
ಹನೂರು: ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಾಮುದಾಯಿಕ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಅರಣ್ಯ ಇಲಾಖೆ ಜೊತೆಗೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯಲು ಸಾಧ್ಯ ಎಂದು ಹನೂರು ಬಫರ್ ವಲಯ ಅರಣ್ಯಾಧಿಕಾರಿ ಕೆ.ಎಂ. ನಾಗರಾಜು ತಿಳಿಸಿದರು.
ತಾಲೂಕಿನ ದಿನ್ನಳ್ಳಿ ಗ್ರಾಮದಲ್ಲಿ ಶ್ರೀ ಕೋಟೆ ಮಾರಮ್ಮ ಅರಣ್ಯ ಸಮಿತಿ, ಯಡೆಯಾರಳ್ಳಿ ಹಾಗೂ ಸಾಹೇಬರ ದೊಡ್ಡಿ ಗ್ರಾಮ ಅರಣ್ಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ಅನಾದಿಕಾಲದಿಂದಲೂ ಮಾನವ ವನ್ಯಜೀವಿಗಳೊಂದಿಗೆ ಸಮನ್ವಯ ಬದುಕು ಸಾಗಿಸಿಕೊಂಡು ಬರುತ್ತಿದ್ದಾನೆ. ದಿನಗಳೆದಂತೆ ಕಾಡಿನೊಳಗೆ ಮನುಷ್ಯನ ಹಸ್ತಕ್ಷೇಪ ಜಾಸ್ತಿಯಾಗುತ್ತಿದ್ದಂತೆ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಯಿತು. ಅರಣ್ಯದೊಳಗೆ ಹಾಗೂ ಅರಣ್ಯದಂಚಿನ ಗ್ರಾಮಗಳಲ್ಲಿ ವಾಸ ಮಾಡುವ ಜನರು ಜಾಗರೂಕತೆಯಿಂದ ಇರಬೇಕು. ಜಮೀನುಗಳಲ್ಲಿ ವನ್ಯಪ್ರಾಣಿಗಳ ಕಾಣಿಸಿಕೊಂಡರೆ ಅವುಗಳಿಗೆ ತೊಂದರೆ ಕೊಡದೆ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು. ಅರಣ್ಯದ ಸುತ್ತಲೂ ಅನುಮಾನಾಸ್ಪದವಾಗಿ ಯಾರಾದರೂ ಓಡಾಡುತ್ತಿದ್ದರೆ ಅದರ ಬಗ್ಗೆ ಇಲಾಖೆಗೆ ತಿಳಿಸಬೇಕು ಎಂದರು.
ವನ್ಯಪ್ರಾಣಿಗಳ ಸಂರಕ್ಷಣೆ ಜೊತೆಗೆ ಮನುಷ್ಯರ ರಕ್ಷಣೆಯ ಜವಾಬ್ದಾರಿಯು ನಮ್ಮ ಮೇಲಿದೆ. ಇದನ್ನು ಜನಸಾಮಾನ್ಯರು ತಿಳಿದುಕೊಳ್ಳಬೇಕು. ಜಮೀನಿಗೆ ಬಂದ ಕಾಡು ಪ್ರಾಣಿಗಳನ್ನು ಮರಳಿ ಕಾಡಿಗಟ್ಟುವ ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳೀಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅರಣ್ಯದಂಚಿನಲ್ಲಿ ಅಳವಡಿಸಿರುವ ಸೋಲಾರ್ ಬೇಲಿ ಕಿತ್ತು ಬಂದಿರುವುದರಿಂದ ಮೇಲಿಂದ ಮೇಲೆ ಕಾಡು ಪ್ರಾಣಿಗಳು ಜಮೀನು ಹಾಗೂ ಗ್ರಾಮಗಳಿಗೆ ನುಗ್ಗುತ್ತಿವೆ. ಇದರ ಜೊತೆಗೆ ದಿನ ನಿತ್ಯ ಕಾಡು ಹಂದಿಗಳು ಜಮೀನಿಗೆ ಲಗ್ಗೆಯಿಟ್ಟು ಫಸಲನ್ನು ಹಾಳು ಮಾಡುತ್ತಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾಡು ಹಂದಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು. ರಾತ್ರಿ ವೇಳೆ ಜಮೀನಿಗೆ ಕಾಡು ಪ್ರಾಣಿಗಳು ಬರುವುದರಿಂದ ಸ್ಥಳೀಯ ರೈತರಿಗೆ ಪಟಾಕಿಗಳನ್ನು ವಿತರಿಸಬೇಕು. ರೈತರಿಗೆ ಸೋಲಾರ್ ಲೈಟುಗಳನ್ನು ವಿತರಿಸುವುದರ ಜೊತೆಗೆ ಬೆಳೆ ಪರಿಹಾರವನ್ನು ವಿಳಂಬ ಮಾಡದೇ ತ್ವರಿತವಾಗಿ ವಿತರಿಸಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿದರು.
ಸಭೆಯಲ್ಲಿ ಎರಡೂ ಅರಣ್ಯ ಸಮಿತಿಯ ಅಧ್ಯಕ್ಷರಾದ ಹುಚ್ಚೇಗೌಡ, ಕೃಷ್ಣಾ ನಾಯಕ, ಉಪವಲಯ ಅರಣ್ಯಾಧಿಕಾರಿ ವಿನಾಯಕ ಸಿಬ್ಬಂದಿ ಸುರೇಶ, ಭೀಮಶಿ ಹಾಗೂ ಸ್ಥಳೀಯ ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.