ADVERTISEMENT

ಬಿಸಿಲ ಝಳ; ಅಣೆಕಟ್ಟೆ,ನದಿಗಳು ಭಣ ಭಣ: ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟ ರೈತರು

ನಾ.ಮಂಜುನಾಥ ಸ್ವಾಮಿ
Published 3 ಏಪ್ರಿಲ್ 2025, 5:17 IST
Last Updated 3 ಏಪ್ರಿಲ್ 2025, 5:17 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟಕ್ಕೆ ಹೊಂದಿಕೊಂಡ ಆಮೆಕೆರೆ ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕುಸಿದು ಭಣಗುಟ್ಟುತ್ತಿರುವುದು
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟಕ್ಕೆ ಹೊಂದಿಕೊಂಡ ಆಮೆಕೆರೆ ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕುಸಿದು ಭಣಗುಟ್ಟುತ್ತಿರುವುದು    

ಯಳಂದೂರು: ಮುಂಗಾರು ಸಮಯದಲ್ಲಿ ತುಂಬಿ ತುಳುಕಿದ್ದ ಆಣೆಕಟ್ಟೆ, ಕೆರೆ, ಜಲಾವರಗಳು ಬಿಸಿಲ ದಗೆಗೆ ಬರಿದಾಗುವತ್ತ ಸಾಗಿವೆ. ಘಟ್ಟ ಪ್ರದೇಶಗಳಿಂದ ಸದಾ ಜಿನುಗುತ್ತಿದ್ದ ನೀರಿನ ಹರಿವು ಸ್ಥಗಿತವಾಗಿದೆ. ಜುಳುಜುಳ ನೀನಾದ ಹೊಮ್ಮಿಸುತ್ತಿದ್ದ ಡ್ಯಾಂಗಳಲ್ಲಿ ನೀರಿನ ಮಟ್ಲ ಕುಸಿಯುತ್ತಿದ್ದು ವರುಣನ ಆಗಮನಕ್ಕೆ ಕಾದು ಕುಳಿತಿವೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಹೊಂದಿಕೊಂಡಂತೆ ‌ಮೂರು ಆಣೆಕಟ್ಟೆಗಳು, ಅಭಯಾರಣ್ಯದ ನಡುವಿನಲ್ಲಿರುವ ಹತ್ತಾರು ಜಲಮೂಲಗಳು, ಸಣ್ಣಪುಟ್ಟ ನೀರಿನ ಚಿಲುಮೆಗಳು, ಗ್ರಾಮಾಂತರ ಭಾಗಗಳಲ್ಲಿರುವ ಕೆರೆ–ಕುಂಟೆಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ.

ಸಣ್ಣಪುಟ್ಟ ಜಲಧಾರೆಗಳು ಬತ್ತಿದ್ದು ಕಳಾಹೀನವಾಗಿವೆ. ಹೊರ ವಲಯದ ಕಾಲುವೆಗಳಲ್ಲಿ ನೀರಿನ ಪಸೆ ಆರಿದೆ. ಬೆಟ್ಟದಿಂದ ಇಳಿಯುತ್ತಿದ್ದ ಝರಿಗಳು ಸ್ತಬ್ಧವಾಗಿವೆ. ಈ ಬಾರಿ ಬಿಸಿಲಿನ ಝಳ ನಿರೀಕ್ಷೆಗೂ ಮೀರಿ ಹೆಚ್ಚಾಗಿರುವುದರಿಂದ ಜಲ ಮೂಲಗಳಲ್ಲಿ ನೀರು ಬತ್ತುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಕಾಡುವ ಆತಂಕ ಶುರುವಾಗಿದೆ.

ADVERTISEMENT

3 ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಸಮೃದ್ಧವಾಗಿ ಮಳೆ ಸುರಿದಿತ್ತು. ಅಣೆಕಟ್ಟೆ, ಕೆರೆಕಟ್ಟೆಗಳಲ್ಲಿ ನೀರು ತುಂಬಿ ತುಳುಕಿತ್ತು. 15 ವರ್ಷಗಳ ನಂತರ ಕೆರೆಗಳು ಕೋಡಿ ಬಿದ್ದಿದ್ದವು. ರೈತರು ಜಲಪೂಜೆ ನೆರವೇರಿಸಿ ಸಂಭ್ರಮಿಸಿದ್ದರು. ಜಲಮೂಲಗಳನ್ನು ಬಳಸಿಕೊಂಡು ಉತ್ತಮ ಫಸಲು ತೆಗೆದಿದ್ದರು. 

ಸುವರ್ಣಾವತಿ ನದಿಯಲ್ಲೂ ವರ್ಷಪೂರ್ತಿ ನೀರು ಹರಿದ ಪರಿಣಾಮ ಜನ ಮತ್ತು ಜನುವಾರುಗಳ ದಾಹ ನೀಗಿತ್ತು. ಅಂತರ್ಜಲ ಪ್ರಮಾಣವೂ ಏರಿಕೆ ಕಂಡಿತ್ತು. ಆದರೆ, ಈಚಿನ ವರ್ಷಗಳಲ್ಲಿ ಮಳೆ ಮಳೆಯ ಋತುಗಳು ಕೈಹಿಡಿಯದ ಪರಿಣಾಮ ನೀರಿನ ಕೊರತೆ ಕಾಣುತ್ತಿದೆ ಎನ್ನುತ್ತಾರೆ ರೈತ ಆಮೆಕೆರೆ ಸುರೇಶ್.

