ADVERTISEMENT

ಸಂತೇಮರಹಳ್ಳಿ: ವೀರಶೈವರ ಮನೆಗಳಲ್ಲಿ ದಲಿತರಿಗೆ ಪೂಜೆ!

ಹಳ್ಳಿಕೆರೆಹುಂಡಿ, ಗಣಗನೂರಿನಲ್ಲಿ ಜಾತಿ ಬೇಧ ಮರೆತು ಹಬ್ಬ ಆಚರಣೆ

ಮಹದೇವ್ ಹೆಗ್ಗವಾಡಿಪುರ
Published 10 ಏಪ್ರಿಲ್ 2022, 4:48 IST
Last Updated 10 ಏಪ್ರಿಲ್ 2022, 4:48 IST
ಗಣಗನೂರು ಮತ್ತು ಹಳ್ಳಿಕೆರೆಹುಂಡಿಯಲ್ಲಿ ಇತ್ತೀಚೆಗೆ ನಡೆದ ವಿಶಿಷ್ಟ ಆಚರಣೆಯ ದೃಶ್ಯ
ಗಣಗನೂರು ಮತ್ತು ಹಳ್ಳಿಕೆರೆಹುಂಡಿಯಲ್ಲಿ ಇತ್ತೀಚೆಗೆ ನಡೆದ ವಿಶಿಷ್ಟ ಆಚರಣೆಯ ದೃಶ್ಯ   

ಸಂತೇಮರಹಳ್ಳಿ: ಯುಗಾದಿ ಸಮಯದಲ್ಲಿ ಹೋಬಳಿಯ ಹಳ್ಳಿಕೆರೆಹುಂಡಿ ಹಾಗೂ ಗಣಗನೂರು ಗ್ರಾಮದಲ್ಲಿ ವೀರಶೈವ –ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿ ಸಮುದಾಯದವರು ಜಾತಿ ಭೇದ ಮರೆತು ಸೌಹಾರ್ದವಾಗಿ ಪ್ರತಿ ವರ್ಷ ವಿಶಿಷ್ಟವಾಗಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.

ಯುಗಾದಿ ಹಬ್ಬಕ್ಕೆ ಎರಡೂ ದಿನ ಮೊದಲು ಈ ಗ್ರಾಮಗಳಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಗಣಗನೂರು ಗ್ರಾಮದಲ್ಲಿ ಉದ್ಭವಿಸಿರುವ ಕೆಂಬಾವಿ ಬೋಗೇಶ್ವರ ಹಾಗೂ ಗಂಗಾಧರೇಶ್ವರ ದೇವರ ಹೆಸರಿನಲ್ಲಿ ದಲಿತ ಸಮುದಾಯದವರು ವೀರಶೈವ ಸಮಾಜದವರ ಮನೆಯೊಳಗೆ ಪ್ರವೇಶಿಸಿ ಪೂಜೆ ಸ್ವೀಕರಿಸುತ್ತಾರೆ. ಪೂಜೆ ಮಾಡಿದವರಿಗೆ ಆಶೀರ್ವಾದವನ್ನೂ ಮಾಡುತ್ತಾರೆ.

ಕಲಿ ಬಲಿಗಳಿಗೆ ಪೂಜೆ: ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರುಕೈಎಣ್ಣೆ ಹಾಗೂ ಇದ್ದಿಲಿನಿಂದ ತಯಾರಿಸಿದ ಕಪ್ಪು ಮಸಿಯನ್ನು ದೇಹ ಪೂರ್ತಿ ಬಳಿದುಕೊಂಡು ಕಂಬಳಿ ಹೊದ್ದು ತಲೆಗೊಂದು ಕಪ್ಪುಪೇಟ ಧರಿಸಿ ಕೈಯಲ್ಲಿ ದೊಣ್ಣೆ ಹಿಡಿದು ಕಲಿ ಬಲಿಗಳಾಗುತ್ತಾರೆ.

