ಸಂತೇಮರಹಳ್ಳಿ: ಅಲ್ಲಲ್ಲಿ ಚರಂಡಿ ಕಟ್ಟಿಕೊಂಡು ರಸ್ತೆಗೆ ಹರಿಯುತ್ತಿರುವ ತ್ಯಾಜ್ಯ, ಹೊಲಸು ಹರಡಿಕೊಂಡು ಗಬ್ಬುನಾರುತ್ತಿರುವ ರಸ್ತೆ, ಅಶುತ್ವದಿಂದ ಕೂಡಿದ ಗ್ರಾಮದ ಪರಿಸರ..ಇದು ‘ಆದರ್ಶ ಗ್ರಾಮ’ ಯೋಜನೆಯಡಿ ಅಭಿವೃದ್ಧಿ ಕಾಣಬೇಕಾದ ಹೆಗ್ಗವಾಡಿಪುರ ಗ್ರಾಮದ ಪರಿಶಿಷ್ಟರ ಬಡಾವಣೆಯ ಚಿತ್ರಣ.
ಈ ಗ್ರಾಮದಲ್ಲಿ ಹೆಸರಿಗಷ್ಟೆ ಆದರ್ಶ ಗ್ರಾಮ ಯೋಜನೆಯ ಕಾಮಗಾರಿಗಳು ಸಾಕಾರಗೊಂಡಿದ್ದು ಮೂಲಭೂತ ಸಮಸ್ಯೆಗಳಿಂದ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ಚರಂಡಿ ಕಟ್ಟಿಕೊಂಡು ದುರ್ವಾಸನೆ ಬೀರುತ್ತಿದೆ, ತ್ಯಾಜ್ಯ ಸರಾಗವಾಗಿ ಹರಿಯಲು ಸಾಧ್ಯವಾಗದೆ ಅನೈರ್ಮಲ್ಯ ಕಾಡುತ್ತಿದ್ದು ಸಾಂಕ್ರಮಿಕ ರೋಗಗಳ ಭೀತಿ ಎದುರಾಗಿದೆ.
ಪರಿಶಿಷ್ಟರ ಬಡಾವಣೆಯಲ್ಲಿರುವ ಕುಡಿಯುವ ನೀರಿನ ತೊಂಬೆ ಸುತ್ತಲೂ ಕಳೆ ಗಿಡಗಳು ಹಬ್ಬಿಕೊಂಡಿದ್ದು ವಿಷಜಂತುಗಳ ಭೀತಿ ಆವರಿಸಿದೆ. ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ. ಪಅಶುಚಿತ್ವದ ನಡುವೆಯೇ ಗ್ರಾಮಸ್ಥರು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರುತ್ತಾರೆ ಗ್ರಾಮಪಂಚಾಯಿತಿ ಸದಸ್ಯ ಎಚ್.ಎನ್.ಶಿವಕುಮಾರ್.
ಹೊಸ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಆರಂಭಿಸದೆ ನಿವಾಸಿಗಳು ಮನೆಗಳ ಮುಂಭಾಗವೇ ಗುಂಡಿಗಳನ್ನು ತೆಗೆದು ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹರಿಸುತ್ತಿದ್ದಾರೆ. ಇದರಿಂದ ಅಂತರ್ಜಲ ಕಲುಷಿತಗೊಳ್ಳುವ ಆತಂಕ ಎದುರಾಗಿದೆ.
6 ವರ್ಷದ ಹಿಂದೆ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ರಸ್ತೆಯ ಒಂದು ಭಾಗದಲ್ಲಿ ಚರಂಡಿ ನಿರ್ಮಿಸಿ ಮತ್ತೊಂದು ಭಾಗದ ಚರಂಡಿ ತ್ಯಾಜ್ಯ ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಲ್ಲ. ಮನೆಗಳ ಮುಂಭಾಗವೇ ಕೊಳಚೆ ನಿಂತು ಅನೈರ್ಮಲ್ಯಕ್ಕೆ ಕಾರಣವಾಗಿದೆ.
ಸಮಸ್ಯೆಗಳನ್ನು ಬಗೆ ಹರಿಸುವಂತೆ ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿಕೊಂಡಿದ್ದರೂ, ಪ್ರತಿಭಟನೆ ನಡೆಸಿದ್ದರೂ ಗಮನ ಹರಿಸಿಲ್ಲ. ಸಂತೇಮರಹಳ್ಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಸಮಸ್ಯೆ ಬಗೆಹರಿಸುವಂತೆ ಪಿಡಿಒಗೆ ಸೂಚನೆ ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಆದರ್ಶ ಗ್ರಾಮ ಯೋಜನೆಯಡಿ ಬಿಡುಡಗೆಯಾದ ಅನುದಾನವೂ ಸದ್ಬಳಕೆಯಾಗಿಲ್ಲ ಎಂದು ಗ್ರಾಮದ ಮುಖಂಡ ಮಾದೇಶ್ ದೂರುತ್ತಾರೆ.
ಹೆಗ್ಗವಾಡಿಪುರ ಗ್ರಾಮಕ್ಕೆ ಭೇಟಿನೀಡಿ ಸಮಸ್ಯೆ ಪರಿಶೀಲಿಸಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.ಶ್ರೀಕಂಠರಾಜೇ ಅರಸ್ ತಾಲ್ಲೂಕು ಪಂಚಾಯಿತಿ ಇಒ
‘ನೀರಿನ ಘಟಕ ಶೌಚಾಲಯ ನಿರ್ಮಿಸಿ’
ಗ್ರಾಮದ ಸಮಗ್ರ ಅಭಿವೃದ್ಧಿಗೆ ಎರಡು ವರ್ಷಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₹ 1 ಕೋಟಿ ಅನುದಾನ ಬಿಡುಗಡೆಯಾಗಿತ್ತು. ₹ 30 ಲಕ್ಷ ವೆಚ್ಚದಲ್ಲಿ ಬಡಾವಣೆಯ ಒಂದು ರಸ್ತೆಗೆ ಮಾತ್ರ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಉಳಿದ ₹ 70 ಲಕ್ಷದ ಕಾಮಗಾರಿ ನಡೆದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಉಳಿಕೆ ಅನುದಾನ ಬಳಸಿಕೊಂಡು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ ನಿರ್ಮಿಸಬೇಕು ಬಡಾವಣೆಯ ಕೆಲವು ಭಾಗಗಳಲ್ಲಿ ರಸ್ತೆಗಳ ಅಭಿವೃದ್ಧಿಯಾಗಿಲ್ಲ. ಮಳೆ ಬಂದಾಗ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.