ADVERTISEMENT

ಚಾಮರಾಜನಗರ| ಜ.15 ರಿಂದ ಸುತ್ತೂರು ಜಾತ್ರೆ: ಪ್ರಚಾರ ರಥಕ್ಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 2:37 IST
Last Updated 7 ಜನವರಿ 2026, 2:37 IST
ಸುತ್ತೂರು ಕ್ಷೇತ್ರದಲ್ಲಿ ಜ.15 ರಿಂದ 20ರವರೆಗೆ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಗರಕ್ಕೆ ಆಮಿಸಿದ ಪ್ರಚಾರ ರಥಕ್ಕೆ ಜೆಎಸ್‌ಎಸ್ ಕಾಲೇಜು ಅವರಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು
ಸುತ್ತೂರು ಕ್ಷೇತ್ರದಲ್ಲಿ ಜ.15 ರಿಂದ 20ರವರೆಗೆ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಗರಕ್ಕೆ ಆಮಿಸಿದ ಪ್ರಚಾರ ರಥಕ್ಕೆ ಜೆಎಸ್‌ಎಸ್ ಕಾಲೇಜು ಅವರಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು   

ಚಾಮರಾಜನಗರ: ಸುತ್ತೂರು ಕ್ಷೇತ್ರದಲ್ಲಿ ಜ.15 ರಿಂದ 20ರವರೆಗೆ 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಗರಕ್ಕೆ ಆಮಿಸಿದ ಪ್ರಚಾರ ರಥಕ್ಕೆ ಜೆಎಸ್‌ಎಸ್ ಕಾಲೇಜು ಅವರಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಗಣ್ಯರು ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸಂಯೋಜಕ ಆರ್.ಎಂ.ಸ್ವಾಮಿ ಪ್ರಚಾರ ರಥವನ್ನು ಬರಮಾಡಿಕೊಂಡು ವಿಶೇಷವಾಗಿ ಹೂವುಗಳಿಂದ ಅಲಂಕೃತಗೊಳಿಸಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಪ್ರಚಾರ ರಥದ ಮುಂಭಾಗದಲ್ಲಿದ್ದ ಶಿವರಾತ್ರೀಶ್ವರ ಶಿವಯೋಗಿಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ‘ಸುತ್ತೂರು ಜಾತ್ರೆಯಲ್ಲಿ ಗ್ರಾಮೀಣ ಸೊಗಡು ಅನಾವರಣಗೊಳ್ಳಲಿದ್ದು ಎಲ್ಲ ಕ್ಷೇತ್ರಗಳ ಗಣ್ಯರು ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷ. ಐದು ದಿನ ನಡೆಯುವ ಜಾತ್ರೆಯು ಮೈಸೂರು ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಿಸುತ್ತದೆ. ಜ.15ರಿಂದ ಆರಂಭವಾಗುವ ಜಾತ್ರೆಯಲ್ಲಿ ಮೊದಲ ದಿನ ಉತ್ಸವ ಮೂರ್ತಿ ಗದ್ದುಗೆಗೆ ಪೂಜೆ, 16ರಂದು ಹಾಲರವಿ ಉತ್ಸವ, ಸೋಮೇಶ್ವರ ಸ್ವಾಮಿ ಕುಂಬಾಭಿಷೇಕ, ವೀರಭದ್ರೇಶ್ವರ ಕೊಂಡೋತ್ಸವ, 17ರಂದು ರಥೋತ್ಸವ, 18ರಂದು ಮಹದೇಶ್ವರ ಕೊಂಡೊತ್ಸವ, ಲಕ್ಷ ದೀಪೋತ್ಸವ, ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, 19ರಂದು ತೆಪ್ಪೋತ್ಸವ, 20ರಂದು ಅನ್ನ ಬ್ರಹ್ಮೋತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

ADVERTISEMENT

ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ, ರಾಗಿ ಬೀಸುವ ಸ್ಪರ್ಧೆ, ವಸ್ತು ಪ್ರದರ್ಶನ, ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲಪುರ ನಂದೀಶ್, ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು, ಡಾ.ಪರಮೇಶ್ವರಪ್ಪ, ಲಕ್ಷ್ಮಮ್ಮ, ಹೊಸೂರು ನಟೇಶ್, ಕಿಲಗೆರೆ ಚಂದ್ರಶೇಖರ್, ಡಿ. ನಾಗೇಂದ್ರ, ಬಿ.ಕೆ. ರವಿಕುಮಾರ್, ಆಲೂರು ಮಲ್ಲು, ಕೆ. ವೀರಭದ್ರಸ್ವಾಮಿ, ಮಲ್ಲಿಕಾರ್ಜುಸ್ವಾಮಿ, ಲಿಂಗರಾಜು ಆರ್.ಎಸ್. ಪ್ರಾಂಶುಪಾಲ ಮಹದೇವಸ್ವಾಮಿ, ದೇವರಾಜು, ಎಚ್.ಎಂ.ಉಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.