ADVERTISEMENT

ಇವರು ಜಾಗಟೆ, ಮಂಗಳವಾದ್ಯಗಳ ಸದ್ದಿನೊಂದಿಗೆಗಣಗನೂರು ಗ್ರಾಮದ ದೇವಸ್ಥಾನದಿಂದ ಹಳ್ಳಿಕೆರೆ ಹುಂಡಿ ಗ್ರಾಮಕ್ಕೆ ಮುಸ್ಸಂಜೆ ವೇಳೆ ದೇವರ ಆವೇಶದೊಂದಿಗೆ ಪ್ರವೇಶ ಮಾಡುತ್ತಾರೆ. ಇದಕ್ಕೂ ಮುನ್ನ ಹಳ್ಳಿಕೆರೆಹುಂಡಿ ಗ್ರಾಮದ ವೀರಶೈವರು ಮನೆ ತೊಳೆದು ಸ್ವಚ್ಛಗೊಳಿಸಿ ಉಪವಾಸದಿಂದ ಇದ್ದು, ಕಲಿ ಹಾಗೂ ಬಲಿಗೆ ಕಾಯುತ್ತಿರುತ್ತಾರೆ.

ಮನೆಯೊಳಗೆ ಪ್ರವೇಶ ಮಾಡಿದ ಕಲಿ –ಬಲಿಗಳುದೇವರ ಒಕ್ಕಣೆ ಹೇಳುತ್ತಾರೆ. ಮಂತ್ರೋಪದೇಶ ಮಾಡುತ್ತಾರೆ. ಮನೆಯವರು ಇವರಿಗೆ ಹಣ್ಣು ಕಾಯಿ ಒಡೆದು ಪೂಜೆ ಸಲ್ಲಿಸುತ್ತಾರೆ. ಜತೆಗೆ ಪಂಚೆ ವಸ್ತ್ರಗಳನ್ನು ಕೊಡುತ್ತಾರೆ. ಭಕ್ತಿಯಿಂದ ನಮಸ್ಕರಿಸಿ ಪೂಜೆ ಸಲ್ಲಿಸುತ್ತಾರೆ. ಮನೆಗಳಲ್ಲಿ ಭಕ್ತರು ನೀಡಿದ ರಾಗಿಯನ್ನು ಪಡೆದುಕೊಂಡು ಮನೆಯ ಎಲ್ಲ ದಿಕ್ಕುಗಳಿಗೆ ಎರಚುತ್ತಾರೆ. ಮನೆಗಳಿಗೆ ಯಾವುದೇ ಕಂಟಕ ಬಾರದೆ ಶುಭವಾಗಲಿ ಎಂದು ಆಶೀರ್ವದಿಸುತ್ತಾರೆ. ತಾವು ತಂದಿರುವ ಕಪ್ಪು ದೂಳ್ತವನ್ನು ಮನೆಯವರ ಹಣೆಗೆ ಹಚ್ಚಿ ಆಶೀರ್ವಾದ ಮಾಡುತ್ತಾರೆ. ಕಲಿ ಬಲಿ ಇಬ್ಬರೂ ಪೂಜೆ ಸಲ್ಲಿಸಿ ಹೊರ ಹೋದ ನಂತರ ಮನೆಯವರು ಊಟ ಮಾಡುತ್ತಾರೆ.

ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಈ ಆಚರಣೆ ಇರಲಿಲ್ಲ. ಈ ಬಾರಿ ಗ್ರಾಮಸ್ಥರು ವಿಜೃಂಭಣೆಯಿಂದ ಯುಗಾದಿಗೂ ಮುನ್ನ ಆಚರಿಸಿದ್ದಾರೆ.

