ADVERTISEMENT

ಶಾಸಕ ಎನ್‌.ಮಹೇಶ್‌ ಸೂಚನೆ; ವ್ಯಕ್ತಿಗೆ ಥಳಿಸಿದ ಪೊಲೀಸರು– ಆರೋಪ

ಕೊಳ್ಳೇ್ಗಾಲ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಉತ್ತಂಬಳ್ಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 16:28 IST
Last Updated 15 ಏಪ್ರಿಲ್ 2022, 16:28 IST
ಕೊಳ್ಳೇಗಾಲದ ನಗರ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಉತ್ತಂಬಳ್ಳಿ ಗ್ರಾಮಸ್ಥರು
ಕೊಳ್ಳೇಗಾಲದ ನಗರ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಉತ್ತಂಬಳ್ಳಿ ಗ್ರಾಮಸ್ಥರು   

ಕೊಳ್ಳೇಗಾಲ: ‘ಶಾಸಕ ಎನ್‌.ಮಹೇಶ್‌ ಅವರಿಗೆ ಚಪ್ಪಲಿ ತೋರಿಸಿದ್ದಾರೆ ಎಂಬ ಆರೋಪದಲ್ಲಿ ಪೊಲೀಸರು ಗ್ರಾಮದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ’ ಎಂದು ಆರೋಪಿಸಿ ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮಸ್ಥರು ನಗರ ಠಾಣೆಯ ಮುಂದೆ ಶುಕ್ರವಾರ ಸಂಜೆ ದಿಢೀರ್‌ ಪ್ರತಿಭಟನೆ ನಡೆಸಿದರು.

ಉತ್ತಂಬಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಕೊಂಡೋತ್ಸವ ನಡೆದಿತ್ತು. ಶಾಸಕ ಎನ್‌.ಮಹೇಶ್‌ ಅವರು ಕೊಂಡೋತ್ಸವದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಿದ್ದರಾಜು ಎಂಬುವವರು, ‘ನೀವು ಏನೂ ಕೆಲಸ ಮಾಡಿಲ್ಲ. ಯಾಕೆ ಗ್ರಾಮಕ್ಕೆ ಬರುತ್ತಿದ್ದೀರಿ? ನೀವು ಮಾಡಿರುವ ಅಭಿವೃದ್ಧಿ ಶೂನ್ಯ. ಗ್ರಾಮಕ್ಕೆ ಬರುವ ಅರ್ಹತೆ ನಿಮಗೆ ಇಲ್ಲ’ ಎಂದು ನೇರವಾಗಿ ಶಾಸಕ ಎನ್‌.ಮಹೇಶ್‌ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಈ ವೇಳೆ, ಎನ್‌.ಮಹೇಶ್‌ ಹಾಗೂ ಸಿದ್ದರಾಜು ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸಿದ್ದರಾಜು ಅವರು ಶಾಸಕರಿಗೆ ಚಪ್ಪಲಿ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿದ್ದರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹೇಶ್‌ ಅವರು ಪೊಲೀಸರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಆದರೆ, ಇದನ್ನು ಶಾಸಕರು ನಿರಾಕರಿಸಿದ್ದಾರೆ.

ADVERTISEMENT

‘ಶಾಸಕರ ಸೂಚನೆಯ ಮೇರೆಗೆ ಪೊಲೀಸರು ಸಿದ್ದರಾಜು ಅವರನ್ನು ಅಗರ–ಮಾಂಬಳ್ಳಿ ಠಾಣೆಗೆ ಕರೆದೊಯ್ದು, ಅವರಿಗೆ ಹಿಗ್ಗಾ ಮುಗ್ಗ ಹೊಡೆದಿದ್ದಾರೆ’ ಎಂಬುದು ಗ್ರಾಮಸ್ಥರ ಆರೋಪ.

ಆಸ್ಪತ್ರೆಗೆ ದಾಖಲು: ಪೊಲೀಸರ ಏಟು ತಿಂದು ಅಸ್ವಸ್ಥಗೊಂಡಿದ್ದ ಸಿದ್ದರಾಜು ಅವರನ್ನು ಸಂಜೆಯ ಹೊತ್ತಿಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಬಳಿಕ ಸಿದ್ದರಾಜು ಕೊಂಚ ಚೇತರಿಸಿಕೊಂಡರು.

