ADVERTISEMENT

ಯಳಂದೂರು: ಇಬ್ಬನಿ ತಬ್ಬಿದ ‘ತಬೂಬಿಯಾ ರೋಸಿಯಾ’!

ಚಳಿಗಾಲದ ಋತುವಿನ ಸೊಬಗು ಹೆಚ್ಚಿಸುವ ಪುಷ್ಪಗಳು

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 5:14 IST
Last Updated 28 ಜನವರಿ 2025, 5:14 IST
ಯಳಂದೂರು-ಸಂತೇಮರಹಳ್ಳಿ ಹೆದ್ದಾರಿಯಲ್ಲಿ ಕಂಡುಬರುವ ಅಳಿವಿನಂಚಿನ ಟಬೂಬಿಯಾ ರೋಸಿಯಾ ಹೂ ಬಿಟ್ಟು ನಳನಳಿಸುತ್ತಿದೆ.
ಯಳಂದೂರು-ಸಂತೇಮರಹಳ್ಳಿ ಹೆದ್ದಾರಿಯಲ್ಲಿ ಕಂಡುಬರುವ ಅಳಿವಿನಂಚಿನ ಟಬೂಬಿಯಾ ರೋಸಿಯಾ ಹೂ ಬಿಟ್ಟು ನಳನಳಿಸುತ್ತಿದೆ.   

ಯಳಂದೂರು: ಚಳಿಗಾಲದ ಋತು ಮುಗಿಯುತ್ತಿದ್ದು ನೇಸರನ ಕಿರಣದ ಪ್ರಖರತೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಪರಿಸರದ ಚಂದ ಹೆಚ್ಚಿಸುವ ನಾನಾ ನಮೂನೆಯ ಪುಷ್ಪಗಳು ಕಣ್ಮನ ಸೆಳೆಯುತ್ತಿವೆ. ಹೂಗಳು ಅರಳಿ ನೇಪಥ್ಯಕ್ಕೆ ಸೇರುವ ಮೊದಲು ಸೊಬಗನ್ನು ಸೂಸುತ್ತಿದ್ದು ಮುಂಜಾವಿನ ಇಬ್ಬನಿಯ ಅಪ್ಪುಗೆಯಲ್ಲಿ ಪರಿಮಳ ಸೂಸುತ್ತಿವೆ. ಪುಷ್ಪ ಲೋಕದ ಸುಂದರಿ  ‘ಪಿಂಕ್ ಪೋಯಿ’ ಹೆಸರಿನ ಟಬೂಬಿಯಾ ಎಲ್ಲರ ಗಮನ ಸೆಳೆಯುತ್ತಿದೆ.

ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಅಳಿವಿನಂಚಿನ ‘ತಬೂಬಿಯಾ ರೋಸಿಯಾ’ ಹೂ ಅರಳಿದ್ದು ಕಣ್ಮನ ಸೆಳೆಯುತ್ತಿದೆ. ಮುತ್ತಿನ ಹನಿಗಳ ಎರಕದಲ್ಲಿ ಪಲ್ಲವಿಸಿ ಪುಷ್ಪಪ್ರಿಯರ ನಯನಕ್ಕೆ ತಂಪು ತುಂಬುತ್ತಿದೆ. ಇಂತಹ ಅಪರೂಪದ ಹೂಗಳು ಮಾಗಿ ಕಾಲದ ನೆನಪನ್ನು ಮೂಡಿಸುತ್ತಿವೆ. ಹತ್ತಾರು ಕುಸುಮಗಳು ಸೌಂದರ್ಯದಿಂದ ಎಲ್ಲರ ಮನ ಸೆಳೆಯುತ್ತಲೇ ಬದುಕು ಮುಗಿಸುತ್ತವೆ.

‘ಈಚಿನ ವರ್ಷಗಳಲ್ಲಿ ತಬೂಬಿಯಾ ವೃಕ್ಷಗಳು ಕಣ್ಮರೆಯಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಅಭಿವೃದ್ಧಿ ಯೋಜನೆಗಳ ನಡುವೆ ಹಳದಿ, ಕೆಂಪು ಹೂಗಳ ಹತ್ತಾರು ಮರಗಳು ಕಳೆದುಹೋಗಿದೆ. ರಸ್ತೆ ಸುತ್ತಲೂ ಚಳಿಗಾಲದ ಸಂಭ್ರಮ ಸಾರುತ್ತಿದ್ದ ಮರಗಳು ಕಾಣದಂತಾಗುತ್ತಿವೆ.

