ADVERTISEMENT

ಚಾಮರಾಜನಗರ: ಸ್ವಾವಲಂಬಿ ಬದುಕು ಕಟ್ಟಿದ ಬ್ಯಾಗ್‌ ತಯಾರಿ ಕೌಶಲ

37ನೇ ವಯಸ್ಸಿಗೆ ತರಬೇತಿ, 16 ವರ್ಷಗಳಿಂದ ಪುಟ್ಟ ಉದ್ಯಮ ನಡೆಸುತ್ತಿರುವ ಪದ್ಮಜಾ ಶಂಕರ್‌

ಸೂರ್ಯನಾರಾಯಣ ವಿ
Published 8 ಮಾರ್ಚ್ 2021, 4:44 IST
Last Updated 8 ಮಾರ್ಚ್ 2021, 4:44 IST
ಪದ್ಮಜಾ ಶಂಕರ್‌ 
ಪದ್ಮಜಾ ಶಂಕರ್‌    

ಚಾಮರಾಜನಗರ: ಸ್ವಾವಲಂಬಿ ಬದುಕು ಕಟ್ಟಲೇ ಬೇಕು ಎಂಬ ಹಟಕ್ಕೆ ಬಿದ್ದು, ತಾವು ಕಲಿತ ಕೌಶಲದಿಂದ ಪುಟ್ಟ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿರುವ ಮಹಿಳೆಯ ಕಥೆ ಇದು. ಅವರ ಛಲಕ್ಕೆ ವಯಸ್ಸು ಅಡ್ಡಿಯಾಗಿಲ್ಲ. ಪತಿ ಹಾಗೂ ಕುಟುಂಬದ ಸದಸ್ಯರ ಬೆಂಬಲ ಪಡೆದು ಸ್ವಯಂ ಪರಿಶ್ರಮದಿಂದ ಸ್ವಾವಲಂಬಿಯಾಗಿದ್ದಾರೆ.

ಪದ್ಮಜಾ ಶಂಕರ್‌.ಚಾಮರಾಜನಗರದ ಭ್ರಮರಾಂಭ ಬಡಾವಣೆಯಲ್ಲಿರುವ ತಮ್ಮ ಮನೆಯ ಆವರಣದಲ್ಲೇ ಬಟ್ಟೆಯಿಂದ ಬ್ಯಾಗ್‌ ತಯಾರಿಸುವ ಘಟಕ ನಡೆಸುತ್ತಿದ್ದಾರೆ. ‘ಜನನಿ ಬ್ಯಾಗ್ಸ್‌’ ಎಂಬ ಬ್ರ್ಯಾಂಡ್‌ನ ಅಡಿಯಲ್ಲಿ ವಿವಿಧ ವಿನ್ಯಾಸಗಳ ಆಕರ್ಷಕ ಚೀಲಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮಾತು ಬಾರದ ಮಹಿಳೆಯೊಬ್ಬರು ಸೇರಿದಂತೆ ಆರು ಮಂದಿ ಹೆಣ್ಣು ಮಕ್ಕಳಿಗೆ ಕೆಲಸವನ್ನೂ ಕೊಟ್ಟಿದ್ದಾರೆ. 60 ರೀತಿಯ ವಿವಿಧ ವಿನ್ಯಾಸಗಳ ಬ್ಯಾಗ್‌ಗಳನ್ನು ಪದ್ಮಜಾ ಶಂಕರ್‌ ಅವರು ತಯಾರಿಸುತ್ತಾರೆ. ₹10ನಿಂದ ಹಿಡಿದು ₹600ರವರೆಗಿನ ಬೆಲೆಯ ಬ್ಯಾಗ್‌ಗಳು ಲಭ್ಯ.

ನೇರ ಗ್ರಾಹಕರಿಗೆ ಅವರು ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಾರೆ. ಬಾಯಿ ಪ್ರಚಾರದಿಂದಲೇ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ. ಪದ್ಮಜಾ ಅವರು ತಯಾರಿಸಿದ ಚೀಲಗಳು ಬೆಂಗಳೂರು, ಮುಂಬೈ ಸೇರಿದಂತೆ ದೂರದ ಊರುಗಳಿಗೆ ರವಾನೆಯಾಗುತ್ತವೆ. ಈಗೀಗ ವಾಟ್ಸ್‌ಆ್ಯಪ್‌ನಲ್ಲೇ ವ್ಯಾಪಾರ ನಡೆಯುತ್ತದೆ.ಸ್ಥಳೀಯ ಗ್ರಾಹಕರು ಕೂಡ ನೇರವಾಗಿ ಇವರ ಬಳಿಗೆ ಬಂದು ಬ್ಯಾಗ್‌ಗಳನ್ನು ಖರೀದಿಸುತ್ತಾರೆ. ಶುಭ ಸಮಾರಂಭಗಳಲ್ಲಿ ಉಡುಗೊರೆ ಕೊಡುವ ಚೀಲಗಳನ್ನು ಮಾಡಿಸುವವರೂ ಇದ್ದಾರೆ. ಶಿಕ್ಷಕಿಯರು ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರು ಪದ್ಮಜಾ ಅವರ ಗ್ರಾಹಕರು.