ತಾಲ್ಲೂಕಿನ ರೈತರು ಕೆರೆ, ಕಾಲುವೆ, ನದಿ ನೀರು ಬಳಸಿ ಸಾಗುವಳಿ ಮಾಡುತ್ತಾರೆ. ಕಾಡಂಚಿನ ಬೇಸಾಯಗಾರರು ಬೇಸಿಗೆ ಸಂದರ್ಭ ವ್ಯವಸಾಯಕ್ಕೆ ಅಣೆಕಟ್ಟೆ ನೀರು ಬಳಸಿ ಸಣ್ಣ ಪ್ರಮಾಣದ ಬೆಳೆ ತೆಗೆಯುತ್ತಾರೆ. ಯುಗಾದಿ ನಂತರ ಕಾಡಂಚಿನ ರೈತರು ಮುಗಿಲು ನೋಡಿ ಬಿತ್ತನೆಗೆ ಸಜ್ಜಾಗುತ್ತಾರೆ, ಉತ್ತಮ ಮಳೆ ಸುರಿದರೆ ಅಲ್ಪಾವಧಿ ಬೆಳೆ ತೆಗೆಯಲು ಮುಂದಾಗುತ್ತಾರೆ. ಆದರೆ, ಈ ವರ್ಷ ಕಾಡಿನ ಸುತ್ತಮುತ್ತ ವರ್ಷದ ಮೊದಲ ಮಳೆಯ ವೈಭವ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಬಿಳಿಗಿರಿಬೆಟ್ಟದ ಕಾಫಿ ಬೆಳೆಗಾರ ಬೊಮ್ಮಯ್ಯ.

ಬತ್ತಿದ ತೊರೆ ಜಲಮೂಲ:

ಜಿಲ್ಲೆಯಲ್ಲಿ ಬಿಆರ್‌ಟಿ ಕಾನನ ಅತಿ ಹೆಚ್ಚು ಮಳೆ ಆಕರ್ಷಿಸುವ ತಾಣವಾಗಿದ್ದು ಸಹಜವಾಗಿ ನೀರಿನ ಸಂಪನ್ಮೂಲ ಹೇರಳವಾಗಿ ಇದೆ. ಆದರೆ ಈಚಿನ ವರ್ಷಗಳಲ್ಲಿ ಇಲ್ಲಿನ ಮಳೆ ಕಾಡುಗಳಲ್ಲೂ ನೀರಿನ ಕೊರತೆ ಕಾಡಿದೆ. ವಾರ್ಷಿಕ 250 ಸೆಂ.ಮೀ ಮಳೆ ಸುರಿದರೆ ಸೋಮರಸನಕರೆ, ಆಮೆಕೆರೆ, ಕೃಷ್ಣಯ್ಯನಕಟ್ಟೆ, ಬೆಲ್ಲತ್ತ ಕೆರೆಗಳು ವರ್ಷಪೂರ್ತಿ ವನ್ಯಜೀವಿಗಳ ದಾಹವನ್ನು ನೀಗಿಸುತ್ತವೆ. ಮಳೆ ಪ್ರಮಾಣ 150 ಸೆಂ.ಮೀ.ಗಿಂತಲೂ ಕಡಿಮೆಯಾದರೆ ನೀರಿನ ಸಮಸ್ಯೆ ಕಾಡಲಿದೆ ಎನ್ನುತ್ತಾರೆ ಪರಿಸರ ತಜ್ಞರು.

ಕಾಡಿನಲ್ಲಿ ಕೃತಕ ಕೆರೆಗಳ ನಿರ್ಮಾಣ
ಕಾಡು ಪ್ರಾಣಿಗಳು ನೀರು ಹರಸಿ ಕಾಡಿನಿಂದ ನಾಡಿಗೆ ಹೋಗುವುದನ್ನು ತಡೆಯಲು ಕೃತಕ ಕಿರು ಕೆರೆಗಳನ್ನು ನಿರ್ಮಿಸಲಾಗಿದೆ 30ರಷ್ಟು ಚಿಕ್ಕ ಮತ್ತು ಮಾಧ್ಯಮ ಗಾತ್ರದ ನೈಸರ್ಗಿಕ ಕೆರೆಗಳು ಅಣೆಕಟ್ಟೆ ಹಾಗೂ ಜಲಾಶಯಗಳಲ್ಲಿ ತಿಂಗಳಿಗೆ ಆಗುವಷ್ಟು ನೀರಿನ ಲಭ್ಯತೆ ಇದೆ. ಏಪ್ರಿಲ್ ಅಂತ್ಯದೊಳಗೆ ಮಳೆ ಬರುವ ನಿರೀಕ್ಷೆ ಇದ್ದು ಕಾಡು ಪ್ರಾಣಿಗಳಿಗೆ ಸಮೃದ್ಧ ನೀರು ಸಿಗಲಿದೆ ಎಂದು ಆರ್‌ಎಫ್‌ಒ ನಾಗೇಂದ್ರ ನಾಯಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.