ADVERTISEMENT

ಗುಂಡ್ಲುಪೇಟೆ | ಹುಲಿ ಸೆರೆಗೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:18 IST
Last Updated 11 ಸೆಪ್ಟೆಂಬರ್ 2025, 5:18 IST
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯ ಹೆಗ್ಗವಾಡಿ ಪ್ರದೇಶದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಯಿತು
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯ ಹೆಗ್ಗವಾಡಿ ಪ್ರದೇಶದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಯಿತು   

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯ ಹೆಗ್ಗವಾಡಿ ಪ್ರದೇಶದಲ್ಲಿ ಕಾದಾಟ ನಡೆಸಿದ್ದ ಮತ್ತೊಂದು ಹುಲಿ ಸೆರೆಗೆ ಅರಣ್ಯ ಇಲಾಖೆಯು ರೋಹಿತ ಮತ್ತು ಪಾರ್ಥಸಾರಥಿ ಆನೆಗಳನ್ನು ಬಳಸಿಕೊಂಡು ಕೂಂಬಿಂಗ್ ಆರಂಭಿಸಿದೆ. ಆದರೆ 2ನೇ ದಿನ ಹುಲಿ ಸುಳಿವು ಸಿಕ್ಕಿಲ್ಲ.

ತಾಲ್ಲೂಕಿನ ಕುಂದಕೆರೆ ಗ್ರಾಮದ ರೈತ ಮಹದೇವ್ ಅವರ ಜಮೀನಿನ ಬಳಿ ನಡೆದ ಕಾದಾಟದಲ್ಲಿ ಒಂದು ಹುಲಿ ಗಾಯಗೊಂಡರೆ ಮತ್ತೊಂದು ಜನರನ್ನು ನೋಡಿ ಅಲ್ಲಿಂದ ಓಡಿ ಹೋಗಿತ್ತು. ಹೀಗಾಗಿ ಈ ಭಾಗದ ಗ್ರಾಮಸ್ಥರ ಒತ್ತಾಯದಂತೆ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ಚಾಲನೆ ನೀಡಿದ್ದರು.

ರಾಂಪುರ ಸಾಕಾನೆ ಶಿಬಿರದ ರೋಹಿತ ಮತ್ತು ಪಾರ್ಥಸಾರಥಿ ಆನೆಗಳನ್ನು ಬಳಸಿಕೊಂಡು ಶುಕ್ರವಾರ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಸುರೇಶ್, ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ, ಬಂಡೀಪುರ ವೈದ್ಯಾಧಿಕಾರಿ ಮಿರ್ಜಾ ವಾಸೀಂ ಮತ್ತು ವಿಶೇಷ ಹುಲಿ ಸಂರಕ್ಷಣಾ ದಳದ ನೌಕರರು ಸೇರಿ 40 ತಂಡವು ಕುನ್ನಮುಟ್ಟಿ ಗುಡ್ಡ ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಶನಿವಾರವೂ ಬೆಳಿಗ್ಗೆಯಿಂದಲೇ ಹುಲಿ ಸೆರೆ ಕಾರ್ಯಾಚರಣೆ ಪ್ರಾರಂಭವಾಯಿತು. ಹೆಜ್ಜೆ ಗುರುತಿನ ಜಾಡು ಹಿಡಿದು ಗುಡ್ಡದ ಬಹುತೇಕ ಕಡೆಗಳಲ್ಲಿ ಮತ್ತು ಪೊದೆಗಳಲ್ಲಿ ಮಳೆ ನಡುವೆ ಹುಡುಕಾಟ ನಡೆಸಲಾಯಿತು. ಕ್ಯಾಮರಾ ಟ್ರ್ಯಾಪಿಂಗ್ ಮತ್ತು ಡ್ರೋನ್‌ ಸಹಾಯದಿಂದ ಹುಲಿ ಸೆರೆಗೆ ಯತ್ನಿಸಲಾಯಿತು. ಆದರೆ ಹುಲಿಯ ಯಾವುದೇ ಸುಳಿವು ದೊರೆತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.