ಯಳಂದೂರು: ಪಟ್ಟಣದ ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿದ್ದು ಹೊಳೆ ಸಾಲಿನ ರಸ್ತೆಯಲ್ಲಿ ಕಸ ಕರಗುತ್ತಿದೆ. ಜನ, ಜಾನುವಾರು ಕಸದ ರಾಶಿಯ ನಡುವೆ ತೆರಳಬೇಕಿದೆ. ಅಪಾಯಕಾರಿ ಕಸ ಭೂಮಿಯ ಒಡಲು ಸೇರುತ್ತಿದ್ದು ಧರೆ ಬಗೆದಲ್ಲೆಲ್ಲ ಪ್ಲಾಸ್ಟಿಕ್ ತುಣುಕಗಳೇ ಕೈಸೇರುವಂತಾಗಿದೆ. ಅನುಪಯುಕ್ತ ವಸ್ತುಗಳನ್ನು ಚೀಲಗಳಲ್ಲಿ ಕಟ್ಟಿ ಬಿಸಾಡುತ್ತಿರುವ ನಾಗರಿಕರ ಪ್ರವೃತಿಯಿಂದ ಪರಿಸರ ಕಲುಷಿತವಾಗಿದ್ದು, ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
ಸುವರ್ಣವತಿ ನದಿಯ ಸಾಲು, ಬಡವಾಣೆಗಳ ಸುತ್ತಮುತ್ತ ಹಸಿ ಹಾಗೂ ಒಣ ಕಸದ ರಾಶಿಯೇ ಕಣ್ಣಿಗೆ ರಾಚುತ್ತಿದೆ. ಮಳೆ ಬಂದರಂತೂ ಕೊಳೆತು ದುರ್ವಾಸನೆ ಬೀರುತ್ತಿದ್ದು ನದಿ, ಕಾಲುವೆ ಹಾಗೂ ಕೃಷಿ ಭೂಮಿಗೆ ಸೇರಿಕೊಳ್ಳುವ ತ್ಯಾಜ್ಯ ಮಾಲಿನ್ಯಕ್ಕೆ ಇಂಬು ನೀಡುತ್ತಿದೆ. ತ್ಯಾಜ್ಯದಿಂದ ಜನ ಜಾನುವಾರುಗಳ ಆರೋಗ್ಯವೂ ಕೆಡುತ್ತಿದೆ.
ಪಟ್ಟಣದಲ್ಲಿ 11 ವಾರ್ಡ್‌ಗಳಿದ್ದು, ಹಸಿ ಮತ್ತು ಒಣ ಕಸ ಸಂಗ್ರಹಿಸಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತದೆ. ಆದರೆ, ಬಡವಾಣೆಗಳ ಸುತ್ತಲೂ ಪ್ಲಾಸ್ಟಿಕ್, ಬಟ್ಟೆ, ಸ್ಯಾನಿಟರಿ ಪ್ಯಾಡ್, ಔಷಧಗಳ ಡಬ್ಬಿ, ಶಾಂಪೂ ಪ್ಯಾಕೇಟ್‌ಗಳು, ಹೋಟೆಲ್‌ಗಳಲ್ಲಿ ಉತ್ಪತ್ತಿಯಾಗುವ ಕಸ, ಅಡುಗೆ ತರಕಾರಿ ತ್ಯಾಜ್ಯ, ಕೋಳಿ, ಪ್ರಾಣಿಗಳ ತುಪ್ಪಳ ಬಿಸಾಡಲಾಗುತ್ತಿದ್ದು ಕೊಳೆತು ಗಬ್ಬು ನಾರುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಬದಿ, ಹೊಳೆ ಅಂಚು, ಗ್ರಾಮೀಣ ರಸ್ತೆಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ನಡುವೆಯೇ ದನ, ಆಡು, ಮೇಕೆಗಳು ಆಹಾರ ಹುಡುಕುತ್ತಿದ್ದು ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.
ದಂಡ, ಎಚ್ಚರಿಕೆ: ಪಟ್ಟಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಷೇಧಿಸಲಾಗಿದ್ದರೂ ಕೆಲವರು ಕಣ್ತಪ್ಪಿಸಿ ರಸ್ತೆಯ ಬದಿಗೆ ಬಿಸಾಡುತ್ತಾರೆ. ಬೀದಿ ನಾಟಕ ಹಾಗೂ ಧ್ವನಿ ವರ್ಧಕಗಳ ಮೂಲಕ ಹಸಿಕಸ ಒಣಕಸ ಪ್ರತ್ಯೇಕಿಸಿ ಕೊಡುವಂತೆ ಜಾಗೃತಿ ಮೂಡಿಸಿದರೂ ಪೂರ್ಣ ಪ್ರಮಾಣದಲ್ಲಿ ಕಸ ನಿಯಂತ್ರಣಕ್ಕೆ ಬಂದಿಲ್ಲ. ಕೊಳ್ಳೇಗಾಲ ನಗರಸಭೆ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿದೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು.
ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ವಿರುದ್ಧ ದಂಡ ವಿಧಿಸಲಾಗುತ್ತಿದೆ. ಕಸವನ್ನು ಸುಡುವುದು, ನದಿ, ಕಾಲುವೆಗಳಿಗೆ ಹಾಕುವುದನ್ನು ತಪ್ಪಿಸಲು ಎಚ್ಚರಿಕೆ ವಹಿಸಲಾಗಿದೆ. ನಾಗರಿಕರು ಕಸವನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ನೀಡುವ ಮೂಲಕ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕರಿಸಬೇಕು ಎನ್ನುತ್ತಾರೆ ಮುಖ್ಯಾಧಿಕಾರಿ ಮಹೇಶ್ ಕುಮಾರ್.
‘ಪಾಲ್ಟಿಕ್ ಮಾಲಿನ್ಯ ಕೊನೆಗೊಳಿಸಿ’
ಧ್ಯೇಯ ‘ಭೂಮಿ ನಮಗೆ ಸೇರಿಲ್ಲ. ನಾವು ಭೂಮಿಗೆ ಸೇರಿದವರು’ ಎಂಬ ಧ್ಯೇಯದೊಂದಿಗೆ ವಿಶ್ವಸಂಸ್ಥೆಯ ಸದಸ್ಯ ದೇಶಗಳು 1970ರಿಂದ ಭೂದಿನ ಆಚರಿಸುತ್ತಿವೆ. ಹವಾಮಾನ ಬದಲಾವಣೆ ಜೀವ ವೈವಿಧ್ಯದ ನಷ್ಟ ಮಾಲಿನ್ಯ ಮತ್ತು ಅರಣ್ಯ ನಾಶ ಹೆಚ್ಚುತ್ತಿರುವ ಸವಾಲುಗಳನ್ನು ನಿಯಂತ್ರಿಸುವ ದಿಸೆಯಲ್ಲಿ ಪ್ರತಿಯೊಬ್ಬರೂ ಭೂಮಿಯ ಭವಿಷ್ಯವನ್ನು ಉತ್ತಮಪಡಿಸಬೇಕು. ಈ ದೆಸೆಯಲ್ಲಿ ‘ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸಿ’ ಎಂಬ ಧ್ಯೇಯದೊಂದಿಗೆ 2025ರ ಭೂ ದಿನ ಆಚರಣೆಗೆ ಮನ್ನಣೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.