
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಬಳಿ ಸಾಲುಗಟ್ಟಿ ನಿಂತಿರುವ ವಾಹನಗಳು
ಗುಂಡ್ಲುಪೇಟೆ: ದೀಪಾವಳಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ವಾರಾಂತ್ಯದ ರಜೆಗಳು ಒಟ್ಟಾಗಿ ಬಂದಿರುವುದರಿಂದ, ತಾಲ್ಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿವೆ.
ತಾಲ್ಲೂಕಿನಲ್ಲಿ ಹಾದುಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳು ನೆರೆಯ ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಉಭಯ ರಾಜ್ಯಗಳ ಪ್ರವಾಸಿ ತಾಣಗಳನ್ನು ವೀಕ್ಷಿಸಲು ತೆರಳುತ್ತಾರೆ.
ವಾಹನಗಳು ಎಂದಿಗಿಂತ ಐದತ್ತು ಪಟ್ಟು ಹೆಚ್ಚಾಗಿದೆ. ಗಡಿಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಹಸಿರು ಸುಂಕ ವಸೂಲಿ ಮಾಡುವ ಗೇಟ್ ಬಳಿ ಒಂದು ಕಿ.ಮೀಗೂ ಉದ್ದದವರೆಗೂ ವಾಹನಗಳು ಶುಕ್ರವಾರ ಸಾಲುಗಟ್ಟಿದ್ದವು.
ರಾಷ್ಟ್ರೀಯ ಹೆದ್ದಾರಿ 766 ಮತ್ತು 67ರಲ್ಲಿ ಮೇಲುಕಾಮನಹಳ್ಳಿ ಮತ್ತು ಮದ್ದೂರು ಚೆಕ್‍ಪೋಸ್ಟ್‌ಗಳಲ್ಲಿ ಕಾರು, ಜೀಪು ಇತರೆ ಲಘುವಾಹನಗಳಿಗೆ ₹20 ಮತ್ತು ಭಾರಿ ವಾಹನಗಳಿಂದ ₹50 ಹಸಿರು ಸುಂಕ ವಸೂಲಿ ಮಾಡಲಾಗುತ್ತಿದೆ.
‘ಸುಂಕ ವಸೂಲಿಗೆ ಆಕ್ಷೇಪವಿಲ್ಲ. ಆದರೆ, ಸಿಬ್ಬಂದಿ ಕೊರತೆಯಿಂದ ಸುಲಭವಾಗಿ ವಾಹನಗಳು ಚೆಕ್‌ಪೋಸ್ಟ್ ದಾಟಲು ಸಾದ್ಯವಾಗುತ್ತಿಲ್ಲ.
ರಜೆಗಳ ಸಂದರ್ಭ ಅರಣ್ಯ ಇಲಾಖೆ ಟಿಕೆಟ್ ವಿತರಣೆಗೆ ಪರ್ಯಾಯ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ನಿಗದಿತ ಸ್ಥಳಕ್ಕೆ ಸರಿಯಾದ ಸಮಯದಲ್ಲಿ ಮುಟ್ಟಲಾಗುವುದಿಲ್ಲ. ‘ಅರಣ್ಯ ಪ್ರದೇಶವಾಗಿರುವುದರಿಂದ ಶೌಚಕ್ಕೂ ಹೋಗಲಾಗದೆ ಸಂಕಟ ಅನುಭವಿಸ ಬೇಕಾಗುತ್ತಿದೆ’ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.
‘ರಾಷ್ಟ್ರೀಯ ಹೆದ್ದಾರಿಗಳ ಟೋಲ್‍ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಹಣ ಕಡಿತವಾಗುವಂತೆ ಇಲ್ಲಿಯೂ ಹಸಿರು ತೆರಿಗೆ ವಸೂಲಿ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ’ ಎನ್ನುತ್ತಾರೆ ಪ್ರವಾಸಿಗರು.
ಜೀವಕ್ಕೆ ಕುತ್ತು
ಕೆಕ್ಕೆನಹಳ್ಳ ಚೆಕ್‌ಪೋಸ್ಟ್ ಬಳಿಯ ಅರಣ್ಯ ಮಧ್ಯೆ ಇರುವ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ಪ್ರಾಣಿಗಳು ರಸ್ತೆ ದಾಟಲು ಭಯ ಪಡುತ್ತಿವೆ. ಕೆಲವು ಪ್ರವಾಸಿಗರು ವಾಹನಗಳಿಂದ ಇಳಿದು ಪ್ರಾಣಿಗಳ ಪೋಟೋ ತೆಗೆಯುವುದು, ಆಹಾರ ನೀಡುವುದನ್ನು ಮಾಡುತ್ತಿದ್ದಾರೆ. ಇದರಿಂದ ಪ್ರಾಣಿಗಳ ಪ್ರಾಣಕ್ಕೆ ಹಾಗೂ ಪ್ರವಾಸಿಗರ ಪ್ರಾಣಕ್ಕೂ ಕುತ್ತಾಗುವ ಅಪಾಯವಿದೆ.
–ರಾಘವೇಂದ್ರ, ಪರಿಸರ ಪ್ರೇಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.