ. ಗುಣಮಟ್ಟದ ದಪ್ಪಗಾತ್ರದ ಈರುಳ್ಳಿ 4 ಕೆ.ಜಿಗೆ ₹100ಕ್ಕೆ ಸಿಗುತ್ತಿದೆ.

ADVERTISEMENT

ಹಣ್ಣುಗಳ ದರ ಹೆಚ್ಚಳ: ಬೇಸಗೆ ಆರಂಭವಾಗಿರುವುದರಿಂದ ಬಹುತೇಕ ಹಣ್ಣುಗಳ ದರ ಹೆಚ್ಚಾಗಿದೆ. ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಸಿರು ದ್ರಾಕ್ಷಿ ದರ ಕೈಗೆಟುಕದಂತಾಗಿದ್ದು ಕೆ.ಜಿಗೆ ಬರೋಬ್ಬರಿ ₹ 200 ಮುಟ್ಟಿದೆ. ಸಾಮಾನ್ಯವಾಗಿ ಸೀಸನ್ ಆರಂಭದಲ್ಲಿ ದರ ಹೆಚ್ಚಾಗಿರುತ್ತದೆ, ಒಂದೆರಡು ವಾರ ಕಳೆದ ಬಳಿಕ ಇಳಿಕೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕಿತ್ತಳೆ ದುಬಾರಿ: ಕಿತ್ತಳೆ ಹಣ್ಣು ಹಾಗೂ ಸೇಬಿನ ದರವೂ ಗಗನಮುಖಿಯಾಗಿದೆ. ಕಿತ್ತಳೆ ಕೆ.ಜಿಗೆ ₹100 ಇದ್ದರೆ ಸೇಬು ₹200ರ ಗಡಿ ದಾಟಿದೆ. ಎರಡೂ ಹಣ್ಣುಗಳ ಬೆಲೆ ತಿಂಗಳ ಹಿಂದೆ ಅರ್ಧದಷ್ಟಿತ್ತು. ಬೇಸಗೆಯ ದಾಹ ತಣಿಸಿಕೊಳ್ಳಲು ಸಾರ್ವಜನಿಕರು ತಂಪು ಪಾನೀಯಗಳ ಮೊರೆ ಹೋಗಿರುವುದರಿಂದ ಸೇಬು, ಕಿತ್ತಳೆ, ಪೈನಾಪಲ್‌, ಕಲ್ಲಂಗಡಿ, ಕರ್ಬೂಜ ಹಣ್ಣುಗಳಿಗೆ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿಗಳು.

ಎಳನೀರಿಗೆ ಬೇಡಿಕೆ: ಚಳಿಗಾಲದಲ್ಲಿ ₹ 40ಕ್ಕೆ ಇಳಿಕೆಯಾಗಿದ್ದ ಎಳನೀರು 60ಕ್ಕೆ ಏರಿಕೆಯಾಗಿದೆ. ಎಳನೀರಿಗೆ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರುಗತಿಯಲ್ಲಿದ್ದು, ದಗೆ ಹೆಚ್ಚಾದರೆ ದರ ಗಗನಕ್ಕೇರಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.