ADVERTISEMENT

ಚಾಮರಾಜನಗರ: ಕಿರಿದಾದ, ಕಚ್ಚಾ ರಸ್ತೆಯೇ ಪ್ರಮುಖ ಸಮಸ್ಯೆ

ಚಾಮರಾಜನಗರ 6ನೇ ವಾರ್ಡ್‌; ಚರಂಡಿ ವ್ಯವಸ್ಥೆಗೆ ಬೇಕಿದೆ ಕಾಯಕಲ್ಪ

ಸೂರ್ಯನಾರಾಯಣ ವಿ
Published 31 ಮಾರ್ಚ್ 2022, 19:31 IST
Last Updated 31 ಮಾರ್ಚ್ 2022, 19:31 IST
ಚಾಮರಾಜನಗರದ ಆರನೇ ವಾರ್ಡ್‌ನ ಮನೆಗಳ ಮುಂದಿರುವ ರಸ್ತೆಯೊಂದರ ನೋಟ
ಚಾಮರಾಜನಗರದ ಆರನೇ ವಾರ್ಡ್‌ನ ಮನೆಗಳ ಮುಂದಿರುವ ರಸ್ತೆಯೊಂದರ ನೋಟ   

ಚಾಮರಾಜನಗರ: ಇಲ್ಲಿನ ನಗರಸಭೆಯ 6ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬಹುತೇಕ ನಿವಾಸಿಗಳು ಸುಸಜ್ಜಿತ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ.

ಉತ್ತಮವಾಗಿರುವ ರಸ್ತೆಗಳು ಕೂಡ ಕಿರಿದಾಗಿದ್ದು, ನಾಲ್ಕು ಚಕ್ರದ ಎರಡು ಎರಡು ವಾಹನಗಳು ಎದುರು ಬದುರಾಗಿ ಬಂದರೆ ಸರಾಗವಾಗಿ ಸಂಚರಿಸಲು ಸಾಧ್ಯವಿಲ್ಲ. ಬಹುತೇಕ ಕಡೆಗಳಲ್ಲಿ ರಸ್ತೆಗಳಿಗೆ ಹೊಂದಿಕೊಂಡಂತೆಯೇ ಮನೆಗಳು ಇರುವುದರಿಂದ ರಸ್ತೆ ವಿಸ್ತರಿಸಲು ಅವಕಾಶ ಇಲ್ಲದಂತಾಗಿದೆ.

1,800 ಮಂದಿ ಮತದಾರರಿರುವ ಈ ವಾರ್ಡ್‌ನಲ್ಲಿ ಇತ್ತೀಚೆಗಷ್ಟೇ ಉಪ ಚುನಾವಣೆ ನಡೆದು ಎಸ್‌ಡಿಪಿಐನ ಅಫ್ಸರ್‌ ಪಾಷ ಅವರು ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ADVERTISEMENT

370ರಷ್ಟು ಕುಟುಂಬಗಳಿರುವ ವಾರ್ಡ್‌ನಲ್ಲಿ 3,000ದಷ್ಟು ಜನಸಂಖ್ಯೆ ಇದೆ. ಮುಸ್ಲಿಂ ಸಮುದಾಯದ 220 ಕುಟುಂಬಗಳಿದ್ದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 150 ಕುಟುಂಬಗಳಿವೆ. ಬಡವರು ಹಾಗೂ ಕೆಳ ಮಧ್ಯಮವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುಟ್ಟ ಪುಟ್ಟ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ, ಮನೆಗಳು ಒತ್ತೊತ್ತಾಗಿವೆ.

ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬೀದಿ ದೀಪಗಳ ವ್ಯವಸ್ಥೆಯೂ ಸರಿಯಾಗಿದೆ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿಗಳು.

‘ನೀರು ಪ್ರತಿ ದಿನ ಇಲ್ಲವೇ ದಿನ ಬಿಟ್ಟು ದಿನ ಬರುತ್ತಿದೆ. ಬೀದಿ ದೀಪಗಳ ವ್ಯವಸ್ಥೆಯೂ ಇದೆ. ಕಸ ಸಂಗ್ರಹಿಸುವ ಪೌರಕಾರ್ಮಿಕರು ಕೂಡ ಬರುತ್ತಾರೆ’ ಎಂದು ಸ್ಥಳೀಯ ನಿವಾಸಿ ಮಹಿಳೆಯೊಬ್ಬರು ತಿಳಿಸಿದರು.

