ADVERTISEMENT

ಚಾಮರಾಜನಗರ: ಟಿಂಕರಿಂಗ್‌ ಪ್ರಯೋಗಾಲಯ ಉದ್ಘಾಟನೆ

ದೀನಬಂಧು ಶಾಲೆಯಲ್ಲಿ ವಿಜ್ಞಾನ ದಿನ, ವಿಜ್ಞಾನ ಉದ್ಯಾನ, ಕಲಿಕಾ ವಿಧಾನದ ಬಗ್ಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:41 IST
Last Updated 30 ಆಗಸ್ಟ್ 2021, 16:41 IST
ಟಿಂಕರಿಂಗ್‌ ಪ್ರಯೋಗಾಲಯದಲ್ಲಿನ ಉಪಕರಣಗಳನ್ನು ನೋಟು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್‌ ಹಾಗೂ ಇತರ ಅಧಿಕಾರಿಗಳು ಪರಿಶೀಲಿಸಿದರು
ಟಿಂಕರಿಂಗ್‌ ಪ್ರಯೋಗಾಲಯದಲ್ಲಿನ ಉಪಕರಣಗಳನ್ನು ನೋಟು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್‌ ಹಾಗೂ ಇತರ ಅಧಿಕಾರಿಗಳು ಪರಿಶೀಲಿಸಿದರು   

ಚಾಮರಾಜನಗರ: ನಗರದ ದೀನಬಂಧು ಶಾಲೆಯಲ್ಲಿ ಸೋಮವಾರ ವಿಜ್ಞಾನ ದಿನ ಆಚರಿಸಲಾಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಆಗಸ್ಟ್‌ 30 ಅನ್ನು ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡುವಂತಹ ಟಿಂಕರಿಂಗ್‌ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು. ಮೈಸೂರಿನ ಬ್ಯಾಂಕ್‌ ನೋಟು ಕಾಗದ ಕಾರ್ಖಾನೆಯು 2020–21ನೇ ಸಾಲಿನ ಕಾರ್ಪೊರೇಟ್‌ ಸಾಮಾಜಿಕ ಹೊಣೆ (ಸಿಎಸ್‌ಆರ್‌) ನಿಧಿಯಿಂದ ಪ್ರಯೋಗಾಲಯ ಸ್ಥಾಪನೆಗೆ ಅನುದಾನ ನೀಡಿದೆ.

ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕ್‌ ನೋಟು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ವಿಶ್ವನಾಥನ್‌ ಅವರು ಪ್ರಯೋಗಾಲಯವನ್ನು ಉದ್ಘಾಟಿಸಿದರು.

ADVERTISEMENT

ಪ್ರಯೋಗಾಲಯದಲ್ಲಿ ತ್ರಿಡಿ ಪ್ರಿಂಟರ್‌, ವಿವಿಧ ಟೂಲ್‌ ಕಿಟ್‌ಗಳು, ರೋಬೊಟ್‌ ತಯಾರಿಕಾ ತಂತ್ರಜ್ಞಾನ ಸಲಕರಣೆಗಳು, ಕಂಪ್ಯೂಟರ್‌ಗಳು ಇವೆ. ವಿದ್ಯಾರ್ಥಿಗಳಿಗೆ ಅವರಿಗೆ ಇಷ್ಟವಾದ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು, ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ಈ ಪ್ರಯೋಗಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆರು ಹಾಗೂ ಅದಕ್ಕಿಂತ ಮೇಲಿನ ತರಗತಿಗಳವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಮೀಸಲಾಗಿದೆ. ಅಂದಾಜು ₹6 ಲಕ್ಷ ವೆಚ್ಚದಲ್ಲಿ ಇದನ್ನು ಸ್ಥಾಪಿಸಲಾಗಿದೆ.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕೆ.ಜಿ.ವಿಶ್ವನಾಥನ್‌ ಹಾಗೂ ನೋಟು ಕಾಗದ ಕಾರ್ಖಾನೆಯ ಉನ್ನತ ಅಧಿಕಾರಿಗಳು ಸಂಸ್ಥೆ ಸ್ಥಾಪಿಸಿರುವ ವಿಜ್ಞಾನ ಉದ್ಯಾನ, ಕರಕುಶಲ ವಸ್ತುಗಳ ತಯಾರಿಕಾ ಘಟಕ ಹಾಗೂ ಶಾಲೆಯ ವಿವಿಧ ತರಗತಿಗಳಿಗೆ ಭೇಟಿ ನೀಡಿ ಶೈಕ್ಷಣಿಕ ವಾತಾವರಣವನ್ನು ಪರಿಶೀಲಿಸಿ ಮೆಚ್ಚುಗೆ ಸೂಚಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವನಾಥನ್‌ ಅವರು, ಚಾಮರಾಜನಗರದಂತಹ ಸ್ಥಳದಲ್ಲಿ ಜಯದೇವ ಹಾಗೂ ತಂಡದ ಪ್ರಯತ್ನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

