ADVERTISEMENT

ಚಾಮರಾಜನಗರ-ತಿರುಪತಿ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭ

ಬುಧವಾರದಿಂದ ಪ್ರತಿ ದಿನ ಸಂಜೆ 5 ಗಂಟೆಗೆ ಪ್ಯಾಸೆಂಜರ್‌ ರೈಲು ಸೇವೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 14:08 IST
Last Updated 7 ಡಿಸೆಂಬರ್ 2020, 14:08 IST
ಚಾಮರಾಜನಗರ ರೈಲು ನಿಲ್ದಾಣಕ್ಕೆ ಸೋಮವಾರ ಬಂದ ತಿರುಪತಿ ಎಕ್ಸ್‌ಪ್ರೆಸ್‌ ರೈಲು (ಎಡ ಚಿತ್ರ). ಮೊದಲ ದಿನ ಪ್ರಯಾಣಿಕರಿಲ್ಲದೆ ನಿಲ್ದಾಣ ಖಾಲಿ ಖಾಲಿಯಾಗಿತ್ತು
ಚಾಮರಾಜನಗರ ರೈಲು ನಿಲ್ದಾಣಕ್ಕೆ ಸೋಮವಾರ ಬಂದ ತಿರುಪತಿ ಎಕ್ಸ್‌ಪ್ರೆಸ್‌ ರೈಲು (ಎಡ ಚಿತ್ರ). ಮೊದಲ ದಿನ ಪ್ರಯಾಣಿಕರಿಲ್ಲದೆ ನಿಲ್ದಾಣ ಖಾಲಿ ಖಾಲಿಯಾಗಿತ್ತು   

ಚಾಮರಾಜನಗರ: ನಗರದಿಂದ ಪ್ರತಿದಿನ ತಿರುಪತಿಗೆ ಸಂಚರಿಸುವ ತಿರುಪತಿ ಎಕ್ಸ್‌ಪ್ರೆಸ್‌ ರೈಲು ಒಂಬತ್ತು ತಿಂಗಳ ಬಳಿಕ ಸೋಮವಾರ ಸಂಚಾರ ಆರಂಭಿಸಿತು.

ಸದ್ಯ, ಟಿಕೆಟ್‌ ಕಾಯ್ದಿರಿಸಿದವರಿಗೆ ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ. ಸೋಮವಾರ ನಗರದಿಂದ ಒಬ್ಬರು ಮಾತ್ರ ಟಿಕೆಟ್‌ ಕಾಯ್ದಿರಿಸಿದ್ದರು. ಆದರೆ, ಅವರು ಕೂಡ ಬಂದಿರಲಿಲ್ಲ. ಇದೇ ರೈಲು ಮೈಸೂರಿನಿಂದ ನಗರಕ್ಕೆ ಬರುವಾಗ ಮೂವರು ಪ್ರಯಾಣಿಕರಿದ್ದರು.

ವಿಶೇಷ ಎಕ್ಸ್‌ಪ್ರೆಸ್‌ ರೈಲು ಆಗಿರುವುದರಿಂದ ಪ್ರಯಾಣ ದರವೂ ಹೆಚ್ಚಿದೆ. ಸಾಮಾನ್ಯವಾಗಿ ಎಕ್ಸ್‌ಪ್ರೆಸ್‌ ರೈಲಿಗೆ ನಗರದಿಂದ ಮೈಸೂರಿಗೆ ₹40 ಟಿಕೆಟ್ ದರ ಇದೆ. ಈ ಹತ್ತು ದಿನಗಳ ಕಾಲ, ಈ ರೈಲಿನಲ್ಲಿ ಸಂಚರಿಸಬೇಕಾದರೆ ₹70‌ ತೆರಬೇಕು.

ADVERTISEMENT

‘ಪ್ರಾಯೋಗಿಕವಾಗಿ 10 ದಿನಗಳ ಕಾಲ ರೈಲು ಸಂಚರಿಸಲಿದೆ. ನಂತರ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಸೇವೆ ಮುಂದುವರಿಯುವ ಸಾಧ್ಯತೆ ಇದೆ’ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದರು.

ರೈಲು‌ ಪ್ರತಿ ದಿನ ಮಧ್ಯಾಹ್ನ 3.10ಕ್ಕೆ ನಗರದಿಂದ ಹೊರಡುತ್ತದೆ. 2.40ರವರೆಗೂ ಟಿಕೆಟ್‌ ಕಾಯ್ದಿರಿಸಲು ಅವಕಾಶ ಇದೆ ಎಂದು ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದರು.

ಈ ಮಧ್ಯೆ, ಬುಧವಾರದಿಂದ ಪ‍್ರತಿ ದಿನ ಸಂಜೆ 5 ಗಂಟೆಗೆ ಮೈಸೂರಿಗೆ ಪ್ಯಾಸೆಂಜರ್‌ ರೈಲು ಸಂಚರಿಸಲಿದೆ. 18ರವರೆಗೆ ಈ ಸಂಚಾರ ಇರಲಿದೆ . ಟಿಕೆಟ್‌ ದರ ಈ ಹಿಂದಿನಂತೆ (₹20) ಇರಲಿದೆ. ಆದರೆ, ಮಕ್ಕಳು, ಹಿರಿಯ ನಾಗರಿಕರಿಗೆ ರಿಯಾಯಿತಿ ದರ ಇರಲಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

ಬೆಳಗಿನ ರೈಲು ಇಲ್ಲ:ನಗರದಿಂದ ಪ್ರತಿ ದಿನ ಬೆಳಿಗ್ಗೆ 7.10ಕ್ಕೆ ಮೈಸೂರಿಗೆ ಪ್ಯಾಸೆಂಜರ್‌ ರೈಲು ಸಂಚರಿಸುತ್ತಿತ್ತು. ಈ ರೈಲು ಇನ್ನೂ ಪ್ರಯಾಣ ಆರಂಭಿಸಿಲ್ಲ. ಹಾಗಾಗಿ, ಬೆಳಗಿನ ಹೊತ್ತು ಮೈಸೂರಿಗೆ ತೆರಳಲು ರೈಲನ್ನೇ ನಂಬಿದ್ದವರು ಇನ್ನಷ್ಟು ಸಮಯ ಕಾಯಬೇಕಾಗಿದೆ.

ಜಿಲ್ಲೆಯಿಂದ ಪ್ರತಿ ದಿನ 4,000ದಿಂದ 5,000 ಮಂದಿ ಈ ರೈಲಿನಲ್ಲಿ ಮೈಸೂರಿಗೆ ಸಂಚರಿಸುತ್ತಿದ್ದರು. ಮೈಸೂರಿಗೆ ಗಾರೆ ಕೆಲಸ ಸೇರಿದಂತೆ ಇತರೆ ಉದ್ಯೋಗಗಳಿಗೆ ಹೋಗುವವರು ರೈಲನ್ನೇ ಅವಲಂಬಿಸಿದ್ದರು. ಆದರೆ, ಲಾಕ್‌ಡೌನ್‌ ನಂತರ ಸ್ಥಗಿತಗೊಂಡಿದ್ದ ರೈಲು ಸಂಚರಾ ಅನ್‌ಲಾಕ್‌ ಅವಧಿಯಲ್ಲೂ ಆರಂಭವಾಗದೇ ಇರುವುದರಿಂದ ಪ್ರತಿ ದಿನ ಪ್ರಯಾಣಿಸುತ್ತಿದ್ದವರು ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.