ADVERTISEMENT

ಚಾಮರಾಜನಗರ| ಪ್ರಧಾನಿಗೆ ಹುಲಿ ಏಕೆ ಕಾಣಿಸಲಿಲ್ಲ: ನಡೆದಿದೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 4:54 IST
Last Updated 10 ಏಪ್ರಿಲ್ 2023, 4:54 IST
ಪ್ರಧಾನಿ ಮೋದಿ ಭಾನುವಾರ ಬಂಡೀಪುರದಲ್ಲಿ ಸಫಾರಿ ಹೋಗಿದ್ದ ವೇಳೆ ಕಾಣಸಿಕ್ಕಿದ ಕಾಡೆಮ್ಮೆಗಳ ಹಿಂಡು -ಪಿಟಿಐ ಚಿತ್ರ
ಪ್ರಧಾನಿ ಮೋದಿ ಭಾನುವಾರ ಬಂಡೀಪುರದಲ್ಲಿ ಸಫಾರಿ ಹೋಗಿದ್ದ ವೇಳೆ ಕಾಣಸಿಕ್ಕಿದ ಕಾಡೆಮ್ಮೆಗಳ ಹಿಂಡು -ಪಿಟಿಐ ಚಿತ್ರ   

ಚಾಮರಾಜನಗರ: ಪ್ರಧಾನಿ ಮೋದಿ ಬಂಡೀಪುರದಲ್ಲಿ 22 ಕಿ.ಮೀ ಸಫಾರಿ ಮಾಡಿದರೂ ಹುಲಿ ಕಾಣಿಸಿಕೊಂಡಿಲ್ಲ ಎಂಬ ವಿಷಯ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿತ್ತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ವಿಚಾರವನ್ನು ಪ್ರಸ್ತಾಪಿಸಿ ಮೋದಿಯವರ ಕಾಲೆಳೆದರು. ಟ್ರೋಲ್‌ ಮಾಡಿದರು.

ಬಂಡೀಪುರ ಸಫಾರಿ ವ್ಯಾಪ್ತಿಯಲ್ಲಿ ಪ್ರತಿ ದಿನ ಅಲ್ಲದಿದ್ದರೂ, ಆಗಾಗ ಹುಲಿ ಕಾಣಿಸಿಕೊಳ್ಳುತ್ತವೆ. ಮೋದಿ ಭೇಟಿ ಕಾರಣಕ್ಕೆ ಇದೇ 6 ರಿಂದಲೇ ಸಫಾರಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಪ್ರವಾಸಿಗರ ಭೇಟಿ ಸ್ಥಗಿತಗೊಂಡಿತ್ತು.

ADVERTISEMENT

ಬೆಳಗಿನ ಸಫಾರಿಯಲ್ಲಿ ಹುಲಿಗಳ ದರ್ಶನ ಹೆಚ್ಚಾಗುತ್ತದೆ. ಭಾನುವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಪ್ರಧಾನಿಯವರು ಸಫಾರಿಗೆ ಹೋಗಿದ್ದರೂ, ಹುಲಿ ಯಾಕೆ ಕಾಣಿಸಿಕೊಳ್ಳಲಿಲ್ಲ ಎಂಬ ಬಗ್ಗೆ ಅಧಿಕಾರಿಗಳ ನಡುವೆಯೂ ಚರ್ಚೆ ನಡೆದಿದೆ.

