ADVERTISEMENT

ಹನೂರು | ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಿ: ಸ್ಥಳೀಯರ ಮನವಿ

ದಿನ್ನಳ್ಳಿ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಅರಣ್ಯಾಧಿಕಾರಿಗಳ ಸೌಹಾರ್ದ ಸಭೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:25 IST
Last Updated 16 ಅಕ್ಟೋಬರ್ 2025, 2:25 IST
ಹನೂರು ತಾಲ್ಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಬುಧವಾರ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು
ಹನೂರು ತಾಲ್ಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಬುಧವಾರ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು   

ಹನೂರು: ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ತಾಲ್ಲೂಕಿನ ಮೀಣ್ಯಂ ಗ್ರಾಮದಲ್ಲಿ ಬುಧವಾರ ಅರಣ್ಯಾಧಿಕಾರಿಗಳು ಸ್ಥಳೀಯರೊಂದಿಗೆ ಸಭೆ ನಡೆಸಿದರು.

ವಿಶಾಲವಾಗಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಕಾಡುಪ್ರಾಣಿಗಳ ಮೇಲೆ ಪ್ರತಿಕಾರದ ಹತ್ಯೆಗಳು ಮೇಲಿಂದ ಮೇಲೆ ಸಂಭವಿಸುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಇದನ್ನು ತಡೆದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯರು ಪಾಲ್ಗೊಳ್ಳುವಂತೆ ಮಾಡಲು ಬುಧವಾರ ಸಭೆ ನಡೆಸಿದ ಅರಣ್ಯಾಧಿಕಾರಿಗಳ ತಂಡ ಅಲ್ಲಿನ ಜನರ ಕುಂದುಕೊರತೆಗಳನ್ನು ಆಲಿಸಿದರು.

ಇಲ್ಲಿನ ಗ್ರಾಮಗಳು ಅರಣ್ಯಕ್ಕೆ ಹೊಂದಿಕೊಂಡಂತೆ ಇರುವುದರಿಂದ ನಿತ್ಯ ನಿರಂತರವಾಗಿ ವನ್ಯಪ್ರಾಣಿಗಳು ಜಮೀನುಗಳಿಗೆ ನುಗ್ಗುವುದಲ್ಲದೇ ಮನೆಯ ಬಳಿಗೆರ ಬರುತ್ತಿವೆ. ಅರಣ್ಯದ ಸುತ್ತಲೂ ತೆಗೆದಿರುವ ಆನೆಕಂದಕ ಮುಚ್ಚಿ ಹೋಗಿವೆ. ಸುತ್ತಲೂ ಅಳವಡಿಸಿರುವ ಸೋಲಾರ್ ಬೇಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸ್ಥಳಿಯರು ಭಯಭೀತರಾಗಿದ್ದು ಸದಾ ಆತಂಕದಿಂದಲೇ ಜೀವನ ನಡೆಸದಬೇಕಿದೆ. ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಿ ನಮಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಅವಲತ್ತುಕೊಂಡರು.

ADVERTISEMENT

ಬೆಳೆ ಪರಿಹಾರ ನೀಡಿ: ಇಲ್ಲಿನ ಬಹುತೇಕ ಜಮೀನುಗಳು ಅರಣ್ಯಕ್ಕೆ ಹೊಂದಿಕೊಂಡಂತಿವೆ. ಪ್ರತಿನಿತ್ಯ ರಾತ್ರಿ ವೇಳೆ ಕಾಡುಹಂದಿಗಳು ಜಮೀನುಗಳಿಗೆ ನುಗ್ಗಿ ಫಸಲು ಹಾಳು ಮಾಡುವುದರ ಜತೆಗೆ ನೀರಿನ ಪರಿಕರಗಳನ್ನು ಹಾಳು ಮಾಡುತ್ತಿವೆ. ಇದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಹಂದಿ ಬೆಳೆ ನಾಶ ಮಾಡಿದರೆ ಅದಕ್ಕೆ ಪರಿಹಾರ ಇಲ್ಲ ಎಂದು ಹೇಳುತ್ತಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿಗಳು, ಮುಂದಿನ ದಿನಗಳಲ್ಲಿ ಇದಕ್ಕೆ ಪರಿಹಾರ ನೀಡಲು ಕ್ರಮ ವಹಿಸಲಾಗುವುದು. ಕಾಡಿನ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ ಜವಬ್ದಾರಿ ಮಾತ್ರವಲ್ಲ. ಮೂಲಭೂತ ಕರ್ತವ್ಯಗಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯೂ ಸಹ ಒಂದಾಗಿದೆ. ಇದನ್ನು ಅರಿತು ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಯಾವುದೇ, ಏನೆ ಸಮಸ್ಯೆ ಇದ್ದರೂ ಇಲಾಖೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ನಿವಾರಣೆ ಮಾಡಿಕೊಳ್ಳಬೇಕು. ಇದನ್ನು ಬಿಟ್ಟು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಎಂದು ಜನರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಿಸಿಸಿಎಫ್‌ಗಳಾದ ವಿಶ್ವಜಿತ್ ಮಿಶ್ರ, ಸ್ಮಿತಾ ಬಿಜ್ಜೂರು, ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಗಳಾದ ಮನೋಹರ್ ಸ್ವಪ್ನಿಲ್, ಉಮಾಪತಿ ಇದ್ದರು.

ಕಾಡು ಹಂದಿ ಬೆಳೆ ನಾಶ ಮಾಡಿದರೂ ಪರಿಹಾರ: ಗ್ರಾಮಸ್ಥರ ಒತ್ತಾಯ | ಯಾವುದೇ ಸಮಸ್ಯೆ ಇದ್ದರೂ ಗಮನಕ್ಕೆ ತರಲು ಅರಣ್ಯಾಧಿಕಾರಿಗಳ ಮನವಿ | ಅರಣ್ಯ ಸಂರಕ್ಷಣೆಗೆ ಕೈಜೋಡಿಸಲು ಅಧಿಕಾರಿಗಳ ಮನವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.