ADVERTISEMENT

ಸ್ಕ್ಯಾನಿಂಗ್‌ಗಾಗಿ ಸೋಲಿಗ ಮಹಿಳೆ ಅಲೆದಾಟ, ಆಂಬುಲೆನ್ಸ್‌ನಲ್ಲೇ ಹೆರಿಗೆ, ಮಗು ಸಾವು

ಶನಿವಾರ ತಡರಾತ್ರಿ ಘಟನೆ, ಸೋಲಿಗ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 16:20 IST
Last Updated 7 ಡಿಸೆಂಬರ್ 2020, 16:20 IST
ಜಿಲ್ಲಾ ಆಸ್ಪತ್ರೆ ಹೊರನೋಟ
ಜಿಲ್ಲಾ ಆಸ್ಪತ್ರೆ ಹೊರನೋಟ   

ಚಾಮರಾಜನಗರ: ಹೆರಿಗೆ ನೋವು ಕಾಣಿಸಿಕೊಂಡಿದ್ದ ಸೋಲಿಗ ಸಮುದಾಯದ ಗರ್ಭಿಣಿಯೊಬ್ಬರು ಸ್ಕ್ಯಾನಿಂಗ್‌ಗಾಗಿ ಜಿಲ್ಲಾಸ್ಪತ್ರೆ ಸೇರಿದಂತೆ ನಗರ ಪ್ರಮುಖ ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಆಂಬುಲೆನ್ಸ್‌ನಲ್ಲೇ ಹೆತ್ತಿರುವ ಘಟನೆ ನಡೆದಿದೆ. ನವಜಾತ ಶಿಶು ಮೃತಪಟ್ಟಿದೆ.

ಶನಿವಾರ ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಆಸ್ಪತ್ರೆಗೆ ಬರುವ ಹೊತ್ತಿಗೆ ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು ಎಂದು ಜಿಲ್ಲಾ ಸರ್ಜನ್‌ ಡಾ.ಮುರಳೀಕೃಷ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ಹೊತ್ತು ಸ್ಕ್ಯಾನಿಂಗ್‌ ಸೌಲಭ್ಯ ಇಲ್ಲದೇ ಇದ್ದುದರಿಂದ ಈ ಘಟನೆ ನಡೆಯಿತು ಎಂದು ಗರ್ಭಿಣಿಯ ಕುಟುಂಬದವರು ದೂರಿದ್ದಾರೆ.

ADVERTISEMENT

ಘಟನೆ ವಿವರ:ಕೊಳ್ಳೇಗಾಲ ತಾಲ್ಲೂಕಿನ ಕಾಡಂಚಿನ ಗ್ರಾಮ ಪುಟ್ಟೀರಮ್ಮನದೊಡ್ಡಿಯ ನಿವಾಸಿ ಮಹದೇವ ಎಂಬುವವರ ಪತ್ನಿ ಮಹದೇವಮ್ಮ ಅವರಿಗೆ ಶನಿವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ತಕ್ಷಣ ಅವರನ್ನು ಆಂಬುಲೆನ್ಸ್‌ ಮೂಲಕ ಕೊಳ್ಳೇಗಾಲದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಯಿತು.

‘ಅಲ್ಲಿನ ವೈದ್ಯರು, ನರ್ಸ್‌ಗಳು ಪತ್ನಿಯ ಆರೋಗ್ಯ ಪರಿಶೀಲಿಸಿ, ಮಗುವಿನ ಚಲನೆ ಕಾಣುತ್ತಿಲ್ಲ; ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದೆವು’ ಎಂದು ಮಹದೇವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾತ್ರಿ ಪಾಳಿಯಲ್ಲಿದ್ದ ವೈದ್ಯರು ತಪಾಸಣೆ ನಡೆಸಿ, ಗರ್ಭದಲ್ಲಿರುವ ಮಗುವಿನ ಸ್ಥಿತಿ ತಿಳಿಯುವುದಕ್ಕಾಗಿ ಸ್ಕ್ಯಾನಿಂಗ್‌ ಮಾಡಬೇಕು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡುವ ಸೌಲಭ್ಯ ಇಲ್ಲ. ಭಾನುವಾರವೂ ರೇಡಿಯಾಲಜಿಸ್ಟ್‌ ಅವರು ರಜೆ ಇರುತ್ತಾರೆ. ಹೊರಗಡೆ ಸ್ಕ್ಯಾನಿಂಗ್‌ ಮಾಡಿಸಿ ಎಂದು ಹೇಳಿದರು. ನಾವು ನಡೆದುಕೊಂಡೇ ಬಸವರಾಜೇಂದ್ರ ಆಸ್ಪತ್ರೆಗೆ ಬಂದೆವು. ಅಲ್ಲೂ ಸ್ಕ್ಯಾನಿಂಗ್‌ ಸೌಲಭ್ಯ ಇರಲಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ನೆರವಾದ ಪೊಲೀಸರು: ‘ಅಲ್ಲಿಂದ ಜೆಎಸ್‌‌ಎಸ್‌ ಆಸ್ಪತ್ರೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಪೊಲೀಸರಿಬ್ಬರು ನಮ್ಮನ್ನು ತಡೆದು ವಿಚಾರಿಸಿ, ಆಟೊವನ್ನು ತರಿಸಿ ನೆರವಾದರು. ಜೆಎಸ್‌ಎಸ್‌ನಲ್ಲೂ ಸ್ಕ್ಯಾನಿಂಗ್‌ ಇರಲಿಲ್ಲ. ಬೇರೆ ಕಡೆಗಳಲ್ಲಿ ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಮತ್ತೆ ಜಿಲ್ಲಾಸ್ಪತ್ರೆಗೆ ಬಂದು ತಿಳಿಸಿದಾಗ, ನಗರದಲ್ಲಿ ಸ್ಕ್ಯಾನಿಂಗ್ ಇಲ್ಲ. ಮೈಸೂರಿಗೇ ಹೋಗಬೇಕು ಎಂದರು’ ಎಂದು ಮಹದೇವ ವಿವರಿಸಿದರು.

