ADVERTISEMENT

ವನ್ಯಧಾಮದೊಳಗೆ ಪ್ಲಾಸ್ಟಿಕ್: ಪ್ರಾಣಿಗಳ ಜೀವಕ್ಕೆ ಕುತ್ತು

ಪಾದಯಾತ್ರೆ ಹಾದಿಯ ಇಕ್ಕೆಲಗಳಲ್ಲಿ ಕವರ್‌ ಬಿಸಾಡಿರುವ ಭಕ್ತರು: ತೆರವುಗೊಳಿಸದ ಪ್ರಾಧಿಕಾರ, ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:59 IST
Last Updated 21 ಫೆಬ್ರುವರಿ 2026, 5:59 IST
ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ದೇವಸ್ಥಾನಕ್ಕೆ ತೆರಳುವ ಪಾದಯಾತ್ರೆ ಮಾರ್ಗದಲ್ಲಿ ಬಿದ್ದಿರುವ ಪಾಸ್ಟಿಕ್ ಬಾಟೆಲ್ ಹಾಗೂ ಕವರ್‌ಗಳು
ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ದೇವಸ್ಥಾನಕ್ಕೆ ತೆರಳುವ ಪಾದಯಾತ್ರೆ ಮಾರ್ಗದಲ್ಲಿ ಬಿದ್ದಿರುವ ಪಾಸ್ಟಿಕ್ ಬಾಟೆಲ್ ಹಾಗೂ ಕವರ್‌ಗಳು   

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಈಚೆಗೆ ನಡೆದ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ಎಂಎಂ ಹಿಲ್ಸ್‌ ವನ್ಯಧಾಮದೊಳಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಬಿಸಾಡಿ ಹೋಗಿದ್ದು ವನ್ಯಜೀವಿಗಳ ಪಾಲಿಗೆ ಕಂಟಕವಾಗಿದೆ.

ಹನೂರು ತಾಲ್ಲೂಕಿನ ಕೌದಳ್ಳಿಯಿಂದ ಮಲೆ ಮಹದೇಶ್ವರ ದೇವಸ್ಥಾನದವರೆಗೆ ಚಾಚಿಕೊಂಡಿರುವ 38 ಕಿ.ಮೀ ದಟ್ಟ ಅರಣ್ಯದೊಳಗೆ ಪಾದಯಾತ್ರೆ ಮೂಲಕ ಬಂದವರು ಪ್ಲಾಸ್ಟಿಕ್‌ ಬಾಟೆಲ್‌, ಚಿಪ್ಸ್‌ ಸಹಿತ ಕುರುಕುಲು ತಿಂಡಿಗಳ ಪೊಟ್ಟಣ, ಬಿಸ್ಕತ್ತು, ಚಾಕೊಲೆಟ್ ಹಾಗೂ ಮಜ್ಜಿಗೆಯ ಕವರ್‌ಗಳನ್ನು ಬಿಸಾಡಿದ್ದಾರೆ. ದಾನಿಗಳು ವಿತರಿಸಿದ್ದ ಬಾಟೆಲ್ ಹಾಗೂ ಉಪಾಹಾರದ ಕವರ್‌ಗಳನ್ನು ಅರಣ್ಯ ಇಲಾಖೆ ಹಾಗೂ ಪ್ರಾಧಿಕಾರ ಗೊತ್ತುಪಡಿಸಿದ್ದ ಜಾಗಗಳಲ್ಲಿ ಭಕ್ತರು ಹಾಕಿಲ್ಲ.

ಭಕ್ತರು ಅರೆಬರೆ ತಿಂದು ಎಸೆದ ಆಹಾರದ ಕವರ್‌ಗಳನ್ನೂ ಸೇವಿಸುತ್ತಿವೆ. ಬುಧವಾರವಷ್ಟೆ ಕಾಡಾನೆಯೊಂದು ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಆಹಾರ ಸೇವಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇಷ್ಟಾದರೂ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪ್ಲಾಸ್ಟಿಕ್‌ ಕಸ ತೆರವುಗೊಳಿಸಿಲ್ಲ ಎಂಬ ಆಕ್ಷೇಪವೂ ಎದ್ದಿದೆ.

