ADVERTISEMENT

ಹುಲಿ ಸಾವು ಪ್ರಕರಣ ಮರುಕಳಿಸದಿರಲಿ: ಈಶ್ವರ ಖಂಡ್ರೆ

ಅರಣ್ಯ ಸಚಿವರ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 6:38 IST
Last Updated 3 ನವೆಂಬರ್ 2025, 6:38 IST
ಕೊಳ್ಳೇಗಾಲ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರನ್ನು ಕಾರ್ಯಕರ್ತರು ಸನ್ಮಾನಿಸಿದರು
ಕೊಳ್ಳೇಗಾಲ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರನ್ನು ಕಾರ್ಯಕರ್ತರು ಸನ್ಮಾನಿಸಿದರು   

ಕೊಳ್ಳೇಗಾಲ: ಮಲೈ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳು ಸಾವನ್ನಪ್ಪಿದ ಪ್ರಕರಣದಲ್ಲಿ ಉನ್ನತಮಟ್ಟದ ತಂಡವನ್ನು ರಚಿಸಿ ತನಿಖೆಯನ್ನು ನಡೆಸಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯ ಆಧಾರದ ಮೇಲೆ ಯಾವ ಯಾವ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೋ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಿದ್ದೇನೆ. ಇದಾದ ಮೇಲೆಯೂ ಇನ್ನೂ ತನಿಖೆ ನಡೆಯುತ್ತಿದೆ. ಹಾಗಾಗಿ ಇನ್ನು ಮುಂದೆ ಯಾವ ರಾಜ್ಯದಲ್ಲಾಗಲಿ ಅಥವಾ ಜಿಲ್ಲೆಗಳಲ್ಲಾಗಲಿ ಹುಲಿಗಳ ಸಾವು ಪ್ರಕರಣ ಮರುಕಳಿಸಬಾರದು. ವನ್ಯಜೀವಿ ಹಾಗೂ ಮಾನವ ಸಂಘರ್ಷ ನಿಂತರೆ ಮಾತ್ರ ಹುಲಿಗಳ ಸಂತತಿ ಹೆಚ್ಚಾಗುತ್ತದೆ, ಇಲ್ಲದಿದ್ದರೆ ಇಂತಹ ದುರ್ಘಟನೆಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಹಾಗಾಗಿ ಅರಣ್ಯ ಅಧಿಕಾರಿಗಳು ಅರಣ್ಯದಂಚಲಿ ಇರುವ ಗ್ರಾಮಸ್ಥರ ಜೊತೆ ವಿಶ್ವಾಸ ಇಟ್ಟುಕೊಂಡು ವನ್ಯಜೀವಿ ಸಂಘರ್ಷ ಆಗದಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆಯ ಕರ್ತವ್ಯವಾಗಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ ಅರಣ್ಯ ಇಲಾಖೆ ಸಂರಕ್ಷಣೆ ಕಾಯ್ದೆ ಬಗ್ಗೆ ಕಾಡಂಚಿನ ಗ್ರಾಮಸ್ಥರಿಗೆ ಅರಿವನ್ನು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಅರಣ್ಯದೊಳಗೆ ಸಾರ್ವಜನಿಕರಿಗೆ ಅವಕಾಶವಿಲ್ಲ ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಕುಟುಂಬಸ್ಥರನ್ನು ಹಾಗೂ ಸ್ನೇಹಿತರನ್ನು ಕರೆದುಕೊಂಡು ಹೋಗಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾನೂನು ಎಲ್ಲರಿಗೂ ಒಂದೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಒಂದು ವೇಳೆ ನಿಯಮ ಮೀರಿ ನಡೆದರೆ ಎಂಥ ದೊಡ್ಡ ಅಧಿಕಾರಿಗಳಾಗಲಿ ಅಥವಾ ಚಿಕ್ಕ ಅಧಿಕಾರಿಗಳಾಗಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ಇಂತಹ ತಪ್ಪುಗಳು ಎಲ್ಲೂ ಮರುಕಳಿಸಬಾರದು, ಹಾಗಾಗಿ ಇದಕ್ಕಾಗಿಯೇ ವಿಶೇಷ ತಂಡಗಳನ್ನು ಸಹ ರಚನೆ ಮಾಡಿದ್ದೇವೆ. ಒಂದು ವೇಳೆ ಇಂತಹ ವಿಷಯಗಳು ನಿಮ್ಮ ಗಮನಕ್ಕೂ ಬಂದರೆ ನಮಗೆ ಸಾಕ್ಷಿ ಸಮೇತ ತಿಳಿಸಿ ಆಗ ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹನೂರು ಶಾಸಕ ಮಂಜುನಾಥ್, ನಗರ ಸಭೆ ಸದಸ್ಯ ಮಂಜುನಾಥ್, ಸ್ವಾಮಿ ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂಡ ಚೇತನ್ ದೊರೆರಾಜ್, ಪ್ರಭುಸ್ವಾಮಿ, ರಾಜು, ರಮೇಶ್ ಇದ್ದರು.

Highlights - ಇಲಾಖೆ ಅಧಿಕಾರಿಗಳೂ ನಿಯಮ ಪಾಲಿಸಬೇಕು ನಿಯಲ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT