ಕೇರಳದ ಮೇಪ್ಪಾಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿನೀಡಿದ ಚಾಮರಾಜನಗರದ ತಹಶೀಲ್ದಾರ್ ಗಿರಿಜಾ ಕರ್ನಾಟಕ ಮೂಲದವರ ಯೋಗಕ್ಷೇಮ ವಿಚಾರಿಸಿದರು
ಚಾಮರಾಜನಗರ: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ ಮೃತಪಟ್ಟಿರುವ ಚಾಮರಾಜನಗರ ಜಿಲ್ಲೆಯ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಗುಂಡ್ಲುಪೇಟೆ ತಾಲ್ಲೂಕಿನ ಪುಟ್ಟಸಿದ್ಧಿ (62) ಹಾಗೂ ಚಾಮರಾಜನಗರ ತಾಲ್ಲೂಕಿನ ರಾಣಿ (50) ಮೃತರು.
ಚಾಮರಾಜನಗರ ತಾಲ್ಲೂಕಿನ ಇರಸವಾಡಿ ಗ್ರಾಮದ ರಾಜೇಂದ್ರ (50) ಹಾಗೂ ರತ್ನಮ್ಮ (45) ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ. ಗುಂಡ್ಲುಪೇಟೆ ತಾಲ್ಲೂಕಿನ ತ್ರಯಂಬಕಪುರ ಗ್ರಾಮದ ಸ್ವಾಮಿಶೆಟ್ಟಿ (70) ಗಂಭೀರವಾಗಿ ಗಾಯಗೊಂಡಿದ್ದು ವೇತ್ರಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ಷಣೆ ಮಾಡಲಾಗಿರುವ ಕರ್ನಾಟಕ ಮೂಲದವರನ್ನು ವೈನಾಡಿನ ಸೇಂಟ್ ಜೋಸೆಫ್ ಶಾಲೆ ಹಾಗೂ ಮೇಪ್ಪಾಡಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ. ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಹಾಗೂ ಗುಂಡ್ಲುಪೇಟೆ ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದ ಅಧಿಕಾರಿಗಳ ತಂಡ ರಾಜ್ಯದವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ನಾಪತ್ತೆಯಾದವರ ಹಾಗೂ ಮೃತಪಟ್ಟವರ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.