ADVERTISEMENT

‘ಕರಿದ ತಿಂಡಿ ಸೇವಿಸಿದರೆ ಪ್ರಾಣಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಉಪ್ಪಿನ ರುಚಿ ಹಿಡಿದು ಪ್ರಾಣಿಗಳು ಪಾದಯಾತ್ರೆ ಮಾರ್ಗದತ್ತ ಬಂದರೆ ಸ್ಥಳೀಯರ ಮೇಲೆ ದಾಳಿ ನಡೆಯಬಹುದು’ ಎಂದು ಸ್ಥಳೀಯರಾದ ಮಹದೇವ್ ಆತಂಕ ವ್ಯಕ್ತಪಡಿಸಿದರು.

ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರಾ ಮಹೋತ್ಸವಗಳಲ್ಲಿ ಪಾದಯಾತ್ರೆ ಬರುವ ಭಕ್ತರು ವನ್ಯಜೀವಿ ಧಾಮವನ್ನು ಹಾದು ಬರಬೇಕು. ನೆರೆಯ ತಮಿಳುನಾಡು ಕೇರಳದಿಂದಲೂ ಭಕ್ತರು ಬರುತ್ತಾರೆ. ಬಂದವರು ನೀರಿನ ಪ್ಲಾಸ್ಟಿಕ್ ಬಾಟೆಲ್‌ಗಳನ್ನು ಬಿಸಾಡಿ ಹೋಗುತ್ತಾರೆ.

‘ಭಕ್ತರಿಗೆ ಪ್ಲಾಸ್ಟಿಕ್ ಬಾಟೆಲ್‌ಗಳಲ್ಲಿ ನೀರು ಹಾಗೂ ಕವರ್‌ಗಳಲ್ಲಿ ಉಪಾಹಾರ ಹಂಚಬಾರದು. ಎಲ್ಲೆಂದರಲ್ಲಿ ಕಸ ಎಸೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೂ ಮುನ್ನ ನಡೆದ ಸಭೆಯಲ್ಲಿ ಜಿಲ್ಲಾಡಳಿತ ಹಾಗೂ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸೂಕ್ತ ಕ್ರಮ ತೆಗೆದುಕೊಂಡಿಲ್ಲ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜಾತ್ರೆ ಮುಗಿದ ದಿನವೇ ಪ್ಲಾಸ್ಟಿಕ್ ತೆರವುಗೊಳಿಸುವಂತೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ’ ಎಂದು ದೂರಿದರು.  

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ಮಲೆ ಮಹದೇಶ್ವರ ವನ್ಯಜೀವಿಧಾಮದ ಪಾದಯಾತ್ರೆ ಹಾದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ಗಳ ರಾಶಿ
ಮಲೆ ಮಹದೇಶ್ವರ ವನ್ಯಜೀವಿ ಧಾಮದೊಳಗೆ ಬಿದ್ದಿರುವ ಪ್ಲಾಸ್ಟಿಕ್ ಕವರ್‌ಗಳು

‘ಗಂಭೀರ ಲೋಪ’

‘ಜಾತ್ರಾ ಮಹೋತ್ಸವ ಮುಗಿದರೂ ಪ್ಲಾಸ್ಟಿಕ್ ಬಾಟೆಲ್ ಹಾಗೂ ಕವರ್‌ಗಳನ್ನು ತೆರೆವುಗೊಳಿಸದಿರುವುದು ಗಂಭೀರ ಲೋಪ’ ಎನ್ನುತ್ತಾರೆ  ಪರಿಸರ ವಾರಿಯರ್ಸ್‌ ಗ್ರೂಪ್‌ನ ಮುಖ್ಯಸ್ಥ ಪಿ.ಮಂಜುನಾಥ್‌. ‘ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ಲಾಸ್ಟಿಕ್ ತೆರವುಗೊಳಿಸಬೇಕು. ಭಕ್ತರಿಗೆ ಬಾಟೆಲ್‌ ಹಾಗೂ ಕವರ್‌ಗಳಲ್ಲಿ ನೀರು ಉಪಾಹಾರ ಹಂಚಬಾರದು. ಜಾತ್ರಾ ಮಹೋತ್ಸವಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು’ ಎಂಬುದು ಅವರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.