ADVERTISEMENT

ದೆಹಲಿಯ ನಿಜಾಮುದ್ದೀನ್‌ ಪ್ರಕರಣ; ಧರ್ಮಸಭೆಯಲ್ಲಿ ಭಾಗಿಯಾದವರು ಇಬ್ಬರು

ಜಿಲ್ಲಾಧಿಕಾರಿ ಸ್ಪಷ್ಟನೆ, ವಿಶೇಷ ನಿಗಾ ಘಟಕದಲ್ಲಿ ಒಬ್ಬರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 15:14 IST
Last Updated 2 ಏಪ್ರಿಲ್ 2020, 15:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ ಇಬ್ಬರು ಮಾತ್ರ ಭಾಗವಹಿಸಿದ್ದರು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಗುರುವಾರ ಸ್ಪಷ್ಟಪಡಿಸಿದರು.

‘ಜಿಲ್ಲೆಯ 12 ಮಂದಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಬುಧವಾರ ಹೇಳಿದ್ದರು.

‘ಬೆಂಗಳೂರಿನಿಂದ ನಮಗೆ ಮೂರು ಪಟ್ಟಿಗಳು ಬಂದಿದ್ದವು. ಮೊದಲ ಪಟ್ಟಿಯಲ್ಲಿ ನಾಲ್ವರ ಹೆಸರಿತ್ತು. ಇನ್ನೊಂದು ಪಟ್ಟಿಯಲ್ಲಿ 12 ಹೆಸರುಗಳು ಇದ್ದವು. ಎಲ್ಲರನ್ನು ಸಂಪರ್ಕಿಸಿ ವಿಚಾರಣೆ ಮಾಡಿದ ನಂತರ, ಜಿಲ್ಲೆಯಿಂದ ಧಾರ್ಮಿಕ ಸಭೆಗೆ ಅಧಿಕೃತವಾಗಿ ಇಬ್ಬರು ಹೋಗಿರುವುದು ದೃಢಪಟ್ಟಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ADVERTISEMENT

‘ಇಬ್ಬರ ಪೈಕಿ ಒಬ್ಬರು ಬೆಂಗಳೂರಿನಲ್ಲಿ ವಾಸವಿದ್ದಾರೆ. ಇನ್ನೊಬ್ಬರು ಚಾಮರಾಜನಗರದವರು. ಅವರನ್ನು ವಿಶೇಷ ನಿಗಾ ಘಟಕದಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಅವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ’ ಎಂದರು.

‘12 ಜನರ ಇನ್ನೊಂದು ಪಟ್ಟಿಯನ್ನು ನಿಜಾಮುದ್ದೀನ್‌ಗೆ ಭೇಟಿ ನೀಡಿದವರು ಎಂದು ಭಾವಿಸಲಾಗಿತ್ತು. ಆದರೆ, ಅವರನ್ನು ಸಂಪರ್ಕಿಸಿ ವಿಚಾರಣೆ ನಡೆಸಿದಾಗ ಅವರೆಲ್ಲರೂ ಗುಜರಾತ್‌ನ ಗೋಧ್ರಾಗೆ ಭೇಟಿ ನೀಡಿದವರು ಎಂಬುದು ಗೊತ್ತಾಗಿದೆ. ಅವರು ಮಾರ್ಚ್‌ 13ರಂದೇ ವಾಪಸ್‌ ಆಗಿದ್ದಾರೆ. ಹಾಗಾಗಿ ಪ್ರತ್ಯೇಕವಾಗಿ ಇರಿಸಬೇಕಾದ ಅವಧಿ ಮುಗಿದಿದೆ. ಅವರ ಆರೋಗ್ಯ ತಪಾಸಣೆ ಮಾಡಲಾಗಿದೆ. ಇನ್ನೂ 14 ದಿನಗಳ ಕಾಲ ಮನೆಯಲ್ಲೇ ಇರಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಮತ್ತೊಬ್ಬರ ಮಾದರಿಗಳ ರವಾನೆ: ‘ನಂಜನಗೂಡಿನ ಔಷಧ ಕಾರ್ಖಾನೆಯಲ್ಲಿ ಕೋವಿಡ್‌–19 ದೃಢಪಟ್ಟ ಮೊದಲ ಸಿಬ್ಬಂದಿ (ರೋಗಿ ಸಂಖ್ಯೆ 52) ಅವರನ್ನು ನೇರವಾಗಿ ಭೇಟಿಯಾಗಿರುವುದಾಗಿ ಹೇಳಿಕೊಂಡಿರುವ ಅವರ ಸಂಬಂಧಿಯ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ನೇರ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಮಾದರಿಗಳನ್ನು ಕಳುಹಿಸಲಾಗಿದೆ. ಕೋವಿಡ್‌ ವಿಶೇಷ ನಿಗಾ ಘಟಕದಲ್ಲಿ ಸದ್ಯ 59 ಮಂದಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಬ್ಯಾಂಕುಗಳಿಗೆ ಜಮೆ: ‘ವಿವಿಧ ಪಿಂಚಣಿ ಯೋಜನೆಗಳ ಹಾಗೂ ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಸರ್ಕಾರ ಶುಕ್ರವಾರದಿಂದ ಹಣವನ್ನು ಜಮೆ ಮಾಡಲಿದೆ. ಜಿಲ್ಲೆಯಲ್ಲಿ 1.62 ಲಕ್ಷ ವಿವಿಧ ಪಿಂಚಣಿಗಳ ಹಾಗೂ 1.27 ಲಕ್ಷ ಮಂದಿ ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳಿದ್ದಾರೆ’ ಎಂದರು.

