ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಗ್ರಾಮದ ಬಳಿ ಚಿರತೆ ಕಳೇಬರ ಪತ್ತೆಯಾಗಿದೆ
ಚಾಮರಾಜನಗರ: ‘ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಶಂಕಾಸ್ಪದವಾಗಿ ಮೃತಪಟ್ಟಿದ್ದ ಐದು ಹುಲಿಗಳ ದೇಹದಲ್ಲಿ ‘ಕಾರ್ಬೋಫ್ಯುರಾನ್’ ಕೀಟನಾಶಕ ಪತ್ತೆಯಾಗಿದೆ’ ಎಂದು ಉನ್ನತ ಮಟ್ಟದ ತನಿಖಾ ಸಮಿತಿ ಸದಸ್ಯ, ಸಿಸಿಎಫ್ ಟಿ.ಹೀರಾಲಾಲ್ ತಿಳಿಸಿದರು.
‘ಹುಲಿಗಳ ಸಾವಿಗೆ ಕಾರಣ ತಿಳಿಯಲು ಅಂಗಾಗಗಳ ಮಾದರಿಗಳನ್ನು ಎಫ್‌ಎಸ್‌ಎಲ್ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕಾರ್ಬೋಫ್ಯುರಾನ್ ವಿಷದಿಂದ ಹುಲಿಗಳು ಮೃತಪಟ್ಟಿರುವುದು ದೃಢಪಟ್ಟಿದೆ’ ಎಂದು ಮಾಹಿತಿ ನೀಡಿದರು.
‘ಕಿಡಿಗೇಡಿಗಳು ಪ್ರತೀಕಾರಕ್ಕಾಗಿ ಜಾನುವಾರುಗಳ ಕಳೇಬರದ ಮೇಲೆ ವಾಸನೆ ರಹಿತವಾದ ಕಾರ್ಬೋಫ್ಯುರನ್ ವಿಷ ಸಿಂಪಡಿಸಿದ್ದರು. ಈ ಬಗ್ಗೆ ಸಮಿತಿಯು ಶೀಘ್ರ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ’ ಎಂದು ಅವರು ಹೇಳಿದರು.
ಎರಡು ಚಿರತೆಗಳ ಕಳೇಬರ ಪತ್ತೆ
ಚನ್ನರಾಯಪಟ್ಟಣ (ಹಾಸನ): ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದ ಬಳಿ ಎರಡು ಚಿರತೆಗಳ ಕಳೇಬರ ಶನಿವಾರ ಪತ್ತೆಯಾಗಿದೆ.
ಗ್ರಾಮದ ಬಳಿ ರೈಲು ಹಳಿಯಿಂದ ಒಂದು ಮೀಟರ್ ದೂರದಲ್ಲಿ ಅಂದಾಜು ಮೂರೂವರೆ ವರ್ಷದ ಹೆಣ್ಣು ಚಿರತೆ ಕಳೇಬರ, ನಂತರದ 30 ಮೀಟರ್ ದೂರದಲ್ಲಿ ಒಂದೂವರೆ ವರ್ಷದ ಗಂಡು ಚಿರತೆ ಕಳೇಬರ ಪತ್ತೆಯಾಗಿದೆ.
ಚಿರತೆಗಳಿಗೆ ತಲೆ, ಭುಜದ ಭಾಗದಲ್ಲಿ ಗಾಯವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಂಗಾಂಗದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಶಂಕಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.