ಗುಂಡ್ಲುಪೇಟೆ: ರಾಜ್ಯದಿಂದ ತಮಿಳುನಾಡಿಗೆ ಹೋಗುವವರು ತಮ್ಮ ವಾಹನಗಳಿಗೆ ಬಂಪರ್ ಕ್ರ್ಯಾಶ್ ಗಾರ್ಡ್‌ಗಳನ್ನು ಅಳವಡಿಸಿದ್ದರೆ, ಅವನ್ನು ತೆಗೆದು ಹೋಗುವುದು ಉತ್ತಮ. ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತದೆ.
ತಮಿಳುನಾಡಿನ ಸಾರಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರ್ಯಾಶ್ ಗಾರ್ಡ್‌ಗಳನ್ನು (ಬುಲ್‌ಬಾರ್‌ಗಳು) ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ವಾಹನಗಳ ಬಂಪರ್‌ಗೆ ಹೆಚ್ಚುವರಿಯಾಗಿ ಗಾರ್ಡ್‌ಗಳನ್ನು ಅಳವಡಿಸುವುದರಿಂದ ಅಪಘಾತದ ಸಂದರ್ಭದಲ್ಲಿ ಜನರಿಗೆ ತೀವ್ರ ಗಾಯಗಳಾಗುತ್ತವೆ ಮತ್ತು ಸೆನ್ಸರ್ ಸರಿಯಾಗಿ ಕಾರ್ಯನಿರ್ವಹಿಸದೆ ಕಾರಿನ ಏರ್ ಬ್ಯಾಗ್ ತೆರೆದುಕೊಳ್ಳದೆ ಸಾವು ಸಂಭವಿಸುತ್ತದೆ ಎಂಬ ಕಾರಣದಿಂದ ವಾಹನಗಳಿಗೆ ಬಂಪರ್ ಗಾರ್ಡ್ ಅಳವಡಿಸುವಂತಿಲ್ಲಎಂದು ತಮಿಳುನಾಡಿನ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಬಂಪರ್ ಕ್ರ್ಯಾಶ್ ಗಾರ್ಡ್‌ಗಳನ್ನು ಅಳವಡಿಸುವಂತಿಲ್ಲ ಎಂಬ ನಿಯಮ ಈಗಾಗಲೇ ಜಾರಿಯಲ್ಲಿದ್ದರೂ, ಅದು ಎಲ್ಲಿಯೂ ಪಾಲನೆಯಾಗುತ್ತಿಲ್ಲ.ಈಗ ತಮಿಳುನಾಡಿನ ಸಾರಿಗೆ ಇಲಾಖೆ ಈ ನಿಯಮವನ್ನು ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಂಡಿದ್ದು, ಸಿಬ್ಬಂದಿ ತೀವ್ರವಾಗಿ ತಪಾಸಣೆ ನಡೆಸುತ್ತಿದ್ದಾರೆ.
ತಾಲ್ಲೂಕಿಗೆ ಹೊಂದಿಕೊಂಡಿರುವ ನೀಲಗಿರಿ ಜಿಲ್ಲೆಯಾದ್ಯಾಂತ ಕಾರ್ಯಾಚರಣೆ ನಡೆಯುತ್ತಿದೆ. ಊಟಿ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ತಾಲ್ಲೀಕಿನ ಮೂಲಕ ಪ್ರತಿ ದಿನ ನೂರಾರು ಮಂದಿ ಹೋಗುತ್ತಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಚಾಲಕ ನಾಗರಾಜು ಅವರು, ‘ತಮಿಳುನಾಡಿನ ಪ್ರವೇಶ ಪಡೆಯುವ ಚೆಕ್‌ಪೋಸ್ಟ್ ಸೇರಿದಂತೆ ನಾಲ್ಕೈದು ಕಡೆ ಸಿಬ್ಬಂದಿಗಳಿದ್ದು, ಎಲ್ಲ ವಾಹನಗಳ ಬಗ್ಗೆಗೂ ಗಮನ ಹರಿಸುತ್ತಿದ್ದು, ಬಂಪರ್ ಕ್ರ್ಯಾಶ್ ಗಾರ್ಡ್‌ಗಳಿದ್ದರೆ ತಡೆದು, ಅದನ್ನು ತೆಗೆಯುತ್ತಿದ್ದಾರೆ. ದಂಡವನ್ನೂ ವಿಧಿಸುತ್ತಿದ್ದಾರೆ. ಜಿಲ್ಲೆಯಿಂದ ಹೋಗುವವರು ತಮ್ಮ ವಾಹನಗಳಲ್ಲಿರುವ ಬಂಪರ್ ಗಾರ್ಡ್‌ಗಳನ್ನು ತೆಗೆದು ಹೋಗುವುದು ಒಳ್ಳೆಯದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.