ADVERTISEMENT

ದಸರಾದಲ್ಲಿ ಪಾಲ್ಗೊಳ್ಳುವುದಿಲ್ಲ: ಶ್ರೀನಿವಾಸ ಪ್ರಸಾದ್‌

ಜನ ಸಂಕಷ್ಟದಲ್ಲಿದ್ದಾಗ ಅದ್ಧೂರಿತನ ಬೇಕಿರಲಿಲ್ಲ–ಸಂಸದ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 14:57 IST
Last Updated 21 ಸೆಪ್ಟೆಂಬರ್ 2019, 14:57 IST
ವಿ.ಶ್ರೀನಿವಾಸ ಪ್ರಸಾದ್‌
ವಿ.ಶ್ರೀನಿವಾಸ ಪ್ರಸಾದ್‌   

ಕೊಳ್ಳೇಗಾಲ: ‘ಭೀಕರ ಪ್ರವಾಹ ಬಂದು, ರಾಜ್ಯದ ಜನ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಅದ್ಧೂರಿ ದಸರಾ ಅಗತ್ಯವಿರಲಿಲ್ಲ. ಹಾಗಾಗಿ, ನಾನು ಮೈಸೂರು ದಸರಾದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಶನಿವಾರ ಇಲ್ಲಿ ಹೇಳಿದರು.

‘100 ವರ್ಷಗಳಲ್ಲಿ ಕಾಣದಂಥ ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿದೆ. 22 ಜಿಲ್ಲೆಗಳಲ್ಲಿ ಹಾನಿ ಉಂಟಾಗಿದೆ. ಸಾವಿರಾರು ಹಳ್ಳಿಗಳು ಮುಳುಗಿಹೋಗಿವೆ. ಸಾವಿರಾರು ಹೆಕ್ಟೇರ್‌ ಬೆಳೆ ನಾಶವಾಗಿದೆ. ₹ 50 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಜನ ಸಂಕಷ್ಟದಲ್ಲಿರುವಾಗ ಮಾನವೀಯತೆ ದೃಷ್ಟಿಯಿಂದ ನಾನು ದಸರಾದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದರು.

‘ದಸರಾ ಆಚರಣೆ ರದ್ದು ಮಾಡಬೇಕೆಂದು ನಾನು ಹೇಳಿಲ್ಲ. ಮುಖ್ಯಮಂತ್ರಿ ನೇತೃತ್ವದ ಉನ್ನತ ಸಮಿತಿ ಸಭೆಯಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಈ ಬಾರಿ ವೈಭವದಿಂದ ನಡೆಸುವ ಪರಿಸ್ಥಿತಿ ಇಲ್ಲ. ಉತ್ತರ ಕರ್ನಾಟಕದವರ ಕಷ್ಟ ನಮಗೆ ಗೊತ್ತಾಗುತ್ತಿಲ್ಲ. ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಿಸಿ, ರಾಜ್ಯದ ಸಂಕಷ್ಟ ದೂರ ಮಾಡಲು ಚಾಮುಂಡೇಶ್ವರಿಯನ್ನು ಪ್ರಾರ್ಥಿಸೋಣ ಎಂದು ಹೇಳಿದ್ದೇನೆ’ ಎಂದರು.

ADVERTISEMENT

‘ಆಹಾರ ಮೇಳ ಮಾಡಿ ತಿಂದು ತೇಗುವುದು, ಯುವ ದಸರಾ ಮಾಡಿ ಕುಣಿದು ಕುಪ್ಪಳಿಸುವುದು ಇದೆಲ್ಲವನ್ನೂ ಬಿಟ್ಟು ಬಿಡಿ ಎಂದೂ ಹೇಳಿದ್ದೇನೆ’ ಎಂದರು.

‘ದಸರಾ ಕಾರ್ಯಕ್ರಮದಲ್ಲಿ ನನ್ನನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದನ್ನು ಯಾರೂ ಮಾಡಿಲ್ಲ. ನಾನು ಈ ಭಾಗದ ಜನಪ್ರತಿನಿಧಿ. ಉಸ್ತುವಾರಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.