ADVERTISEMENT

ಯಳಂದೂರು: ನಾಲೆ ಸ್ವಚ್ಛತೆ, ರಸ್ತೆ ದುರಸ್ತಿ ಮರೀಚಿಕೆ

ನಾಮ್‌ ಕೇ ವಾಸ್ತೇ ಕೆಲಸ, ರೈತರ ಆರೋಪ, ರಸ್ತೆ ಸಂಚಾರ ಅಪಾಯಕಾರಿ

ನಾ.ಮಂಜುನಾಥ ಸ್ವಾಮಿ
Published 10 ಜುಲೈ 2022, 19:30 IST
Last Updated 10 ಜುಲೈ 2022, 19:30 IST
ಕಾಲುವೆ ಒಳ ಭಾಗದ ಮಣ್ಣನ್ನು ತೆಗೆದು ಅಲ್ಲಲ್ಲಿ ಸುರಿದು, ಅರೆಬರೆಯಾಗಿ ಕೆಲಸ ಮುಗಿಸಲಾಗಿದೆ
ಕಾಲುವೆ ಒಳ ಭಾಗದ ಮಣ್ಣನ್ನು ತೆಗೆದು ಅಲ್ಲಲ್ಲಿ ಸುರಿದು, ಅರೆಬರೆಯಾಗಿ ಕೆಲಸ ಮುಗಿಸಲಾಗಿದೆ   

ಯಳಂದೂರು:ತಾಲ್ಲೂಕಿನಲ್ಲಿ ಹಾದು ಹೋಗಿರುವ ನೀರಾವರಿ ಕಾಲುವೆಗಳಲ್ಲಿ ಕಳೆ ಜೊಂಡುಗಟ್ಟಿ ಬೆಳೆದಿದೆ. ಕಾಲುವೆ ಅಕ್ಕಪಕ್ಕದ ರಸ್ತೆಗಳು ಕುಸಿದು, ಕೊರಕಲಾಗಿವೆ. ರೈತರು ಮಳೆಗಾಲದಲ್ಲಿ ಹೊಲ, ಗದ್ದೆಗಳಿಗೆ ತೆರಳಲು ಆಗದ ಪರಿಸ್ಥಿತಿ ಇದೆ. ವಾಹನಗಳ ಸಂಚಾರಕ್ಕೂ ತೊಡಕಾಗಿದೆ.

ಕಾವೇರಿ ನೀರಾವರಿ ನಿಗಮವು ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಲು ಸಿದ್ಧತೆ ನಡೆಸುತ್ತಿದ್ದು, ಯಂತ್ರ ಬಳಸಿ ಸ್ವಚ್ಛತೆ ಮತ್ತು ಕೊರಕಲು ಮುಚ್ಚುವ ಕೆಲಸ ಆರಂಭಿಸಿದೆ. ಆದರೆ, ಗುಣಮಟ್ಟದ ಕೆಲಸ ನಡೆಯುತ್ತಿಲ್ಲ ಎಂದು ತಾಲ್ಲೂಕಿನ ರೈತರು ಆರೋಪಿಸಿದ್ದಾರೆ.

ಸಂತೇಮರಹಳ್ಳಿಯಿಂದ ಮುಖ್ಯ ಕಾಲುವೆ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಯಳಂದೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳತ್ತ ನೀರು ಹರಿಸಲಾಗುತ್ತದೆ. ನಡುವೆ ಉಪ ನಾಲೆಗಳ ಮೂಲಕ ನೀರು ಹರಿಯುತ್ತದೆ. ಗೂಳಿಪುರದಿಂದ ಇತರೆಡೆ ಸಂಪರ್ಕ ಕಲ್ಪಿಸುವ ನಾಲೆ ಮತ್ತು ರಸ್ತೆ ಹಲವಾರು ವರ್ಷಗಳಿಂದ ದುರಸ್ತಿ ಕಂಡಿಲ್ಲ. ಇಲ್ಲಿ ಸಂಚಾರವೂ ದುಸ್ತರವಾಗಿದೆ. ಇಂತಹ ಸ್ಥಿತಿಯಲ್ಲಿ ಕಾವೇರಿ ನೀರಾವರಿ ನಿಗಮವು ನೀರು ಬಿಡುವ ಮೊದಲು ಸ್ವಚ್ಛತಾ ಕಾರ್ಯ ಆರಂಭಿಸಿದೆ. ಆದರೆ, ಕಾಮಗಾರಿಯನ್ನು ವ್ಯವಸ್ಥಿತವಾಗಿ ಕೈಗೊಳ್ಳದೆ ತೋರಿಕೆಗಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಈ ಭಾಗದ ಕೃಷಿಕರು ದೂರಿದ್ದಾರೆ.

ADVERTISEMENT

‘ಕಾಲುವೆ ನಿರ್ಮಾಣಕ್ಕಾಗಿ ನಮ್ಮ ಹೊಲ, ಗದ್ದೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದೇವೆ. ಕಾಲುವೆ ರಸ್ತೆಗಳು 35 ವರ್ಷಗಳಿಂದ ಬಳಕೆಯಲ್ಲಿ ಇವೆ. ಈಗ ರಸ್ತೆಗಳು ಅಲ್ಲಲ್ಲಿ ಕುಸಿದಿವೆ. ಗಿಡಗಂಟಿ, ಮುಳ್ಳಿನ ಪೊದೆಗಳು ರಸ್ತೆಗೆ ಆತುಕೊಂಡಿವೆ. ಹಾದಿ ವಿರೂಪವಾಗಿ, ಸಂಚಾರ ದುಸ್ತರವಾಗಿದೆ. ಎತ್ತಿನಗಾಡಿ, ಆಟೊ, ದ್ವಿಚಕ್ರವಾಹನ, ಸೈಕಲ್ ಬಳಕೆಗೆ ಯೋಗ್ಯವಾಗಿಲ್ಲ. ಮಳೆ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಈ ಸಂದರ್ಭ ರೈತರು ಜೀವ ಹಿಡಿದುಕೊಂಡು ಕೃಷಿ ವಸ್ತುಗಳನ್ನು ಸಾಗಣೆ ಮಾಡಬೇಕು. ಕಬ್ಬು, ತೆಂಗು, ಬಾಳೆ ಕೊಯ್ಲು ಮಾಡಿದರೆ ಮನೆಗೆ ಪೂರೈಸಲು ತುಂಬ ಕಷ್ಟ ಪಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.

