
ಚಾಮರಾಜನಗರ: ಬುಡಕಟ್ಟು ಸಮುದಾಯಗಳು ದುಶ್ಚಟ ತ್ಯಜಿಸಿ ಶಿಕ್ಷಣ ಹಾಗೂ ಕ್ರೀಡೆಯತ್ತ ಗಮನ ಹರಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಸಿರುವ ಜಿಲ್ಲಾಮಟ್ಟದ ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ಜನಾಂಗದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಾತನಾಡಿದರು.
ಬುಡಕಟ್ಟು ಸಮುದಾಯಗಳಿಗೆ ಅನುಗುಣವಾಗಿ ಕ್ರೀಡಾಕೂಟದಲ್ಲಿ ಬೆಟ್ಟ ಹಾಗೂ ಮರ ಹತ್ತುವ ಸ್ಪರ್ಧೆಗಳನ್ನೂ ಸೇರಿಸಲಾಗಿದೆ. ಕ್ರೀಡಾ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸಲಾಗಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿಂದೆ ಬುಡಕಟ್ಟು ಸಮುದಾಯಗಳು ಆರೋಗ್ಯಯುತವಾಗಿದ್ದವು. ಬದಲಾದ ಕಾಲಘಟ್ಟದಲ್ಲಿ ಸಮುದಾಯ ದುಶ್ವಟಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಆದಿವಾಸಿಗಳು ದುಶ್ಚಟ ತ್ಯಜಿಸಬೇಕು, ಪೋಷಕರು ಮಕ್ಕಳಿಗೆ ಶಿಕ್ಷಣ ಹಾಗೂ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಬುಡಕಟ್ಟು ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಸರ್ಕಾರವು ಆಶ್ರಮ ಶಾಲೆ ಹಾಗೂ ಮೊರಾರ್ಜಿ ಶಾಲೆಗಳನ್ನು ತೆರೆದಿದ್ದು ಶಿಕ್ಷಣ ಪಡೆದುಕೊಳ್ಳಬೇಕು ಎಂದರು.
ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರು, ಶೋಷಿತರು, ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸರ್ಕಾರದ ಕಾರ್ಯಕ್ರಮಗಳ ಲಾಭ ಪಡೆದು ಬುಡಕಟ್ಟು ಜನರು ಅಭಿವೃದ್ಧಿ ಸಾಧಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಸರ್ಕಾರ ಬುಡಕಟ್ಟು ಜನರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ಜನರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆಗೆ ಅವಕಾಶ ಮಾಡಿಕೊಟ್ಟು ಕ್ರೀಡಾ ಪ್ರತಿಭೆ ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸಿದ್ದಾರೆ. ರಾಜ್ಯದ 5 ಜಿಲ್ಲೆಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು ಚಾಮರಾಜನಗರವೂ ಒಂದಾಗಿದೆ’ ಎಂದರು.
ಮುಂದೆ ವಿಭಾಗಮಟ್ಟ, ರಾಜ್ಯಮಟ್ಟ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿಯೂ ಆದಿವಾಸಿಗಳಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಬೇಕು. ಬುಡಕಟ್ಟು ಜನರು ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಹಾಗೂ ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿದರು. ಬುಡಕಟ್ಟು ಜನರ ನಾಯಕ ಭಗವಾನ್ ಬಿರ್ಸಾ ಮುಂಡಾ ಪ್ರತಿಮೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅನಾವರಣಗೊಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಸುರೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಕ್ರೀಡಾಂಗಣ ಸಲಹಾ ಸಮಿತಿ ಸದಸ್ಯರಾದ ಶ್ರೀನಿವಾಸ ಪ್ರಸಾದ್, ಗಿರಿಜನರ ಮುಖಂಡರಾದ ಡಾ.ಸಿ. ಮಾದೇಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪುರುಷರ ವಿಭಾಗ; ಕೊಕ್ಕೊ: ಹನೂರು ತಾಲ್ಲೂಕಿನ ಹಾವಿನ ಮೂಲೆ ಪೋಡು ಪ್ರಥಮ ಮದ್ದೂರು ಕಾಲೋನಿಯ ಎಂ.ಸಿ ಬಾಯ್ಸ್ ಕಾಲೋನಿ ದ್ವಿತೀಯ ಕೊಕ್ಕೊ ಮಹಿಳೆಯರ ವಿಭಾಗ: ಕೋಣನಕೆರೆ ಪೋಡು ಪ್ರಥಮ ಪೊನ್ನಾಚಿಪೋಡು ದ್ವಿತೀಯ ಥ್ರೋಬಾಲ್
ಮಹಿಳೆಯರ ವಿಭಾಗ: ಬಿ.ಆರ್ ಹಿಲ್ಸ್ ಯಳಂದೂರು ಪ್ರಥಮ ಪೊನ್ನಾಚಿ ಸಿದ್ದಮ್ಮ ಮತ್ತು ತಂಡ ದ್ವಿತೀಯ. 100 ಮೀ ಓಟ; ಸಂಜು ಗುಂಡ್ಲುಪೇಟೆ ಪ್ರಥಮ ರಾಚಪ್ಪ ಹನೂರು ದ್ವಿತೀಯ ಸಂಜು ಚಾಮರಾಜನಗರ ತೃತೀಯ ಗುಂಡು ಎಸೆತ;ವಿಜಯ್ ಗುಂಡ್ಲುಪೇಟೆ–1 ಜಾನು–2 ಶೇಖರ್–3.
Cut-off box
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.