ಆಸ್ಪತ್ರೆಯ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಜು, ‘ನೋಡಪ್ಪ ಹೇಗೆ ಹೋಗ್ತಾ ಇದ್ದಾನೆ? ನಾವು ಸಾಯುವವರೆಗೆ ಹೀಗೆ ಇರುವಂತಾಯಿತಲ್ಲ ಎಂದು ಶಾಸಕರನ್ನು ನೋಡಿ ಹೇಳಿದ್ದೆ. ಆದರೆ, ನಾನು ಚಪ್ಪಲಿ ತೋರಿಸಿದ್ದೇನೆ ಎಂದು ಆರೋಪಿಸಲಾಗಿದೆ. ನಾನು ಚಪ್ಪಲಿಯೇ ಧರಿಸಿರಲಿಲ್ಲ’ ಎಂದರು.

‘ಶಾಸಕರಿಗೆ ಚಪ್ಪಲಿ ತೋರಿಸಿದ್ದೇನೆ ಎಂದು ನನ್ನನ್ನು ಪೊಲೀಸರು ಅಗರ ಮಾಂಬಳ್ಳಿ ಠಾಣೆಗೆ ಕರೆದೊಯ್ದು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಹಗ್ಗದಲ್ಲಿ ನೇತಾಡಿಸಿ ಬಡಿದಿದ್ದಾರೆ. ಬೇಡ ಬೇಡ ಎಂದರೂ ಕೇಳಲಿಲ್ಲ. ನನಗೆ ಹೊಡೆದವರಿಗೆ ಶಿಕ್ಷೆಯಾಗಬೇಕು. ಮುಂದೆ ಯಾರಿಗೂ ಈ ರೀತಿ ಆಗಬಾರದು’ ಎಂದು ಹೇಳಿದರು.

ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದಿಂದ ಭಾರಿ ಸಂಖ್ಯೆಯಲ್ಲಿ ಬಂದ ಜನರು ಹಾಗೂ ನಗರದ ದಲಿತ ಮುಖಂಡರು ನಗರ ಪೊಲೀಸ್‌ ಠಾಣೆಯ ಮುಂದೆ ಸೇರಿ ಪ್ರತಿಭಟನೆ ಆರಂಭಿಸಿ, ಶಾಸಕರು ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಜು ಮೇಲೆ ಹಲ್ಲೆ ಮಾಡಿರುವ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

ವಾರದಲ್ಲಿ ಕ್ರಮದ ಭರವಸೆ

ಉತ್ತಂಬಳ್ಳಿ ಗ್ರಾಮಸ್ಥರು ಹಾಗೂ ನಗರದ ದಲಿತ ಮುಖಂಡರು ಪಟ್ಟು ಸಡಿಲಿಸದೇ ಇದ್ದಾಗ, ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್‌ ಅವರು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು.

‘ಯಳಂದೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಮಾದಯ್ಯ ಅವರು ವಿಚಾರಣೆಗಾಗಿ ಸಿದ್ದರಾಜು ಅವರನ್ನು ಕರೆದುಕೊಂಡು ಹೋಗಿದ್ದರು. ಶಾಸಕರನ್ನು ಕರೆಸಲು, ಅಥವಾ ಅವರ ಬಳಿ ಈ ವಿಚಾರವಾಗಿ ಮಾತನಾಡಲು ನಮಗೆ ಸಾಧ್ಯವಿಲ್ಲ. ಆದರೆ, ಪೊಲೀಸರಿಂದ ಲೋಪ ಆಗಿದೆ ಎಂದು ಆರೋಪಿಸಿದ್ದೀರಿ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದರು.

ಥಳಿಸಿದ ಪೊಲೀಸರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ದಲಿತ ಸಮುದಾಯದ ಮುಖಂಡರು ಆಗ್ರಹಿಸಿದಾಗ, ‘ನನಗೆ ಒಂದು ವಾರ ಸಮಯ ಕೊಡಿ. ಎಲ್ಲವನ್ನೂ ಪರಿಶೀಲಿಸಿ, ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಇದಕ್ಕೆ ಸಮ್ಮತಿಸಿದ ಗ್ರಾಮಸ್ಥರು ಪ್ರತಿಭಟನೆಯನ್ನು ವಾಪಸ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.