ಗುಂಡ್ಲುಪೇಟೆ ತಾಲ್ಲೂಕಿನ ಚನ್ನಮಲ್ಲೀಪುರ ಗ್ರಾಮದ ಹುಲಿ ಕಾಣಿಸಿಕೊಂಡ ಜಮೀನಿಗೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದರು
ಗುಂಡ್ಲುಪೇಟೆ: ತಾಲ್ಲೂಕಿನ ಚನ್ನಮಲ್ಲೀಪುರ ಗ್ರಾಮದ ಹೊರ ವಲಯದಲ್ಲಿ ರೈತರೊಬ್ಬರ ಜಮೀನಿನಲ್ಲಿ ಭಾನುವಾರ ಬೆಳಿಗ್ಗೆ ಹುಲಿ ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ನೌಕರರಿಗೆ ರೈತರು ದಿಗ್ಭಂಧನ ಹಾಕಿದರು.
ಕಗ್ಗಳದಹುಂಡಿ ಸಂತೋಷ್ ಅವರಿಗೆ ಸೇರಿದ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿತು. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಕಾಡಂದಿಯನ್ನು ಬೇಟಿಯಾಡಿ ತಿಂದಿದ್ದ ಹುಲಿ ನಮ್ಮ ಶಬ್ದ ಕೇಳಿ ಮುಂದೆ ಹೋಯಿತು. ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನಾಲ್ಕು ಮಂದಿ ನೌಕರರು ಬರಿಗೈನಲ್ಲಿ ಸ್ಥಳಕ್ಕೆ ಆಗಮಿಸಿದರು.
ಪಟಾಕಿ ಸಿಡಿಸಿ ಹುಲಿಯನ್ನು ಓಡಿಸುವ ಪ್ರಯತ್ನ ಬೇಡ ಎಂದು ಹೇಳಿದ್ದಲ್ಲದೇ ಮೇಲಾಧಿಕಾರಿಗಳನ್ನು ಕರೆಸುವಂತೆ ಒತ್ತಾಯಿಸಿದೆವು. ಆದರೆ ವಲಯ ಅರಣ್ಯಾಧಿಕಾರಿ ಕೇಂದ್ರ ಸ್ಥಾನದಲ್ಲಿ ಇಲ್ಲ. ಎಸ್‍ಟಿಪಿಎಫ್ ಸಿಬ್ಬಂದಿ ಕ್ರೀಡಾಕೂಟಕ್ಕೆ ಹೋಗಿದ್ದಾರೆ. ನಾವೇನು ಮಾಡಲಾಗದು ಎಂದು ಸ್ಥಳಕ್ಕೆ ತೆರಳಿದ್ದ ನೌಕರರು ವಿವರಣೆ ನೀಡಿದರು. ಈ ಹಿನ್ನೆಲೆಯಲ್ಲಿ ನೌಕರರಿಗೆ ದಿಗ್ಬಂಧನ ವಿಧಿಸಿ ಆಕ್ರೋಶ ವ್ಯಕ್ತಪಡಿಸಿದೆವು ಎಂದು ಸ್ಥಳೀಯರು ತಿಳಿಸಿದರು.
ಮಧ್ಯಾಹ್ನವಾದರೂ ಯಾವುದೇ ಅಧಿಕಾರಿ ಸ್ಥಳಕ್ಕೆ ಬರಲಿಲ್ಲ. ನಂತರ ಎಸ್‍ಟಿಪಿಎಫ್ ಸಿಬ್ಬಂದಿಯೊಬ್ಬರು ಡ್ರೋನ್ ಮೂಲಕ ಸ್ಥಳದಲ್ಲಿದ್ದ ನೌಕರರ ಸಹಕಾರದಲ್ಲಿ ಹುಲಿ ಇರುವಿಕೆ ಪರಿಶೀಲಿಸಿದರು. ನಂತರ ಹೆಜ್ಜೆ ಗುರುತಿನ ಜಾಡು ಹಿಡಿದು ಹೋದಾಗ ಹುಲಿ ಅಲ್ಲಿಂದ ತೆರಳಿರುವುದನ್ನು ಧೃಡವಾಯಿತು ಎಂದರು.
ನಮ್ಮ ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಸಂಚರಿಸುವ ಕಾರಣ ಕೃಷಿ ಕಾರ್ಯಕ್ಕೆ ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರು ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಇದರಿಂದ ಬೆಳೆದ ಬೆಳೆ ಕೊಯ್ಲು ಅಥವಾ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ತೋಟಗಳಲ್ಲಿ ವಾಸಿಸುವರು ಜಾನುವಾರುಗಳನ್ನು ರಕ್ಷಿಸಲು ಜೀವ ಪಣಕ್ಕಿಡಬೇಕಾಗಿದೆ. ರಾತ್ರಿ ವೇಳೆ ಡೇರಿಗೆ ಹಾಲು ಕೊಡಲು ಹೋಗುವುದಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಬೋನ್ ಇರಿಸಿ ಮತ್ತು ಸಾಕಾನೆಗಳನ್ನು ಕರೆಸುವ ಮೂಲಕ ಹುಲಿ ಸೆರೆ ಹಿಡಿಯಬೇಕು ಎಂದು ಗ್ರಾಮದ ಸಂತೋಷ್, ಸಿದ್ದರಾಜು, ಮಹದೇವಪ್ಪ, ನಾಗರಾಜು, ಮಂಜುನಾಥ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.