ADVERTISEMENT

ಚಾಮರಾಜನಗರ | ಹುಲಿಗಳ ಸಾವು ಹೆಚ್ಚಳ: ಆತಂಕ

6 ತಿಂಗಳಲ್ಲಿ 10 ಹುಲಿಗಳ ಮರಣ; 6 ಅಸಹಜ, 4 ಸಹಜ ಸಾವು

ಬಾಲಚಂದ್ರ ಎಚ್.
ಬಿ.ಬಸವರಾಜು
Published 3 ಅಕ್ಟೋಬರ್ 2025, 23:30 IST
Last Updated 3 ಅಕ್ಟೋಬರ್ 2025, 23:30 IST
   

ಚಾಮರಾಜನಗರ: ರಾಜ್ಯದಲ್ಲೇ ಅತ್ಯಧಿಕ ಹುಲಿಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಹುಲಿಗಳ ಸರಣಿ ಸಾವು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ, ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ 10 ಹುಲಿ ಮೃತಪಟ್ಟಿವೆ. ಇವುಗಳಲ್ಲಿ 4 ವಯಸ್ಕ ಹುಲಿಗಳಾದರೆ 6 ಮರಿ ಹುಲಿಗಳು. ಈ ಪೈಕಿ 6 ಹುಲಿಗಳು ಅಸಹಜವಾಗಿ ಮರಣ ಹೊಂದಿವೆ.

ನಿಲ್ಲದ ಮಾನವ ಪ್ರಾಣಿ ಸಂಘರ್ಷ: 

ADVERTISEMENT

ಮಾನವ–ಪ್ರಾಣಿ ಸಂಘರ್ಷ ಹಾಗೂ ಹೆಚ್ಚುತ್ತಿರುವ ಬೇಟೆ ಪ್ರಕರಣಗಳು ಕಾರಣವಾಗಿವೆ. ಕಾಡಂಚಿನ ರೈತರ ಜಾನುವಾರು, ಬೆಳೆಗಳ ಮೇಲೆ ಕಾಡುಪ್ರಾಣಿಗಳ ದಾಳಿ, ಬೆಳೆನಷ್ಟ ಪರಿಹಾರ ವಿತರಣೆ ವಿಳಂಬ, ವನ್ಯಜೀವಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರಾಸಕ್ತಿ ಸೇರಿದಂತೆ ಹಲವು ಕಾರಣಗಳು ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ಕಂದಕ ಹೆಚ್ಚಿಸುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.

ಹುಲಿಗಳ ಸಾವಿನ ಹೆಜ್ಜೆ:

ಏ.29ರಂದು ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಶ್ರೀಕಂಠಪುರ ಗುಡ್ಡದಲ್ಲಿ 8–9 ವರ್ಷದ ಗಂಡು ಹುಲಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹುಲಿ ವಯೋಸಹಜವಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.

ಜೂನ್ 26ರಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಬಳಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳನ್ನು ವಿಷವಿಕ್ಕಿ ಹತ್ಯೆ ಮಾಡಲಾಗಿತ್ತು. ಕಾಡಿನೊಳಗೆ ಮೇಯಲು ಬಂದ ದನವನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಐದು ಹುಲಿಗಳಿಗೆ ವಿಷಹಾಕಲಾಗಿತ್ತು. ಕೃತ್ಯ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿಲಾಯಿತಾದರೂ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಜೂನ್ 27ರಂದು ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ಅರಣ್ಯದಲ್ಲಿ 4ರಿಂದ 5 ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆಯಾಗಿತ್ತು.  ಆ.12ರಂದು ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಗಸ್ತಿನ ಹೊಳೆ ವ್ಯಾಪ್ತಿಯ ಮುರದಟ್ಟಿಯ ಕಿರುಬನಕಲ್ಲು ಗುಡ್ಡದಲ್ಲಿ ಎರಡು ಹುಲಿ ಮರಿಗಳು ಮೃತಪಟ್ಟಿದ್ದವು.

15 ದಿನಗಳ ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟು ಹಸಿವಿನಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈಗ, ಗುರುವಾರ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿಯ ಭೀಕರ ಹತ್ಯೆ ನಡೆದಿದೆ.

ಹುಲಿ ಆವಾಸಕ್ಕೆ ಯೋಗ್ಯ ತಾಣ: ಸತ್ಯಮಂಗಲ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ವನ್ಯಧಾಮ ಹಾಗೂ ಬರಗೂರು ಮೀಸಲು ಅರಣ್ಯದ ಜೊತೆಗೆ ಜೊತೆಗೆ ಗಡಿಹಂಚಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮ ಹುಲಿಗಳ ಆವಾಸಕ್ಕೆ ಯೋಗ್ಯವಾದ ನೆಲೆಯಾಗಿದೆ. ಮಾನವ ಪ್ರಾಣಿ ಸಂಘರ್ಷದಿಂದಾಗಿ ಇಲ್ಲಿ ಹುಲಿಗಳ ಮಾರಣಹೋಮ ನಡೆಯುತ್ತಿರುವುದು ಪ್ರಾಣಿಪ್ರಿಯರಲ್ಲಿ ಆತಂಕ ಹುಟ್ಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.