ರಸ್ತೆಯೇ ಸಮಸ್ಯೆ: ವಾರ್ಡ್‌ನ ಪ್ರಮುಖ ರಸ್ತೆಗಳು ಡಾಂಬರೀಕರಣಗೊಂಡಿವೆ. ಆದರೆ ತೀರಾ ಕಿರಿದಾಗಿವೆ. ರಸ್ತೆ ಬದಿಯಲ್ಲಿರುವ ಚರಂಡಿ ತೆರೆದಿರುವುದರಿಂದ ವಾಹನ ಸವಾರರು ಹೆಚ್ಚು ಜಾಗರೂಕತೆಯಿಂದ ಇರಬೇಕು. ವಾಹನಗಗಳ ವೇಗಕ್ಕೆ ಕಡಿವಾಣ ಹಾಕಲು ಅಲ್ಲಲ್ಲಿ ರಸ್ತೆ ಉಬ್ಬುಗಳನ್ನು ಹಾಕಲಾಗಿದೆ. ಎರಡು ದೊಡ್ಡ ವಾಹನಗಳು ಬಂದಾರ ಸಂಚರಿಸಲು ಹರಸಾಹಸ ಪಡಬೇಕು.

ಬಡಾವಣೆಯ ಒಳಗಿರುವ ಹಲವು ರಸ್ತೆಗಳು ಇನ್ನೂ ಡಾಂಬರು ಕಂಡಿಲ್ಲ. ಕಚ್ಚಾ ರಸ್ತೆಯಲ್ಲೇ ನಿವಾಸಿಗಳು ಓಡಾಡಬೇಕಾಗಿದೆ. ಮಳೆಗಾಲದಲ್ಲಿ ಓಡಾಡುವುದಕ್ಕೆ ಕಷ್ಟ ಪಡಬೇಕು. ಈ ರಸ್ತೆಗಳೂ ಕಿರಿದಾಗಿವೆ.

ಕಟ್ಟಿಕೊಂಡ ಚರಂಡಿ: ವಾರ್ಡ್‌ ವ್ಯಾಪ್ತಿಯಲ್ಲಿ ಚರಂಡಿ ನಿರ್ವಹಣೆ ಸಮರ್ಪಕವಾಗಿಲ್ಲ. ಹಲವು ಕಡೆಗಳಲ್ಲಿ ಚರಂಡಿ ಕಟ್ಟಿಕೊಂಡಿದ್ದು, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಚರಂಡಿಗಳಿಗೆ ಹೊಂದಿಕೊಂಡ ಹಾಗೆಯೇ ಮನೆಗಳಿದ್ದು, ನಿವಾಸಿಗಳಿಗೂ ತೊಂ‌ದರೆಯಾಗಿದೆ.

‘ನಗರೋತ್ಥಾನ ಅಡಿ ರಸ್ತೆ ಅಭಿವೃದ್ಧಿ’
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್‌ ಸದಸ್ಯ ಅಫ್ಸರ್‌ ಪಾಷ ಅವರು, ‘ಉರ್ದು ಶಾಲೆ, ಮಸೀದಿ ಬಳಿಯ ರಸ್ತೆಗಳಿಗೆ ಡಾಂಬರು ಹಾಕಲಾಗಿದೆ. ಇನ್ನೂ ಕೆಲವು ರಸ್ತೆಗಳ ಅಭಿವೃದ್ಧಿ ಕೆಲಸ ಬಾಕಿ ಇದ್ದು, ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ ಇವುಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ರಸ್ತೆಗಳನ್ನು ಅಳತೆ ಮಾಡಿಸಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಲಾಗಿದೆ‘ ಎಂದು ಹೇಳಿದರು.

‘ಚರಂಡಿ ವ್ಯವಸ್ಥೆಯು ಹಳೆಯದಾಗಿದ್ದು, ಕೆಲವು ಕಡೆಗಳಲ್ಲಿ ಕೊಳಚೆ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ ಎಂಬುದು ನಿಜ. ಚರಂಡಿಗಳ ಸ್ವಚ್ಛತೆಗೂ ಗಮನಹರಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಫಲಕಗಳ ಅಳವಡಿಕೆಗೆ ಕ್ರಮ: ‘ವಾರ್ಡ್‌ನಲ್ಲಿರುವ ರಸ್ತೆಗಳು, ಮನೆಗಳ ವಿಳಾಸವನ್ನು ಗುರುತಿಸಲು ಕಷ್ಟವಾಗುತ್ತಿದೆ ಎಂಬ ದೂರುಗಳು ಬಂದಿದೆ. ಇದಕ್ಕಾಗಿ ಎಲ್ಲ ರಸ್ತೆಗಳಲ್ಲೂ ಫಲಕಗಳನ್ನು ಅಳವಡಿಸಲು ಪಕ್ಷದ ಮುಖಂಡರು, ಹಿರಿಯರು ಸಲಹೆ ನೀಡಿದ್ದಾರೆ. ಅದನ್ನು ಅನುಷ್ಠಾನಗೊಳಿಸಲಾಗುವುದು‘ ಎಂದು ಅಫ್ಸರ್‌ ಹೇಳಿದರು.

*
ವಾರ್ಡ್‌ ನಿವಾಸಿಗಳಿಗೆ ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಕಲ್ಪಿಸಿಕೊಡಲು ಶ್ರಮಿಸಲಾಗುತ್ತಿದೆ. ಜನರೊಂದಿಗೆ ನೇರ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ.
-ಅಫ್ಸರ್‌ ಪಾಷ, 6ನೇ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.