ಭೇಟಿ ಸಿದ್ಧತೆ ಕಾರಣವೇ?: ಪ್ರಧಾನಿ ಭೇಟಿಗಾಗಿ ಬಂಡೀಪುರದಲ್ಲಿ ವಾರದಿಂದಲೂ ಸಿದ್ಧತೆ ನಡೆಯುತ್ತಿತ್ತು. ಅರಣ್ಯ ಇಲಾಖೆ ಸಿದ್ಧತೆಯ ಜೊತೆಗೆ ಪ್ರಧಾನಿ ಭದ್ರತೆ ಹೊಣೆ ಹೊತ್ತಿರುವ ಎಸ್‌ಪಿಜಿ ಅಧಿಕಾರಿಗಳು, ಸಿಬ್ಬಂದಿ ಕೂಡ ನಾಲ್ಕು ದಿನಗಳ ಹಿಂದೆಯೇ ಬಂದು ಸಿದ್ಧತೆ ಕೈಗೊಂಡಿದ್ದರು. ಸಫಾರಿ ರಸ್ತೆಯ ದುರಸ್ತಿ, ವಾಹನಗಳ ತಾಲೀಮು ಸೇರಿದಂತೆ ಪ್ರತಿ ದಿನ ಆ ಮಾರ್ಗದಲ್ಲಿ ವಾಹನಗಳು, ಜನರ ಓಡಾಟ ಹೆಚ್ಚಾಗಿತ್ತು. ಇದರೊಂದಿಗೆ ಭದ್ರತಾ ಸಿಬ್ಬಂದಿ ಕೂಡ ಓಡಾಟ ಮಾಡುತ್ತಿದ್ದರು. ಇದು ವನ್ಯಜೀವಿಗಳು ಅದರಲ್ಲೂ ವಿಶೇಷವಾಗಿ ಹುಲಿಗಳ ಚಲನವಲನಗಳ ಮೇಲೆ ಪರಿಣಾಮ ಬೀರಿರಬಹುದು ಎಂದು ಹೇಳಲಾಗುತ್ತಿದೆ. ಭಾನುವಾರ ಸಫಾರಿ ಸಂದರ್ಭದಲ್ಲಿ 10 ವಾಹನಗಳು ಸಂಚರಿಸಿದ್ದವು.

ಈ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಮಾತನಾಡದಿದ್ದರೂ, ಕೆಳ ಹಂತದ ಸಿಬ್ಬಂದಿ, ಅಧಿಕಾರಿಗಳು ಖಾಸಗಿಯಾಗಿ ಇದರ ಬಗ್ಗೆಯೇ ಚರ್ಚಿಸುತ್ತಿದ್ದಾರೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವನ್ಯಜೀವಿ ತಜ್ಞ ಕೃಪಾಕರ, ‘ಹುಲಿಗಳು ಸೂಕ್ಷ್ಮ ಪ್ರಾಣಿಗಳು. ಸಂಕೋಚ ಸ್ವಭಾವದವು. ಗೌಜಿ ಗದ್ದಲ ಇದ್ದ ಕಡೆ ಅವು ಕಾಣಿಸಿಕೊಳ್ಳುವುದಿಲ್ಲ. ಹುಲಿಯೋಜನೆ ಘೋಷಣೆಯಾದ ಸಂದರ್ಭಕ್ಕೆ ಹೋಲಿಸಿದರೆ ಈಗ ಹುಲಿಗಳಲ್ಲಿ ಆ ಮಟ್ಟಿಗಿನ ಅಂಜಿಕೆ ಕಾಣಿಸುತ್ತಿಲ್ಲ. ಆದರೆ, ಜನರ ಓಡಾಟ ಹೆಚ್ಚಿದ್ದರೆ ಅವು ದೂರ ಉಳಿಯುತ್ತವೆ. ಪ್ರಧಾನಿ ಭೇಟಿ ಸಂದರ್ಭದಲ್ಲಿ ಶಿಷ್ಟಾಚಾರಗಳಿರುತ್ತವೆ. ಬಿಗಿ ಭದ್ರತೆ ಮಾಡಬೇಕಾಗುತ್ತದೆ. ಅರಣ್ಯ ಇಲಾಖೆ, ಎಸ್‌ಪಿಜಿ ಅಧಿಕಾರಿಗಳು ನಾಲ್ಕೈದು ದಿನಗಳಿಂದ ಸಿದ್ಧತೆ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಇದು ಸಹಜವಾಗಿ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿರಬಹುದಾದ ಸಾಧ್ಯತೆ ಹೆಚ್ಚಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.