‘ಪ್ರತಿವರ್ಷವು ಈ ಹಬ್ಬವನ್ನು ಸಾಮರಸ್ಯದಿಂದ ಈ ಎರಡು ಗ್ರಾಮಗಳಲ್ಲಿ ಆಚರಿಸಿಕೊಡು ಬರಲಾಗುತ್ತಿದೆ. ಎಲ್ಲ ಜನರ ಸಹಕಾರ ಉತ್ತಮವಾಗಿದೆ. ಇದರಿಂದ ಹಬ್ಬವನ್ನು ಯಾವುದೇ ಸಮಸ್ಯೆಗಳಿಲ್ಲದೇ ಆಚರಿಸಿಕೊಂಡು ಬರುತ್ತಿದ್ದೇವೆ’ ಎಂದು ಗಣಗನೂರು ಗ್ರಾಮದ ಮುಖಂಡ ನಾಗಯ್ಯ ಅವರು ಹೇಳಿದರು.

ಆಚರಣೆಯ ಹಿನ್ನೆಲೆ ಏನು?

ಈ ವಿಶಿಷ್ಟ ಆಚರಣೆಯ ಹಿಂದೆ ಕಥೆ ಇದೆ ಎಂದು ಹೇಳುತ್ತಾರೆ ಊರಿನ ಮುಖಂಡರು.

‘ಬಸವಣ್ಣನ ಆಸ್ಥಾನದಲ್ಲಿ ಬಹಿಷ್ಕಾರಗೊಂಡ ಇಬ್ಬರು ಶರಣರು ಇಂದಿನ ಗಣಗನೂರು ಗ್ರಾಮದಲ್ಲಿ ಬಂದು ನೆಲೆಸುತ್ತಾರೆ. ಇವರು ಭಿಕ್ಷೆ ಬೇಡಿ ಆ ಗ್ರಾಮದ ಕೆಲವರಿಗೆ ಊಟ ಬಡಿಸಿಕೊಂಡು ಬರುತ್ತಾರೆ. ವಿಶೇಷವಾಗಿ ದಲಿತರಿಗೆ ಹೆಚ್ಚು ಆತಿಥ್ಯ ನೀಡುತ್ತಿರುತ್ತಾರೆ. ಇದನ್ನು ಸಹಿಸದ ಕೆಲವರು ಅವರಿಗೆ ಗ್ರಾಮದಿಂದ ಬಹಿಷ್ಕಾರ ಹಾಕುತ್ತಾರೆ. ಇದರಿಂದ ನೊಂದ ಅವರು, ‘ಮುಂದಿನ ದಿನಗಳಲ್ಲಿ ದಲಿತರಾಗಿಯೇ ಗ್ರಾಮಕ್ಕೆ ಬರುತ್ತೇವೆ’ ಎಂದು ಊರ ಹೊರಗಡೆ ಇರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೇ ಬಾವಿಯ ಸನಿಹದಲ್ಲಿ ಲಿಂಗ ಉದ್ಭವಿಸುತ್ತದೆ. ಅವುಗಳೇ ಕೆಂಬಾವಿ ಬೋಗೇಶ್ವರ ಹಾಗೂ ಗಂಗಾಧರೇಶ್ವರ’ ಎಂದು ಹಳ್ಳಿಕೆರೆ ಹುಂಡಿ ಗ್ರಾಮದ ಹಿರಿಯ ಮುಖಂಡ ಬಿ.ಮಾದಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅದೇ ಸಮಯದ ಈ ಭಾಗದಲ್ಲಿ ಚೋಳರ ಆಡಳಿತವಿದ್ದುದರಿಂದ ದೇವಸ್ಥಾನವನ್ನು ನಿರ್ಮಿಸಲಾಯಿತು. ಅಂದಿನಿಂದ ಈ ಗ್ರಾಮಗಳಲ್ಲಿ ಪರಿಶಿಷ್ಟರಿಗೆ ವೀರಶೈವರ ಮನೆಗಳಲ್ಲಿ ಅಗ್ರಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಜತೆಗೆ ಈ ದೇವರ ಹೆಸರಿನಲ್ಲಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.