ADVERTISEMENT

ಮೇರು ನಟ ವಿಷ್ಣುವರ್ಧನ್ ಸ್ಮಾರಕ ನೆಲಸಮ: ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:42 IST
Last Updated 13 ಆಗಸ್ಟ್ 2025, 2:42 IST
<div class="paragraphs"><p>ವಿಷ್ಣುವರ್ಧನ್‌</p></div>

ವಿಷ್ಣುವರ್ಧನ್‌

   

ಚಾಮರಾಜನಗರ: ‘ಚಲನಚಿತ್ರ ರಂಗದ ಮೇರು ನಟ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮ ಮಾಡಿರುವುದು ತೀವ್ರ ಖಂಡನೀಯ. ಹಿಂದು ಧರ್ಮದ ಪ್ರಕಾರ ಅವರ ಸಮಾಧಿ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸ್ಮಾರಕ ನಿರ್ಮಾಣ ಮಾಡಬೇಕು’ ಎಂದು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಎಪಿಎಂಸಿ ಉಪಾಧ್ಯಕ್ಷ ರಾಮಚಂದ್ರ ಒತ್ತಾಯಿಸಿದರು.

‘ವಿಷ್ಣುವರ್ಧನ್‌ ಅವರ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಿರುವುದರಿಂದ ಅವರ ಅಭಿಮಾನಿಗಳಾದ ನಮಗೆ ತೀವ್ರ ನೋವು ಉಂಟಾಗಿದೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶ ಮಾಡಿ, ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರನ್ನು ನೇಮಕ ಮಾಡಿ, ಸ್ಮಾರಕವಿರುವ ಜಾಗವನ್ನು ಬಿಡಿಸಿಕೊಡಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

‘ನಟ ಬಾಲಕೃಷ್ಣ ಅವರಿಗೆ ಸರ್ಕಾರ 20 ಎಕರೆ ಜಮೀನು ಮಂಜೂರು ಮಾಡಿದ್ದು, ಸ್ಟುಡಿಯೋ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ. ಆದರೆ, ಅವರ ಕುಟುಂಬದವರು ಈಗಾಗಲೇ 10 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಇನ್ನುಳಿದ 10 ಎಕರೆ ಜಾಗದಲ್ಲಿ ಅವರು ಸ್ಟುಡಿಯೋ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ ಈ ಜಮೀನನ್ನು ವಾಪಸ್ ಪಡೆದುಕೊಳ್ಳಬೇಕು. ಈ ವಿಚಾರ ನ್ಯಾಯಾಲಯದಲ್ಲಿ ತೀರ್ಮಾನವಾಗಿದ್ದು, ಸರ್ಕಾರ ಕೂಡಲೇ ಕಾರ್ಯಗತ ಮಾಡಬೇಕು’ ಎಂದು ಒತ್ತಾಯಿಸಿದರು.

‘10 ಎಕರೆ ಜಮೀನನ್ನು ಮಾರಾಟ ಮಾಡಲು ಕುಟುಂಬದವರಿಗೆ ಯಾರು ಅನುಮತಿ ಕೊಟ್ಟಿದ್ದರು ಎಂಬುದನ್ನು ಡಾ. ವಿಷ್ಣುವರ್ಧನ್ ರವರ ಅಭಿಮಾನಿಗಳಾದ ನಮಗೆ ತಿಳಿಸಬೇಕು. ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಿರುವ ಬಗ್ಗೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿಕೊಡಬೇಕು. ಇಲ್ಲವಾದಲ್ಲಿ ಚಾಮರಾಜನಗರ ಜಿಲ್ಲೆಯ 5 ತಾಲ್ಲೂಕುಗಳ ವಿಷ್ಣುವರ್ಧನ್ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ. ಮುಂದಿನ ಡಾ. ವಿಷ್ಣುವರ್ಧನ್ ರವರ 75 ನೇ ಅಮೃತ ಮಹೋತ್ಸವ ನಡೆಯುವ ಮೊದಲೇ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೊಷ್ಠಿಯಲ್ಲಿ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಕೊಳ್ಳೇಗಾಲದ ಸಿದ್ದರಾಜನಾಯಕ, ಚಾಮರಾಜನಗರ ತಾಲ್ಲೂಕಿನ ರಾಜೇಂದ್ರ, ಪ್ರಕಾಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.