ಪ್ರಜಾವಾಣಿ ವಾರ್ತೆ
ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ ಪಂಚಾಯಿತಿ ವ್ಯಾಪ್ತಿಯ ಬೇವಿನತಾಳಪುರವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡುವ ಪ್ರಯುಕ್ತ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಂಬಾಕು ಮುಕ್ತ ಗ್ರಾಮವಾಗಲು ಅನುಸರಿಸಬೇಕಾದ ಮಾನದಂಡಗಳು ಅನುಷ್ಠಾನವಾಗಿರುವ ಬಗ್ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಎನ್. ಸುಂದರೇಶ್ ನೇತೃತ್ವದ ಅಧಿಕಾರಿಗಳ ತಂಡ ಮೌಲ್ಯಮಾಪನ ನಡೆಸಿತು. ಗ್ರಾಮಮಟ್ಟದ ಸಮನ್ವಯ ಸಮಿತಿ ರಚನೆ, ವಿ.ಎಚ್.ಎಸ್.ಎನ್.ಸಿ. ಸಭೆಗಳಲ್ಲಿ ತಂಬಾಕು ಸೇವನೆ ನಿಯಂತ್ರಣ ಕುರಿತು ನಡೆದ ಚರ್ಚೆ, ಗ್ರಾಮ ಸಭೆಯ ವೇಳೆ ತಂಬಾಕು ದುಷ್ಪರಿಣಾಮಗಳ ಕುರಿತು ಅರಿವು, ವಿಚಾರ ಮಂಡನೆ, ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಗ್ರಾಮಸ್ಥರ ಸರ್ವಾನುಮತದ ಒಪ್ಪಿಗೆ, ಜಾಗೃತಿ ಕಾರ್ಯಕ್ರಮಗಳು, ತಂಬಾಕು ನಿಯಂತ್ರಣ ರಾಯಭಾರಿಯ ನೇಮಕವಾಗಿರುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಗ್ರಾಮದ ಹಲವು ಸಾರ್ವಜನಿಕ ಸ್ಥಳಗಳಿಗೆ ಭೇಟಿನೀಡಿ ‘ತಂಬಾಕು ಮುಕ್ತ ವಲಯ’ ನಾಮಫಲಕಗಳ ಅಳವಡಿಕೆ, ಗ್ರಾಮದ ಪ್ರಮುಖ ದ್ವಾರಗಳಲ್ಲಿ ತಂಬಾಕು ಮುಕ್ತ ಗ್ರಾಮಕ್ಕೆ ಸ್ವಾಗತ’ ಎಂಬ ನಾಮಫಲಕ ಅಳವಡಿಕೆ, ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ತಡೆ, ತಂಬಾಕು ಉತ್ಪನ್ನಗಳ ಜಾಹೀರಾತುಗಳ ಪ್ರದರ್ಶನಕ್ಕೆ ನಿರ್ಬಂಧದಂತಹ ಅಂಶಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿದರು.
‘ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುವುದು, ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಲಾಗುವುದು, ತಂಬಾಕು ತ್ಯಜಿಸಲು ಇಚ್ಛಿಸುವ ವ್ಯಸನಿಗಳಿಗೆ ಚಿಕಿತ್ಸೆ, ಆಪ್ತ ಸಮಾಲೋಚನೆ ಹಾಗೂ ಔಷಧೋಪಚಾರ ನೀಡುವ ಮೂಲಕ ತಂಬಾಕು ತ್ಯಜಿಸುವಂತೆ ಪ್ರೇರೇಪಿಸಲಾಗುವುದು’ ಎಂದು ಡಾ.ಎಚ್.ಎನ್ ಸುಂದರೇಶ್ ತಿಳಿಸಿದರು.
‘ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪ-2003ರ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಯುವ ಸಮುದಾಯವು ತಂಬಾಕು ವ್ಯಸನಿಗಳಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರದ ತಂಬಾಕು ಮುಕ್ತ ಗ್ರಾಮದ ಮಾರ್ಗಸೂಚಿಗಳನ್ನು ಪರಿಶೀಲಿಸಲಾಗಿದೆ. ಬೇವಿನತಾಳಪುರ ಗ್ರಾಮವನ್ನು ತಂಬಾಕು ಮುಕ್ತ ಎಂದು ಘೋಷಣೆ ಮಾಡಲು ಶಿಫಾರಸು ಮಾಡಲಾಯಿತು’ ಎಂದು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ತಿಳಿಸಿದರು.
ಬಿಸಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪಲ್ಲವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಶಿವಮೂರ್ತಿ, ಚಾಮರಾಜನಗರ ಪೂರ್ವ ಪೋಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ್, ಗ್ರಾಮದ ಸರ್ಕಾರಿ ಶಾಲೆಯ ಸಹ ಶಿಕ್ಷಕ ಕೃಷ್ಣಮೂರ್ತಿ, ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ ಮೇಲ್ವಿಚಾರಕಿ ಕಸ್ತೂರಿ ತಂಡದಲ್ಲಿ ಇದ್ದರು.
Highlights - ತಂಬಾಕು ಮುಕ್ತ ಗ್ರಾಮ ಘೋಷಣೆ ಮಾನದಂಡಗಳ ಪರಿಶೀಲನೆ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಗ್ರಾಮಸ್ಥರಿಗೆ ಅರಿವು ಗ್ರಾಮದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿರ್ಬಂಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.