ADVERTISEMENT

ಕಾಡಂಚಿನ ಪ್ರದೇಶ ಹಾಗೂ ಗ್ರಾಮೀಣ ರಸ್ತೆಗಳ ಬದಿ ಬೆರಳೆಣಿಕೆಯಲ್ಲಿ ಕಾಣಸಿಗುವ ಮರಗಳನ್ನು ಅಲಂಕಾರಿಕ ಸಸ್ಯಗಳಾಗಿ ಬೆಳೆಸಬಹುದು. ಮನೆ, ಉದ್ಯಾನ, ಶಾಲೆ ಸುತ್ತಮುತ್ತ ಬೆಳೆಸಿದರೆ ಐದಾರು ವರ್ಷಗಳಲ್ಲಿ ಇಳೆಯ ಮೇಲೆ ಹೂ ಹಾದಿ ನಿರ್ಮಿಸುತ್ತವೆ. ಜೇನು, ಚಿಟ್ಟೆ ಮತ್ತಿತರ ಕೀಟಗಳನ್ನು ಆಕರ್ಷಿಸುತ್ತದೆ’ ಎನ್ನುತ್ತಾರೆ ಚಿಂತಕ ಅಂಬಳೆ ನಾಗೇಶ್.

ತಬೂಬಿಯಾ ರೋಸಿಯಾ ವೃಕ್ಷವನ್ನು ಗುಲಾಬಿ ಪೌಯಿ ಎಂದು ಕರೆಯುತ್ತಾರೆ. ರೋಸಿ ಟ್ರಂಪೆಟ್ ಟ್ರೀ ಹೆಸರು ಇದೆ. ಆಯಾ ದೇಶದ ಹವಾಮಾನಕ್ಕೆ ಅನುಗುಣವಾಗಿ ವಿವಿಧ ಕಾಲಮಾನಗಳಲ್ಲಿ ಹೂ ಬಿಡುತ್ತದೆ. ಸೋಬಿಸುವ ತಬೂಬಿಯಾ ನವೆಂಬರ್-ಮಾರ್ಚ್ ನಡುವೆ ಇರುವಿಕೆ ಪ್ರಕಟಿಸುತ್ತವೆ. 90ಕ್ಕೂ ಹೆಚ್ಚಿನ ಪ್ರಭೇದಗಳಲ್ಲಿ ಹತ್ತಾರು ವೈವಿಧ್ಯಮಯ ಮರಗಳನ್ನು ಭಾರತದಲ್ಲಿ ಕಾಣಬಹುದು.

ತಬೂಬಿಯಾ ಗುಲಾಬಿ ಬಣ್ಣದ ವಿವಿಧ ಛಾಯೆಗಳಲ್ಲಿ ಕಂಡುಬರುತ್ತದೆ. ನೇರಳೆ ಬಣ್ಣದ ರೋಸಿಯಾ ಬಲು ಸುಂದರ. 30 ರಿಂದ 100 ಅಡಿ ತನಕ ಬೆಳೆಯುವ ಈ ವೃಕ್ಷಗಳು ಸೌಮ್ಯ ವಾತಾವರಣದಲ್ಲಿ ಅರಳಿ ಮನಸ್ಸಿಗೆ ಮುದ ನೀಡುತ್ತದೆ. 20 ರಿಂದ 30 ಡಿಗ್ರಿ ಉಷ್ಣಾಂಶ ಹಾಗೂ ವಾರ್ಷಿಕ 50 ಸೆಂ.ಮೀ ಮಳೆ ಸುರಿಯುವ ಪ್ರದೇಶದಲ್ಲಿ ಹೆಚ್ಚಾಗಿ ಕಾಣಬಹುದು.

ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಮರದ ತೊಗಟೆಗಳನ್ನು ನೋವು ನಿವಾರಕವಾಗಿಯೂ ಬಳಸಲಾಗುತ್ತದೆ. ಟಬೂಬಿಯಾ ವೈಜ್ಞಾನಿಕ ಹೆಸರು ‘ಬಿಗ್ನೋನಿಯೇಸಿ’ ಕುಟುಂಬಕ್ಕೆ ಸೇರಿದ ಪೆರು ದೇಶದ ಪುಷ್ಪ. ಕ್ಯೂಬಾದಲ್ಲಿ ಇವು ಹೆಚ್ಚಾಗಿ ಕಂಡುಬಂದರೆ, ಅಮೆರಿಕಾ ಮತ್ತು ಸಿಂಗಾಪುರ ದೇಶಗಳಲ್ಲಿ ಅಲ್ಲಿನ ನಗರಗಳ ಸೊಬಗು ಹೆಚ್ಚಿಸುವಲ್ಲಿ ನೆರವಾಗಿವೆ. ಮೊಗಲ್ ಮತ್ತು ಆಂಗ್ಲರ ಆಳ್ವಿಕೆಯಲ್ಲಿ ಮನು ವನವನ್ನು ಸೇರಿತು, ನಂತರ ರಸ್ತೆ ಸುತ್ತಮುತ್ತ ನೆಡಲಾಯಿತು ಎನ್ನುತ್ತಾರೆ ಬಿಳಿಗಿರಿಬೆಟ್ಟದ ಏಟ್ರೀ ತಜ್ಞ ಸಿ.ಮಾದೇಗೌಡ.

ಯಳಂದೂರು-ಸಂತೇಮರಹಳ್ಳಿ ಹೆದ್ದಾರಿಯಲ್ಲಿ ಕಂಡುಬರುವ ಅಳಿವಿನಂಚಿನ ಟಬೂಬಿಯಾ ರೋಸಿಯಾ ಹೂ ಬಿಟ್ಟು ನಳನಳಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.