ADVERTISEMENT

ಟೈಫಾಯ್ಡ್ ಜ್ವರ ಎಂದು ನಿರ್ಲಕ್ಷ್ಯ: ಕೋವಿಡ್ ಉಲ್ಬಣಿಸಿದ ಮೇಲೆ ಆಸ್ಪತ್ರೆಯತ್ತ

ಟೈಫಾಯ್ಡ್ ಜ್ವರ ಎಂದು ನಿರ್ಲಕ್ಷ್ಯ ವಹಿಸುತ್ತಿರುವ ರೋಗಿಗಳು

ಕೆ.ಎಸ್.ಗಿರೀಶ್
Published 17 ಮೇ 2021, 6:49 IST
Last Updated 17 ಮೇ 2021, 6:49 IST
ಚಾಮರಾಜನಗರದ ಕೋವಿಡ್‌–19 ಆಸ್ಪತ್ರೆ
ಚಾಮರಾಜನಗರದ ಕೋವಿಡ್‌–19 ಆಸ್ಪತ್ರೆ   

ಚಾಮರಾಜನಗರ: ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೂ ರೋಗಿಗಳು ಕೋವಿಡ್ ಪರೀಕ್ಷೆಗೆ ಮುಂದಾಗದೇ ಖಾಸಗಿ ವೈದ್ಯರ ಮೊರೆ ಹೋಗುತ್ತಿದ್ದಾರೆ. ಖಾಸಗಿ ವೈದ್ಯರು ರಕ್ತ ತಪಾಸಣೆ ನಡೆಸಿ, ಟೈಫಾಯ್ಡ್ (ವಿಷಮ ಶೀತಜ್ವರ) ಎಂದು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಕೋವಿಡ್‌ ಉಲ್ಬಣಿಸಿದ ಬಳಿಕ ಸರ್ಕಾರಿ ಆಸ್ಪತ್ರೆಯತ್ತ ಬರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರೇ ಕೋವಿಡ್ ಪರೀಕ್ಷೆಗೆ ಆರಂಭದಲ್ಲಿ ಮುಂದಾಗುತ್ತಿಲ್ಲ. ತಮ್ಮ ಊರಿನಲ್ಲೇ ಇರುವ ಅಥವಾ ಹೋಬಳಿ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿರುವ ಖಾಸಗಿ ಕ್ಲಿನಿಕ್‌ಗಳಿಗೆ ಇವರು ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಭೇಟಿ ನೀಡುತ್ತಾರೆ.

ಕ್ಲಿನಿಕ್‌ಗಳಲ್ಲಿ ವೈದ್ಯರು ತಮ್ಮ ಬಳಿ ಅಥವಾ ತಮಗೆ ಪರಿಚಿತರಾಗಿರುವ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ ಮಾಡಿಸುತ್ತಾರೆ. ಬಹುತೇಕ ಮಂದಿಗೆ ಟೈಫಾಯ್ಡ್ ಇರುವುದು ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ಅದಕ್ಕೆ ತಕ್ಕಂತೆ ಚಿಕಿತ್ಸೆಯನ್ನು ಅವರು ಆರಂಭಿಸುತ್ತಾರೆ.

ADVERTISEMENT

ರಕ್ತ ಪರೀಕ್ಷೆಯಲ್ಲಿ ಟೈಫಾಯ್ಡ್ ಎಂದು ಬಂದರೂ ಹಲವರಲ್ಲಿ ಕೋವಿಡ್‌ ರೋಗವಿರುವುದು ಪತ್ತೆಯಾಗುತ್ತಿದೆ. ಟೈಫಾಯ್ಡ್‌ಗೆ ಔಷಧ ತೆಗೆದುಕೊಂಡ ಬಳಿಕವೂ ರೋಗ ಲಕ್ಷಣಗಳು ಕಡಿಮೆಯಾಗುವುದಿಲ್ಲ. ಉಸಿರಾಟಕ್ಕೆ ತೊಂದರೆಯಾಗುವವರೆಗೂ ಕೋವಿಡ್ ಪರೀಕ್ಷೆಗೆ ಇವರು ಮುಂದಾಗುವುದಿಲ್ಲ.

ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎಂದು ಬಂದಾಗ ಮಾತ್ರವೇ ಖಾಸಗಿ ವೈದ್ಯರು ಕೋವಿಡ್ ಪರೀಕ್ಷೆಗೆ ಶಿಫಾರಸ್ಸು ಮಾಡುತ್ತಾರೆ. ಆಗ ಕೋವಿಡ್‌ ಫಲಿತಾಂಶ ಬರುವವರೆಗೆ ಆರೋಗ್ಯ ಮತ್ತಷ್ಟು ಬಿಗಡಾಯಿಸುತ್ತದೆ. ಅಂತಿಮವಾಗಿ ಆಸ್ಪತ್ರೆಗೆ ಬರುವಷ್ಟರಲ್ಲಿ ಇವರ ಆಮ್ಲಜನಕದ ಸ್ಯಾಚುರೇಷನ್ ಮಟ್ಟ ತೀರಾ ಕಡಿಮೆಯಾಗಿರುತ್ತದೆ. ವೈದ್ಯರು ಚಿಕಿತ್ಸೆ ಆರಂಭಿಸಿದರೂ, ರೋಗಿಯ ದೇಹಸ್ಥಿತಿ ಸ್ಪಂದಿಸುವುದಿಲ್ಲ. ಇದು ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಬಹು ಮುಖ್ಯ ಕಾರಣ ಎನಿಸಿದೆ.

