ADVERTISEMENT

ಹುಲಿಗಳ ಸಾವು: ತನಿಖೆಗೆ ತಜ್ಞರಲ್ಲದವರ ನೇಮಕ- ಆರೋಪ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 4:17 IST
Last Updated 17 ಜುಲೈ 2025, 4:17 IST
ಪತ್ತೆಯಾದ ಹುಲಿಗಳ ಕಳೇಬರ (ಸಂಗ್ರಹ ಚಿತ್ರ)
ಪತ್ತೆಯಾದ ಹುಲಿಗಳ ಕಳೇಬರ (ಸಂಗ್ರಹ ಚಿತ್ರ)   

ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲದಯಲ್ಲಿ ಈಚೆಗೆ ಸಂಭವಿಸಿದ ಐದು ಹುಲಿಗಳ ಅಸಹಜ ಸಾವಿನ ಪ್ರಕರಣದ ತನಿಖೆ ನಡೆಸಲು ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಗೆ ‘ತಜ್ಞತೆ’ ಇಲ್ಲದವರಿಗೆ ನೇಮಿಸಿ ಪ್ರಾಮಾಣಿಕ ಅಧಿಕಾರಿಯನ್ನು ಸಮಿತಿಯಿಂದ ಕಿತ್ತು ಹಾಕಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವನ್ಯಜೀವಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎನ್‌ಜಿಒ ಸಂಸ್ಥೆಯ ಪ್ರಚಾರಪ್ರಿಯ ವಿಜ್ಞಾನಿಯನ್ನು ಸಮಿತಿಯಲ್ಲಿ ನೇಮಿಸಿಕೊಂಡು ನಿಷ್ಠಾವಂತ ಐಎಫ್‌ಎಸ್ ಅಧಿಕಾರಿಯನ್ನು ಸಮಿತಿಯಿಂದ ಕೈಬಿಡಲಾಗಿದೆ. ತನಿಖೆಯನ್ನು ಹಳ್ಳ ಹಿಡಿಸಲು ಪೂರ್ವ ತಯಾರಿ ಮಾಡಿಕೊಂಡು ತಿಪ್ಪೆ ಸಾರಿಸುವ ವರದಿ ನೀಡಲಾಗಿದೆ. ಸಮಿತಿ ನೀಡಿರುವ ವರದಿಯ ಮೇಲೆ ನಂಬಿಕೆ ಇಲ್ಲವಾಗಿದ್ದು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ವರದಿಯ ಪ್ರತಿ ಸೋರಿಕೆಯಾಗದಂತೆ ನಿಗಾ ಇಡಲಾಗಿದೆ ಎಂಬ ಮಾಹಿತಿ ಬರುತ್ತಿದೆ. ಅಪೂರ್ಣ ಮತ್ತು ಅರ್ಧಸತ್ಯದಿಂದ ಕೂಡಿದ ವರದಿಯಿಂದ ವಿಶಪ್ರಾಶನದಿಂದ ಮೃತಪಟ್ಟ ಹುಲಿಗಳಿಗಾಗಲಿ, ವನ್ಯಜೀವಿಗಳಿಗಾಗಲಿ, ಸ್ವತಃ ಮಲೆಮಹದೇಶ್ವರ ಸ್ವಾಮಿಗೂ ನ್ಯಾಯ ಸಿಗುವುದು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ADVERTISEMENT

ಹುಲಿಸಾವಿನ ಬಗ್ಗೆ ಅರಣ್ಯ ಇಲಾಖೆಯ ಕಾರ್ಯ ವೈಖರಿಯನ್ನು ಟೀಕಿಸಿದವರು ಉನ್ನತ ಮಟ್ಟದ ತನಿಖಾ ಸಮಿತಿಯಲ್ಲಿ ತೇಪೆ ಹಚ್ಚುವ ಕಾರ್ಯ ಮಾಡಿದ್ದು ವಿಪರ್ಯಾಸ. ಹುಲಿಗಳ ಸಾವು ಪೂರ್ವನಿಯೋಜಿತ ಕೃತ್ಯದಂತೆ ಕಂಡು ಬರುತ್ತಿದೆ. ಅರಣ್ಯದೊಳಗೆ ವ್ಯವಸ್ಥಿತ ಕಳ್ಳಬೇಟೆ, ಅಂಗಾಂಗ ಮಾರಾಟ ಜಾಲ ಸಕ್ರಿಯವಾಗಿರುವ ವಿಚಾರಗಳನ್ನು ಉನ್ನತಮಟ್ಟದ ಸಮಿತಿಯ ವರದಿಯಲ್ಲಿ ಪ್ರಸ್ತಾಪಿಸಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.

ಹುಲಿಗಳು ಮರಿ ಹಾಕಿರುವುದು ಗೊತ್ತಿದ್ದರೂ ಸಂರಕ್ಷಿಸುವ ಕೆಲಸಕ್ಕೆ ಮುಂದಾಗದಿರುವುದು ಖಂಡನೀಯ, ಹುಲಿಗಳ ಸಾವು ಕೇವಲ ದನ ಹಿಡಿದಿದಕ್ಕೆ ವಿಷ ಹಾಕಲಾಗಿದೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ, ಹಿಂದೆಯೂ ಹುಲಿ ದಾಳಿಗೆ ದನಗಳು ಸತ್ತರೂ ವಿಷ ಹಾಕಿ ಕೊಲ್ಲುವಷ್ಟು ಧೈರ್ಯ, ಪಾಪದ ಕೆಲಸವನ್ನು ರೈತರು ಮಾಡಿರುವ ಉದಾಹರಣೆ ಇಲ್ಲ. ಹುಲಿ ಕೊಲ್ಲುವ ಮತ್ತು ಅಂಗಾಂಗ ಕಳ್ಳಸಾಗಣೆದಾರರ ಕೈವಾಡವನ್ನು ತಳ್ಳಿ ಹಾಕಲಾಗುವುದಿಲ್ಲ. ಪ್ರಕರಣವನ್ನು ಬೇರೆ ಆಯಾಮಗಳಿಂದ ನೋಡಬೇಕಾದ ಅಗತ್ಯವಿದ್ದು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.