ADVERTISEMENT

ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ; ಕಾಂಗ್ರೆಸ್‌ ಮಾತು ಯಾರೂ ಒಪ್ಪಲ್ಲ–ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2023, 12:22 IST
Last Updated 21 ಏಪ್ರಿಲ್ 2023, 12:22 IST
   

ಹನೂರು (ಚಾಮರಾಜನಗರ): ‘ವೀರಶೈವ ಲಿಂಗಾಯತರನ್ನು ಕಾಂಗ್ರೆಸ್‌ ಯಾವ ರೀತಿ ನಡೆಸಿಕೊಂಡಿದೆ ಎಂಬುದು ಜನರಿಗೆ ಗೊತ್ತು. ಚುನಾವಣೆ ಸಂದರ್ಭದಲ್ಲಿ ಯಾರೋ ಒಬ್ಬರು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಇದನ್ನು ಯಾರೂ ಒಪ್ಪುವುದಿಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಹೇಳಿದರು.

ಸಮೀಪದ ಕಾಮಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಎಲ್ಲ ವರ್ಗದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗುತ್ತಿದೆ. ಹಾಗಾಗಿಯೇ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಕಾಂಗ್ರೆಸ್‌ನ ಹೇಳಿಕೆಗಳು ಹಾಸ್ಯಾಸ್ಪದ’ ಎಂದರು.

ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಮೂಲಗುಂಪು ಮಾಡಲಾಗುತ್ತಿದೆಯೇ ಎಂದು ಕೇಳಿದ್ದಕ್ಕೆ, ‘ಅವರು 81ನೇ ವರ್ಷದಲ್ಲೂ ಕೆಲಸ ಮಾಡುತ್ತಿದ್ದಾರೆ. ಅವರ ರಟ್ಟೆ ಇನ್ನೂ ಗಟ್ಟಿ ಇದೆ. ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿ ಅಲ್ಲ. ಯಡಿಯೂರಪ್ಪ ಒಂದು ಹೆಜ್ಜೆ ಮುಂದೆ ಇಟ್ಟರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದು ವಿರೋಧ ಪಕ್ಷದವರಿಗೆ ಗೊತ್ತಿದೆ. ಬಿಜೆಪಿಯ ಹಿರಿಯರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಉತ್ತರಿಸಿದರು.

ADVERTISEMENT

ಸೋಮಣ್ಣ ಗೆಲುವಿಗೆ ಶ್ರಮ: ‘ವರುಣ ಕ್ಷೇತ್ರಕ್ಕೆ ಸೋಮಣ್ಣ ಬರಬೇಕು ಎಂದು ಪಕ್ಷ ನಿರ್ಧಾರ ಮಾಡಿದೆ. ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಎಲ್ಲ ನಾಯಕರು ಶ್ರಮ ಹಾಕಿ ಸೋಮಣ್ಣರನ್ನು ಗೆಲ್ಲಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ವಿಜಯೇಂದ್ರ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.