ADVERTISEMENT

ಶಾಲಾ ಮಕ್ಕಳಿಗೆ ಶಿಕ್ಷಣ ಚಾನೆಲ್‌ ಮೂಲಕ ಪಾಠ: ಸುರೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:42 IST
Last Updated 25 ಜುಲೈ 2020, 12:42 IST
ಎಸ್‌. ಸುರೇಶ್‌ ಕುಮಾರ್
ಎಸ್‌. ಸುರೇಶ್‌ ಕುಮಾರ್   

ಚಾಮರಾಜನಗರ: ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಶೀಘ್ರದಲ್ಲಿ ಶಿಕ್ಷಣ ಚಾನೆಲ್‌ಗಳ ಮೂಲಕ ಪಾಠ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್ ಅವರು ಶನಿವಾರ ಹೇಳಿದರು.

ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಂದನ ವಾಹನದಲ್ಲಿ ಈಗಾಗಲೇ 8,9 ಮತ್ತು 10ನೇ ತರಗತಿ ಮಕ್ಕಳಿಗೆ ‘ಸೇತು ಬಂಧ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಬೋಧನೆ ಆರಂಭಿಸಲಾಗಿದೆ. ವಾಹಿನಿಯವರು ನಮಗೆ ದಿನಕ್ಕೆ ನಾಲ್ಕು ಗಂಟೆಗಳ ಸಮಯ ನೀಡಿದ್ದಾರೆ. ಇದಲ್ಲದೇ 1ನೇ ತರಗತಿಯಿಂದ 10ನೇ ತರಗತಿವರೆಗೆ ಚಾನೆಲ್‌ಗಳ ಮೂಲಕ ಪಾಠ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಶಿಕ್ಷಕರು ಪಾಠ ಮಾಡುತ್ತಿರುವ ವಿಡಿಯೊಗಳ ಚಿತ್ರೀಕರಣ ಆಗಿದೆ’ ಎಂದು ಹೇಳಿದರು.

‘ಇದಕ್ಕಾಗಿ ಚಂದನ ವಾಹಿನಿಯಲ್ಲೂ ಸಮಯ ಕೇಳಿದ್ದೇವೆ. ಇದಲ್ಲದೇ ಶಿಕ್ಷಣ ಇಲಾಖೆಗಳಿಗೆ ಸೇರಿದ ಎರಡು ಚಾನೆಲ್‌ಗಳಿವೆ. ಈ ಚಾನೆಲ್‌ಗಳನ್ನು ಮನೆಗಳಿಗೆ ತಲುಪಿಸುವ ಕೆಲಸ ಆಗಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ರಾಜ್ಯದ ಎಲ್ಲ ಕೇಬಲ್‌ ಆಪರೇಟರ್‌ಗಳೊಂದಿಗೆ ಮಾತುಕತೆ ನಡೆಸಿ, ಚಾನೆಲ್‌ ಪ್ರಸಾರಕ್ಕೆ ಬೇಕಾದ ಶುಲ್ಕವನ್ನು ಇಲಾಖೆ ಪಾವತಿಸಲಿದೆ. ಶೀಘ್ರದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ’ ಎಂದು ಹೇಳಿದರು.

ADVERTISEMENT

ಪರ್ಯಾಯ ವ್ಯವಸ್ಥೆ ಅಲ್ಲ: ‘ಇದು ಶಾಲಾ ತರಗತಿಗಳಿಗೆ ಬದಲಿ ವ್ಯವಸ್ಥೆ ಅಲ್ಲ. ಈಗಿನ ಬೋಧನಾ ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಪೈಪೋಟಿಗಾಗಿ ಆರೋಪ:ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್‌ ಕುಮಾರ್‌ ಅವರು, ‘ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಹಗರಣಗಳೇ ಕಾಣಿಸುತ್ತವೆ. ಸರ್ಕಾರ ಮಾಡಿರುವ ಒಳ್ಳೆಯ ಕೆಲಸಗಳು ಕಾಣಿಸುತ್ತಿಲ್ಲ’ ಎಂದರು.

‘ಕಾಂಗ್ರೆಸ್‌ನಲ್ಲಿ ಪ್ರಬಲರು ಯಾರು ಎಂಬ ವಿಚಾರವಾಗಿ ಹೊಸ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ನಡುವೆ ಪೈಪೋಟಿ ಆರಂಭವಾಗಿದೆ. ಸರ್ಕಾರದ ವಿರುದ್ಧ ಹೆಚ್ಚು ಆರೋಪ ಮಾಡಿದರೆ ತಾವು ಪ್ರಬಲರು ಎಂದು ಅವರು ಅಂದುಕೊಂಡಿದ್ದಾರೆ. ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಅವರ ಎಲ್ಲ ಆರೋಪಗಳಿಗೆ ನಮ್ಮ ಸಚಿವರು ಉತ್ತರ ಕೊಟ್ಟಿದ್ದಾರೆ. ನಾವು ಖರೀದಿಸಿರುವ ಉಪಕರಣಗಳ ಮೊತ್ತ ₹500 ಕೋಟಿ ದಾಟಿಲ್ಲ. ಹಾಗಿದ್ದರೂ ₹4000 ಕೋಟಿ ಅವ್ಯವಹಾರ ಆಗಿದೆ ಎಂದು ಬಾಯಿಗೆ ಬಂದ ಹಾಗೆ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.