
ಚಾಮರಾಜನಗರ: ಬಿಳಿಗಿರಿ ರಂಗನಾಥ ಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು ವನ್ಯಜೀವಿ ವಲಯದೊಳಗೆ ಜೀಪ್ ಚಲಾಯಿಸಿಕೊಂಡು ಅತಿಕ್ರಮ ಪ್ರವೇಶ ಮಾಡಿದ ಬೆಂಗಳೂರು ಮೂಲದ ಹರ್ಷರಾಜ್ ಹಾಗೂ ಸತೀಶ್ ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು ಮೂರು ದಿನಗಳ ಹಿಂದೆ ಬೂದಿಪಡಗ ಶಾಖೆಯ ರಾಗಿಕಲ್ಲಮಡು ಅರಣ್ಯ ಪ್ರದೇಶದೊಳಗೆ ಜೀಪ್ ಓಡಿಸುತ್ತ ಮೋಜು ಮಸ್ತಿ ಮಾಡುವ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಯುವಕರ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಜೀಪ್ ಜಪ್ತಿ ಮಾಡಿ ಯುವಕರ ವಿರುದ್ಧ ವನ್ಯಜೀವಿ ವಲಯದೊಳಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 27ರಡಿ ಪ್ರಕರಣ ದಾಖಲಿಸಿದ್ದಾರೆ.
ಅತ್ಯಂತ ಸೂಕ್ಷ್ಮ ವಲಯವಾದ ಟೈಗರ್ ಕೋರ್ ವಲಯದೊಳಗೆ ಜೀಪ್ ಚಲಾಯಿಸಿಕೊಂಡು ಹೋದರೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಗಂಭೀರ ಲೋಪ ಎಂದು ಪರಿಸರವಾದಿಗಳು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.