ADVERTISEMENT

ಗುಂಡ್ಲುಪೇಟೆ | ವನ್ಯಜೀವಿಗಳಿಂದ ಸೂಕ್ತ ರಕ್ಷಣೆ ಕೊಡಿ: ಬಡಗಲಪುರ ನಾಗೇಂದ್ರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:15 IST
Last Updated 6 ಸೆಪ್ಟೆಂಬರ್ 2025, 2:15 IST
ಗುಂಡ್ಲುಪೇಟೆ ತಾಲ್ಲೂಕಿನ ಮಗುವಿನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಾಧು ಮಾತನಾಡಿದರು. ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಮುಖಂಡರು ಇದ್ದಾರೆ
ಗುಂಡ್ಲುಪೇಟೆ ತಾಲ್ಲೂಕಿನ ಮಗುವಿನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಾಧು ಮಾತನಾಡಿದರು. ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಮುಖಂಡರು ಇದ್ದಾರೆ   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಜನ–ಜಾನುವಾರುಗಳಿಗೆ ಮತ್ತು ಬೆಳೆಗಳಿಗೆ ಅರಣ್ಯ ಇಲಾಖೆ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ತಾಲ್ಲೂಕಿನ ಚನ್ನಮಲ್ಲಿಪುರ ಹಾಗೂ ಮಗುವಿನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆ ಶೇ 53ರಷ್ಟು ಅರಣ್ಯ ಪ್ರದೇಶ ಹೊಂದಿದೆ. ಮಾನವ-ವನ್ಯಜೀವಿ ಸಂಘರ್ಷ ನಿರಂತರ ನಡೆಯುತ್ತಿದೆ. ಹುಲಿ, ಚಿರತೆಗಳು ಊರಿಗೆ ಬಂದು ಜನ-ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಜೊತೆಗೆ ಹಂದಿ, ಮಂಗಗಳ ಕಾಟವೂ ಹೆಚ್ಚಿದ್ದು, ಅರಣ್ಯ ಅಧಿಕಾರಿಗಳು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಆನೆ ತುಳಿತದಿಂದ ಪ್ರಾಣ ಹಾನಿಯಾದರೆ ಹಿಂದೆ 15 ಲಕ್ಷ ಪರಿಹಾರ ನೀಡುತ್ತಿದ್ದರು. ರೈತ ಸಂಘದ ಒತ್ತಾಯದ ಮೇರೆಗೆ ಈಗ 20 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ನಾವು 25 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದೇವೆ. ಮುಂದಿನ ದಿನಗಳಲ್ಲಿ 50 ಲಕ್ಷ ಪರಿಹಾರ ಕೊಡಬೇಕೆಂದು ಆಗ್ರಹ ಮಾಡುತ್ತೇವೆ. ಕಾಡಂಚಿನ ಪ್ರದೇಶಗಳಲ್ಲಿ ರೈತರ ಸಮಸ್ಯೆ ಬಗೆಹರಿಸಲು ರೈತ ಸಂಘ ಹೋರಾಟ ನಡೆಸುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.

‘ನಮ್ಮದು ಸುಂದರ ಊರು ಹಾಗೂ ಬೆಟ್ಟಗುಡ್ಡಗಳ ನಾಡು. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಜನರು ನರಕಯಾತನೆ ಜೀವನ ನಡೆಸುತ್ತಿದ್ದು, ಉಸಿರುಗಟ್ಟಿದ ವಾತಾರಣವಿದೆ. ಈ ಹಿನ್ನಲೆಯಲ್ಲಿ ಪಟ್ಟಣ ಪ್ರದೇಶದಲ್ಲಿ ಅನೇಕ ಮಂದಿ ಹೆಚ್ಚು ಹಣ ಗಳಿಸಿ ಕಾಡಂಚಿನ ಗ್ರಾಮ ಹಾಗೂ ರೈತರ ಜಮೀನಿಗಳನ್ನು ಖರೀದಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕು ರೈತರು ಇದಕ್ಕೆ ಆಸ್ಪದ ಕೊಡಬಾರದು’ ಎಂದು ಅವರು ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ‘ಪೂರ್ವಜರು ಉಳಿಸಿಕೊಂಡು ಬಂದ ಜಮೀನನ್ನು ರೈತರು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ನಮ್ಮ ಅಪ್ಪ, ತಾತ ಯಾರು ಕೂಡ ಇಂತಹ ಆಲೋಚನೆ ಮಾಡಿರಲಿಲ್ಲ. ಅಧಿಕ ಹಣ ಸಿಗುತ್ತದೆ ಎಂಬ ಉದ್ದೇಶದಿಂದ ಜಮೀನು ಮಾರಾಟ ಮಾಡಿದರೆ ಮತ್ತೆ ಅದೆ ಬೆಲೆಗೆ ಭೂಮಿ ಖರೀದಿಸಲು ಆಗುವುದಿಲ್ಲ. ಮಕ್ಕಳ ಮದುವೆ ನೆಪದಲ್ಲಿ ಜಮೀನು ಮಾರಿ, ಅದ್ದೂರಿಯಾಗಿ ಮದುವೆ ಮಾಡಿದರೆ ಆಸ್ತಿ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು. 

ತಾಲ್ಲೂಕು ಅಧ್ಯಕ್ಷ ದಿಲೀಪ್, ಜಿಲ್ಲಾ ಉಪಾಧ್ಯಕ್ಷ ಹಂಗಳ ಮಾಧು, ಚೌಡೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇಮಳ್ಳಿ ಪ್ರಸಾದ್, ಕಾಯಂ ಆಹ್ವಾನಿತ ಶಿವಮಲ್ಲು, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ಭರತ್, ಮಹದೇವಪ್ಪ, ರಾಜಶೇಖರಪ್ಪ, ನಾಗರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಣ್ಣ, ಕಾರ್ಯಾಧ್ಯಕ್ಷ ಬೊಮ್ಮನಹಳ್ಳಿ ಲೋಕೇಶ್ ಸೇರಿದಂತೆ ಹಲವು ಮಂದಿ ರೈತ ಮುಖಂಡರು ಹಾಗೂ ಚನ್ನಮಲ್ಲಿಪುರ ಗ್ರಾಮ ಘಟಕದ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.