ADVERTISEMENT

ವೀರಪ್ಪನ್‌ನಿಂದ 6 ಪೊಲೀಸರ ಹತ್ಯೆ: ಅಂದಿನ ಆ ಕರಾಳ ಘಟನೆಗೆ 31 ವರ್ಷ

ವೀರಪ್ಪನ್ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿರುವ ಹುತಾತ್ಮರ ಸ್ಮಾರಕಗಳು 

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 7:05 IST
Last Updated 14 ಆಗಸ್ಟ್ 2025, 7:05 IST
ಹನೂರು ತಾಲೂಕಿನ ಮೀಣ್ಯ ಬಳಿ 1992ರಲ್ಲಿ ವೀರಪ್ಪನ್ ಗುಂಡಿಗೆ ಹುತಾತ್ಮರಾದ ಪೊಲೀಸ್ ಅಧಿಕಾರಿಗಳ ಸ್ಮರಣೆಗೆ ನಿರ್ಮಿಸಲಾಗಿರುವ ಸ್ಮಾರಕ
ಹನೂರು ತಾಲೂಕಿನ ಮೀಣ್ಯ ಬಳಿ 1992ರಲ್ಲಿ ವೀರಪ್ಪನ್ ಗುಂಡಿಗೆ ಹುತಾತ್ಮರಾದ ಪೊಲೀಸ್ ಅಧಿಕಾರಿಗಳ ಸ್ಮರಣೆಗೆ ನಿರ್ಮಿಸಲಾಗಿರುವ ಸ್ಮಾರಕ    

ಹನೂರು: ದೇಶವು ಮತ್ತೊಂದು ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. ಆದರೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ, ಕಾಡುಗಳ್ಳ ವೀರಪ್ಪನ್‌ ಮತ್ತು ಆತನ ಕರಾಳ ಕೃತ್ಯಗಳೂ ಜನರ ಕಣ್ಮುಂದೆ ಬರುತ್ತವೆ.

46ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಆಚರಿಸಲು ಭರದ ಸಿದ್ಧತೆಗಳು ನಡೆಯುತ್ತಿದ್ದ ಹೊತ್ತಿನಲ್ಲೇ, 1994ರ ಆಗಸ್ಟ್ 14ರಂದು ಮಹದೇಶ್ವರ ವನ್ಯಧಾಮದ ದಟ್ಟಾರಣ್ಯದ ಮಧ್ಯೆ ವೀರಪ್ಪನ್ ರಕ್ತದ ಕೋಡಿಯನ್ನೇ ಹರಿಸಿದ್ದ. ತನ್ನನ್ನು ಸೆರೆ ಹಿಡಿಯಲು ಬರುತ್ತಿದ್ದ ಪೊಲೀಸ್ ಇಲಾಖೆಯ ಆರು ಮಂದಿಯನ್ನು ಗುಂಡಿಕ್ಕಿ ಬರ್ಬರವಾಗಿ ಕೊಂದುಹಾಕಿದ್ದ.

ಕರಾಳ ಘಟನೆ ನಡೆದು 30 ವರ್ಷಗಳಾದರೂ ಮೀಣ್ಯಂ ಭಾಗದ ಜನ ಪೈಶಾಚಿಕ ಕೃತ್ಯವನ್ನು ನೆನೆದು ಮರುಗುತ್ತಾರೆ. ಅಂದು ರಾಜ್ಯವನ್ನೇ ದಿಗ್ರ್ಭಮೆಗೊಳಿಸಿದ್ದ ದುರಂತದಲ್ಲಿ ಪೊಲೀಸ್ ಅಧೀಕ್ಷಕ ಟಿ.ಹರಿಕೃಷ್ಣ, ಪಿಎಸ್ಐ ಶಕೀಲ್ ಅಹಮದ್, ಎಎಸ್ಐ ಸೋಮಪ್ಪ ಎಸ್.ಬೆನಗೊಂಡ, ಸಿಬ್ಬಂದಿಗಳಾದ ಸಿ.ಎಂ.ಕಾಳಪ್ಪ, ಸುಂದರ್ ಕೆ.ಎಂ ಅಪ್ಪಚ್ಚು ಬಲಿಯಾಗಿದ್ದರು.