‘ಆಂಬುಲೆನ್ಸ್‌ನಲ್ಲಿ‌ ಮೈಸೂರಿಗೆ ಹೊರಟಾಗ ಕವಲಂದೆ ಬಳಿ ಹೆರಿಗೆ ನೋವು ಜೋರಾಯಿತು. ಆಂಬುಲೆನ್ಸ್‌ ಸಿಬ್ಬಂದಿ ನೆರವಿನಿಂದ ಸಹಜ ಹೆರಿಗೆ ಆಯಿತು. ಮಗುವಿಗೆ ಜೀವ ಇಲ್ಲ ಎಂದು ಸಿಬ್ಬಂದಿ ತಿಳಿಸಿದರು. ಅದು ಗಂಡು ಶಿಶುವಾಗಿತ್ತು’ ಎಂದು ಮಹದೇವ ಅವರು ನಡೆದ ಘಟನೆಯನ್ನು ವಿವರಿಸಿದರು.

‘ಅಲ್ಲಿಂದ ವಾಪಸ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಪತ್ನಿಯನ್ನು ದಾಖಲಿಸಿದೆ. ಈಗ ಆಕೆ ಆರೋಗ್ಯವಾಗಿದ್ದಾಳೆ’ ಎಂದು ಮಹದೇವ ಹೇಳಿದರು.

ಹೊಟ್ಟೆಯಲ್ಲೇ ಮೃತಪಟ್ಟಿತ್ತು

ಈ ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್‌ ಡಾ.ಮುರಳೀಕೃಷ್ಣ ಅವರು, ‘ರಾತ್ರಿ 1.30ಕ್ಕೆ ಗರ್ಭಿಣಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಅದಕ್ಕೂ ಮೊದಲು ಅವರು ಕಾಮಗೆರೆ, ಕೊಳ್ಳೇಗಾಲ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಮಗುವಿಗೆ ಚಲನೆ ಇಲ್ಲ ಎಂದು ಹೇಳಿದ್ದರು. ಮಗುವಿನ ಸ್ಥಿತಿ ತಿಳಿಯಲು ಸ್ಕ್ಯಾನಿಂಗ್‌ ಮಾಡಲೇಬೇಕು. ನಮ್ಮಲ್ಲಿ ರಾತ್ರಿ ರೇಡಿಯಾಲಜಿಸ್ಟ್‌ ಇಲ್ಲ. ಹಾಗಾಗಿ, ಸ್ಕ್ಯಾನಿಂಗ್‌ ಸೌಲಭ್ಯ ಇರಲಿಲ್ಲ. ಹೊರಗಡೆ ಸ್ಕ್ಯಾನಿಂಗ್‌ ಮಾಡಲು ಪ್ರಯತ್ನ ಪಟ್ಟಿದ್ದಾರೆ. ನಂತರ ನಮ್ಮ ಗಮನಕ್ಕೆ ತಾರದೆ ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಆಂಬುಲೆನ್ಸ್‌ನಲ್ಲಿ ಹೆರಿಗೆ ಆಗಿದೆ. ಈಗ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಿಂದ ಇದ್ದಾರೆ’ ಎಂದು ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ರೇಡಿಯಾಲಜಿಸ್ಟ್‌ಗಳಿದ್ದು, ಒಬ್ಬರು ಹೆರಿಗೆ ರಜೆಯಲ್ಲಿದ್ದಾರೆ. ಸದ್ಯ ಒಬ್ಬರು ಮಾತ್ರ ಕರ್ತವ್ಯದಲ್ಲಿದ್ದು, ಹಗಲು ಹೊತ್ತಿನಲ್ಲಿ ಇರುತ್ತಾರೆ.

‘ನಮಗೆ ರೇಡಿಯಾಲಜಿಸ್ಟ್‌ಗಳ ಕೊರತೆ ಇದೆ. ಹಾಗಾಗಿ, ರಾತ್ರಿ ಹೊತ್ತು ಸ್ಕ್ಯಾನಿಂಗ್‌ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಹುದ್ದೆಗಳು ಭರ್ತಿಯಾದರೆ ಸಮಸ್ಯೆ ಬಗೆಹರಿಯಲಿದೆ’ ಎಂದು ಮುರಳೀಕೃಷ್ಣ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.