‘ನಮ್ಮ ಸಂಸ್ಥೆಗೆ ಬಂದ ಲಾಭದಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ನೆರವಾಗುವ ಉದ್ದೇಶಕ್ಕೆ ನೀಡುತ್ತಿದ್ದೇವೆ. ದೀನಬಂಧು ಸಂಸ್ಥೆ ಅತ್ಯಂತ ಅದ್ಭುತ ಕೆಲಸಗಳನ್ನು ಮಾಡುತ್ತಿದೆ. ನೀವೆಲ್ಲ ಈ ಶಾಲೆಯ ವಿದ್ಯಾರ್ಥಿಗಳಾಗಿರುವುದಕ್ಕೆ ಅದೃಷ್ಟ ಮಾಡಿದ್ದಿರಿ. ನಗರ ಪ್ರದೇಶಗಳಲ್ಲಿ ಇಷ್ಟು ಜಾಗವೂ ಇರುವುಲ್ಲ. ಈ ರೀತಿಯ ಶಿಕ್ಷಣವೂ ಸಿಗುವುದಿಲ್ಲ. ಇನ್ನು ಮುಂದೆಯೂ ಈ ಸಂಸ್ಥೆಗೆ ನೆರವು ನೀಡುವುದಕ್ಕೆ ಪ್ರಯತ್ನ ಪಡುತ್ತೇವೆ’ ಎಂದು ಹೇಳಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್‌.ಜಯದೇವ ಅವರು ಮಾತನಾಡಿ, ಸಿಎಸ್‌ಆರ್‌ ನಿಧಿಯಿಂದ ಸಂಸ್ಥೆಗೆ ಅನುದಾನ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

‘ಚಾಮರಾಜನಗರ ಜಿಲ್ಲೆಯು ರಾಜ್ಯದಲ್ಲಿ ಎರಡನೇ ಹಿಂದುಳಿದ ಭಾಗವಾಗಿದ್ದು, ಸಾಕಷ್ಟು ಅಭಿವೃದ್ಧಿ ಮಾಡಬೇಕಾದ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಬ್ಯಾಂಕ್‌ ನೋಟು ಕಾಗದ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾದ ಧರಣಿಕುಮಾರ್‌, ಅನಂತಹೆಗಡೆ, ಅಭಯಕುಮಾರ ಮಜಾಪಾತ್ರೊ, ಕಂಪನಿ ಸೆಕ್ರೆಟರಿ ಲಕ್ಷ್ಮೀಶಬಾಬು, ವ್ಯವಸ್ಥಾಪಕ ವಾದಿರಾಜ್‌, ಉಪ ವ್ಯವಸ್ಥಾಪಕ ಗೋಪಾಲಕೃಷ್ಣ, ದೀನ‌ಬಂಧು ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ, ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.