ADVERTISEMENT

ಹಲವು ಕೃತ್ಯಗಳು: ಕರ್ನಾಟಕ ಹಾಗೂ ತಮಿಳುನಾಡಿಗೆ ತಲೆನೋವಾಗಿದ್ದ ವೀರಪ್ಪನ್ ತಾಲ್ಲೂಕಿನಲ್ಲಿ ನಡೆಸಿದ ಅಮಾನುಷ ಕೃತ್ಯಗಳು ಹಲವು. ಮಲೆ ಮಹದೇಶ್ವರ ವನ್ಯಧಾಮದೊಳಗೆ ನಿರ್ಮಾಣವಾಗಿರುವ ಸ್ಮಾರಕಗಳು ಅವನ ಕೌರ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. 1980-90ರ ದಶಕದಲ್ಲಿ ಆತನಿಂದ ಹತರಾದ ಅಧಿಕಾರಿಗಳ ಸಂಖ್ಯೆ ದೊಡ್ಡಿದೆ.

1989ರಲ್ಲಿ ಪಾಲಾರ್‌ನಲ್ಲಿ ಅರಣ್ಯ ರಕ್ಷಕ ಮೋಹನಯ್ಯನ ಹತ್ಯೆ, 1990ರಲ್ಲಿ ಹೊಗೆನಕಲ್ ರಸ್ತೆಯಲ್ಲಿ ಜೀಪ್‌ಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ಪಿಎಸ್ಐ  ದಿನೇಶ್ ಹಾಗೂ ಸಿಬ್ಬಂದಿಗಳ ಹತ್ಯೆ, 1991ರಲ್ಲಿ ಅರಣ್ಯಾಧಿಕಾರಿ ದಿ.ಪಿ.ಶ್ರೀನಿವಾಸ್ ಹತ್ಯೆ, 1992ರಲ್ಲಿ ಮೀಣ್ಯಂ ಹಾಗೂ ರಾಮಾಪುರ ಪೊಲೀಸ್ ಠಾಣೆಯಲ್ಲಿ ನಡೆದ ಹತ್ಯೆ, 1993ರಲ್ಲಿ ಪಾಲಾರ್ ಬಾಂಬ್ ಸ್ಫೋಟ, ಮಹದೇಶ್ವರ ಬೆಟ್ಟಕ್ಕೆ ತೆರೆಳುವ ರಂಗಸ್ವಾಮಿ ಒಡ್ಡುವಿನ ಬಳಿ ನಡೆದ ಹತ್ಯೆ...ಹೀಗೆ ಮೃತರಾದ ಅಧಿಕಾರಿ–ಸಿಬ್ಬಂದಿಯ ಸ್ಮರಣೆಗೆಂದೇ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸ್ಮಾರಕಗಳನ್ನು ನಿರ್ಮಿಸಿವೆ. 

ಹೇಗೆ ನಡೆಯಿತು ಕೃತ್ಯ?

ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ತಂಡ ಬೀಡುಬಿಟ್ಟಿರುವ ವಿಷಯ ತಿಳಿದ ರಾಮಾಪುರ ಠಾಣೆಯಲ್ಲಿದ್ದ ಪೊಲೀಸ್ ಅಧೀಕ್ಷಕ ಹರಿಕೃಷ್ಣ ನೇತೃತ್ವದ ತಂಡ ಸೆರೆ ಹಿಡಿಯಲು ಆ ಕಡೆಗೆ ಹೊರಟಿತ್ತು. ಅವರು ಬರುವ ಹಾದಿಯನ್ನೇ ಹೊಂಚು ಹಾಕಿ ಕುಳಿತಿದ್ದ ವೀರಪ್ಪನ್ ಹಾಗೂ ಸಹಚರರು ಬೂದಿಕೆರೆ ಪ್ರದೇಶದ ಬಳಿ ಪೊಲೀಸ್ ವಾಹನದ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಆ ದಾಳಿಯ ತೀವ್ರತೆಗೆ ಸ್ಥಳದಲ್ಲಿಯೇ ಆರು ಅಧಿಕಾರಿಗಳು ಬಲಿಯಾಗಿದ್ದರು. ದುರಂತ ನಡೆದ ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು ಪ್ರತಿವರ್ಷ ಹುತಾತ್ಮ ಅಧಿಕಾರಿ ಹಾಗೂ ಸಿಬ್ಬಂದಿಗೆ ಪೊಲೀಸ್ ಇಲಾಖೆ ಗೌರವ ಸಲ್ಲಿಸುತ್ತಾ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.