ಕೋವಿಡ್‌ ಭೀತಿಯೇ ಕಾರಣ

ಕೋವಿಡ್‌ ರೋಗ ಲಕ್ಷಣಗಳು ಕಾಣಿಸಿಕೊಂಡರೂ ಜನರು ಕೋವಿಡ್ ಪರೀಕ್ಷೆಗೆ ಮುಂದಾಗದಿರುವುದಕ್ಕೆ ಅವರಲ್ಲಿರುವ ಭಯವೇ ಕಾರಣವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಖಾಸಗಿ ವೈದ್ಯರೊಬ್ಬರು ಹೇಳುತ್ತಾರೆ.

‘ನಾವು ಅವರಿಗೆ ಇದು ಕೋವಿಡ್ ಇರಬಹುದಾದ ಸಾಧ್ಯತೆ ಇದೆ ಎಂದು ಹೇಳುವಷ್ಟರಲ್ಲಿಯೇ ಅವರು ಸುಸ್ತಾಗುತ್ತಾರೆ. ಸ್ವಲ್ಪ ಶೀತವಿದ್ದರೂ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟೀವ್ ಎಂದೇ ಬರುತ್ತದೆ. ಹಾಗಾಗಿ, ಅದರ ಗೊಡವೆಯೇ ಬೇಡ. ನೀವೇ ಚಿಕಿತ್ಸೆ ನೀಡಿ ಎಂದು ದುಂಬಾಲು ಬೀಳುತ್ತಾರೆ. ಒಂದು ವೇಳೆ ಚಿಕಿತ್ಸೆ ನೀಡುವುದಿಲ್ಲ ಎಂದು ಸಾಗ ಹಾಕಿದರೂ ಅವರು ಮತ್ತೊಬ್ಬ ವೈದ್ಯರ ಬಳಿ ಹೋಗುತ್ತಾರೆ’ ಎಂದು ವೈದ್ಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕೋವಿಡ್ ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡುವ ಖಾಸಗಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಎಚ್ಚರಿಕೆ

ಚಾಮರಾಜನಗರ: ಜಿಲ್ಲೆಯಲ್ಲಿ ಖಾಸಗಿ ವೈದ್ಯರು ಕೋವಿಡ್ ಲಕ್ಷಣ ಹೊಂದಿರುವವರ ಆರೋಗ್ಯ ತಪಾಸಣೆ ನಡೆಸದೇ ನೇರವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದ್ದಾರೆ.

ಜ್ವರ, ನೆಗಡಿ, ಶೀತ, ಇನ್ನಿತರ ಕೋವಿಡ್ ಲಕ್ಷಣ ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕಿದೆ. ಆದರೆ, ಖಾಸಗಿ ವೈದ್ಯರು ಈ ಲಕ್ಷಣ ಇರುವವರಿಗೆ ಅವರ ಕ್ಲಿನಿಕ್‍ಗಳಲ್ಲಿ ತಪಾಸಣೆ ನಡೆಸಿ ಔಷಧ, ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ. ಕೋವಿಡ್ ಲಕ್ಷಣ ಇರುವವರಿಗೆ ಕೋವಿಡ್ ಪರೀಕ್ಷೆಗೆ ಶಿಫಾರಸು ಮಾಡಬೇಕು. ಆದರೆ, ಇದನ್ನು ನಿರ್ಲಕ್ಷಿಸಿ ಖಾಸಗಿ ವೈದ್ಯರು ಚಿಕಿತ್ಸೆ, ಔಷಧ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಾಸಗಿ ವೈದ್ಯರು ಕೋವಿಡ್ ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡುತ್ತಿದ್ದು, ಕೆಲ ರೋಗಿಗಳು ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗದೇ ರೋಗ ಉಲ್ಬಣಗೊಂಡ ಬಳಿಕ ತಡವಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ವರದಿಯಾಗುತ್ತಿದೆ. ಇಂತಹ ರೋಗಿಗಳು ತೀರಾ ಗಂಭೀರ ಹಾಗೂ ಅಪಾಯದ ಸ್ಥಿತಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ, ರೋಗಲಕ್ಷಣಗಳು ಕಂಡುಬಂದ ಆರಂಭದಲ್ಲಿಯೇ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಕೆಲ ಭಾಗಗಳಲ್ಲಿ ನಕಲಿ ವೈದ್ಯರು ಜನರಿಗೆ ಔಷಧ, ಚಿಕಿತ್ಸೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಎಲ್ಲಿಯೇ ಆಗಲಿ, ಕೋವಿಡ್ ಪರೀಕ್ಷೆಗೆ ಒಳಪಡಿಸದೇ ಕೋವಿಡ್ ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡುವುದು ಕಂಡುಬಂದಲ್ಲಿ ಕೆ.ಪಿ.ಎಂ ಕಾಯಿದೆ ಪ್ರಕಾರ ಖಾಸಗಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.