ಬಿಲ್‌ಗಷ್ಟೇ ಆದ್ಯತೆ: ‘ಜುಲೈ ತಿಂಗಳಲ್ಲಿ ಕಬಿನಿ ನಾಲೆಗೆ ನೀರು ಹರಿಸುವಾಗ ಕಾಲುವೆ ಸ್ವಚ್ಛಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಹಳ್ಳ ಬಿದ್ದ ರಸ್ತೆ, ಭೂ ತಳಭಾಗದಲ್ಲಿ ಕೊರೆದು, ನೀರು ಕಾಲುವೆಯತ್ತ ನುಗ್ಗುವ ಸ್ಥಳದತ್ತ ಎಂಜಿನಿಯರ್‌ಗಳು ಗಮನ ನೀಡುವುದಿಲ್ಲ. ಆದರೆ, ಜೆಸಿಬಿ ಯಂತ್ರಗಳನ್ನು ಬಳಸಿ ಕೆಲಸ ಮಾಡುವ ಫೋಟೊ ತೆಗೆದುಕೊಂಡು ಹೋಗುತ್ತಾರೆ. ಮುಂದಿನ ವರ್ಷದ ತನಕ ಇತ್ತ ಗಮನ ನೀಡುವುದಿಲ್ಲ. ಇದರಿಂದ ಈ ಭಾಗದ ಕಾಲುವೆ ರಸ್ತೆ, ಹಳ್ಳ ಕೊಳ್ಳ, ಕಾಲುವೆ ದುರಸ್ತಿ ಎಂಬುದು ಮರೀಚಿಕೆಯಾಗಿದೆ. ಶ್ರಮಿಕರು ಮತ್ತು ಕೃಷಿಕರು ಹಿಡಿ ಶಾಪ ಹಾಕುತ್ತಲೇ ದಿನ ನೂಕಬೇಕಿದೆ. ಬಿಲ್‌ಗಾಗಿ ದುರಸ್ತಿ ನಾಟಕವಾಡುತ್ತಾರೆ’ ಎಂದು ರೈತ ಅಂಬಳೆ ಶಿವಶಂಕರಮೂರ್ತಿ ದೂರಿದರು.

ಸಂಚಾರ ಮಾಡಿದರೆ ಸಂಚಕಾರ!

ಸಂತೇಮರಹಳ್ಳಿಯಿಂದ ಗಂಗವಾಡಿ ಮುಖ್ಯ ಕಾಲುವೆ ರಸ್ತೆಯಲ್ಲಿ ಸಂಚಾರ ಮಾಡಿದರೆ ಜೀವಕ್ಕೇ ಸಂಚಕಾರ ಬರುವ ಸ್ಥಿತಿ ಇದೆ.

‘ಗುಂಡಿ ಬಿದ್ದ ರಸ್ತೆ, ಕುಸಿದ ಸ್ಥಳಗಳನ್ನು ಆವರಿಸಿದ ಮುಳ್ಳಿನ ಪೊದೆಗಳು ಕಾಲುವೆ ಹಾಗೂ ರಸ್ತೆಯನ್ನು ಯಾವ ರೀತಿ ನಿರ್ವಹಣೆ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತವೆ. ಈ ಬಗ್ಗೆ ನೀರಾವರಿ ಇಲಾಖೆಗೆ ದೂರು ನೀಡಿದರೂ ಪ್ರಯೋಜನ ಇಲ್ಲ. ಅಧಿಕಾರಿಗಳು ಮುಂಗಾರು ಅವಧಿಗೆ ಮಾತ್ರ ದುರಸ್ತಿ ಮಾಡದೆ, ಶಾಶ್ವತ ಅಭಿವೃದ್ಧಿ ಯೋಜನೆ ರೂಪಿಸಬೇಕು’ ಎಂದು ಗೂಳಿಪುರ ಗ್ರಾಮದ ಮಹದೇವನಾಯಕ ಹಾಗೂ ಬಂಗಾರು ಅವರು ಒತ್ತಾಯಿಸಿದರು.

ಪ್ರಸ್ತಾವ ಸಲ್ಲಿಕೆ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಿಗಮದ ಸಂತೇಮರಹಳ್ಳಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಉಮೇಶ್‌ ಅವರು, ‘ಸಂತೆಮರಹಳ್ಳಿಯಿಂದ ಆರಂಭವಾಗುವ ಮುಖ್ಯ ಕಾಲುವೆ ಮತ್ತು ಉಪ ಕಾಲುವೆಗಳ ದುರಸ್ತಿಗೆ ಈಗಾಗಲೇ ಪ್ರಸ್ತಾವ ಸಿದ್ಧಪಡಿಸಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗಾಗಲೇ ಉಪಕಾಲುವೆ 44 ಮತ್ತು 46 ದುರಸ್ತಿ ಆಗಿದೆ. ಉಪ ಕಾಲುವೆ 45ರ ದುರಸ್ತಿಯಾಗಬೇಕಾಗಿದ್ದು, ಶೀಘ್ರದಲ್ಲೇ ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.