‘ಹಣ ಜಮೆ ಆದ ನಂತರ ಜನರು ಬ್ಯಾಂಕುಗಳಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಟೋಕನ್‌ ವ್ಯವಸ್ಥೆ ಮಾಡುವುದಾಗಿ ಅವರು ಹೇಳಿದ್ದಾರೆ. ಇದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.

‘ದಿಗ್ಬಂಧನದ ಅವಧಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಗ್ರಾಮೀಣ ಪ್ರದೇಶದಲ್ಲಿ ಕೃಷಿ ಯಂತ್ರ ಧಾರೆ ಕೇಂದ್ರಗಳಲ್ಲಿ ಹಾಗೂ 16 ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೇಕಾದ ಅಗತ್ಯ ಸಲಕರಣೆಗಳನ್ನು ರೈತರಿಗೆ ನೀಡುವಂತೆ ಸೂಚಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೇಕರಿ ತೆರೆಯಲು ಅನುಮತಿ: ‘ವರ್ತಕರ ಸಭೆಯನ್ನು ನಡೆಸಲಾಗಿದ್ದು, ಬೇಕರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಪಾರ್ಸೆಲ್‌ಗಳ ಮೂಲಕ ಮಾತ್ರ ತಿಂಡಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಇದ್ದರು.

ಇಂದಿನಿಂದ ಉಚಿತ ಹಾಲು ವಿತರಣೆ

ಕೊಳೆಗೇರಿ ನಿವಾಸಿಗಳು, ವಲಸಿಗರು, ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸಬೇಕು ಎಂದು ಸರ್ಕಾರ ಆದೇಶಿಸಿದ್ದು, ಶುಕ್ರವಾರದಿಂದ ಎಲ್ಲ ಕಡೆ ಹಾಲು ವಿತರಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

‘ಜಿಲ್ಲಾ ಹಾಲು ಒಕ್ಕೂಟವು (ಚಾಮುಲ್‌) ಪ್ರತಿ ದಿನ 10 ಸಾವಿರ ಲೀಟರ್‌ ಹಾಲನ್ನು ನಮಗೆ ಪೂರೈಸಲಿದೆ. ಜಿಲ್ಲೆಯಲ್ಲಿ ಒಟ್ಟು 9,500 ಮಂದಿಯನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 66 ಕೊಳೆಗೇರಿಗಳಿದ್ದು, 9,000 ಜನರಿದ್ದಾರೆ. 150 ಕಟ್ಟಡ ಕಾರ್ಮಿಕರಿದ್ದಾರೆ. 248 ಮಂದಿ ವಲಸಿಗರಿದ್ದಾರೆ. ಇವರಿಗೆಲ್ಲರಿಗೂ ಉಚಿತವಾಗಿ ಹಾಲು ವಿತರಿಸಲಾಗುವುದು’ ಎಂದರು.

‘ಚಾಮುಲ್‌ ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಲು ಪೂರೈಸಲಿದೆ. ಅಲ್ಲಿನ ಆಡಳಿತ ಹಾಲು ವಿತರಿಸಲು ಕ್ರಮ ಕೈಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

––––

ಈಗಾಗಲೇ ಎರಡು ತಿಂಗಳಿಗೆ ಆಗುವಷ್ಟು ಪಡಿತರ ದಾಸ್ತಾನು ಇದೆ. ದಿನಸಿ ಹಾಗೂ ಇತರ ಅಗತ್ಯ ವಸ್ತುಗಳು 15 ದಿನಗಳಿಗೆ ಆಗುವಷ್ಟು ಜಿಲ್ಲೆಯಲ್ಲಿ ಲಭ್ಯವಿದೆ.

- ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.