ADVERTISEMENT

ನಾಲ್ಕು ತಿಂಗಳ ತರಬೇತಿ: ಟೈಲರಿಂಗ್‌, ಬಟ್ಟೆಯಿಂದ ಚೀಲ ಹೊಲಿಯುವುದರಲ್ಲಿ ಪದ್ಮಜಾ ಅವರಿಗೆ ಆರಂಭದಿಂದಲೂ ಆಸಕ್ತಿ ಇತ್ತು. ಆದರೆ, 37 ವರ್ಷ ವಯಸ್ಸಿನವರೆಗೂ ಅವರಿಗೆ ಏನೂ ಮಾಡುವುದಕ್ಕೆ ಆಗಿಲ್ಲ. ಕುಟುಂಬದ ನಿರ್ವಹಣೆಯಲ್ಲೇ ತೊಡಗಿಕೊಂಡಿದ್ದರು.

‘ನಂಜನಗೂಡಿನಲ್ಲಿರುವ ತವರು ಮನೆಗೆ ಒಮ್ಮೆ ಹೋಗಿದ್ದಾಗ, ಬಸ್‌ ಟಿಕೆಟ್‌ಗೆ ₹13 ಬೇಕಿತ್ತು. ನನ್ನ ಕೈಯಲ್ಲಿ ಇದ್ದುದು ₹10 ಮಾತ್ರ. ₹3 ಅನ್ನು ತವರು ಮನೆಯಲ್ಲಿ ಅದನ್ನು ಕೇಳುವುದಕ್ಕೆ ಮುಜುಗರ ಆಯಿತು. ನನ್ನ ಬಳಿ ದುಡ್ಡು ಇದ್ದಿದ್ದರೆ ಇಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ನಾನೇ ಸಂಪಾದನೆ ಮಾಡಿ ಸ್ವಾವಲಂಬಿಯಾಗಬೇಕು ಎಂದು ಆಗ ನಿರ್ಧರಿಸಿದೆ. ಆಗ ನನಗೆ 37 ವರ್ಷ. ಅದೇ ಸಮಯದಲ್ಲಿ ಮರಿಯಾಲದ ರುಡ್‌ಸೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಾಲ್ಕು ತಿಂಗಳ ಫ್ಯಾಷನ್‌ ಕೋರ್ಸ್‌ ಇತ್ತು. ಅದಕ್ಕೆ ಸೇರಿದೆ. ಅಲ್ಲಿ ಬಟ್ಟೆ ಹೊಲಿಯಲು ತಿಳಿಸಿಕೊಟ್ಟರೂ ನನಗೆ ಬ್ಯಾಗ್‌ ಹೊಲಿಯುವುದರಲ್ಲಿ ಹೆಚ್ಚು ಆಸಕ್ತಿ ಇತ್ತು. ತರಬೇತುದಾರರಿಗೆ ತಿಳಿಸಿದೆ. ಅವರು ಹೇಳಿಕೊಟ್ಟರು’ ಎಂದು ಸ್ಮರಿಸುತ್ತಾರೆ ಪದ್ಮಜಾ.

‘ಕೋರ್ಸ್‌ ಬಳಿಕ ರೋಜ್‌ಗಾರ್‌ ಯೋಜನೆ ಅಡಿಯಲ್ಲಿ ಬ್ಯಾಂಕ್‌ನಿಂದ ₹50 ಸಾವಿರ ಸಾಲ ತೆಗೆದುಕೊಂಡೆ. ಸ್ನೇಹಿತೆಯೊಂದಿಗೆ ಸೇರಿ ಚಾಮರಾಜನಗರದಲ್ಲೇ ಅಂಗಡಿ ತೆರೆದೆ. ಅಲ್ಲೇ ಬ್ಯಾಗ್‌ ತಯಾರಿಸಿ ಮಾರಾಟ ಮಾಡುತ್ತಿದ್ದೆವು. ಎರಡು ವರ್ಷಗಳ ನಂತರ ಅಂಗಡಿ ಮುಚ್ಚಿದೆವು. ನಂತರ ನಾನು ಮನೆಯಲ್ಲೇ ಅಂಗಡಿ ಆರಂಭಿಸಿದೆ. ಈಗ ಅಂಗಡಿಯೂ ಇಲ್ಲ. ಬ್ಯಾಗ್‌ ತಯಾರಿಸುವ ಸಣ್ಣ ಘಟಕ ತೆರೆದಿದ್ದೇನೆ. ಅಲ್ಲಿಯೇ ಮಾರಾಟ ಮಾಡುತ್ತೇನೆ’ ಎಂದು ವಿವರಿಸುತ್ತಾರೆ ಅವರು.

ಪ್ರಾಮಾಣಿಕತೆ, ಗುಣಮಟ್ಟ ಇದ್ದರೆ ಯಶಸ್ಸು ಖಚಿತ

ಆರು ಮಂದಿಗೆ ಕೆಲಸ ನೀಡಿರುವ ಪದ್ಮಜಾ ಅವರು, ಕೌಶಲ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಅಭ್ಯರ್ಥಿಗಳಿಗೆ ಮಾರ್ಗದರ್ಶನವನ್ನೂ ಮಾಡುತ್ತಾರೆ. ಉದ್ಯಮ ವಿಸ್ತರಿಸಲು ಇನ್ನಷ್ಟು ಅವಕಾಶ ಇದೆ. ಆದರೆ, ದೊಡ್ಡ ಮೊತ್ತ ಬಂಡವಾಳ ಹೂಡಿ ಏಕಾಏಕಿ ವಿಸ್ತರಿಸುವ ಇರಾದೆ ಅವರಿಗೆ ಇಲ್ಲ. ಕೈಯಲ್ಲಿ ಇರುವ ಹಣಕ್ಕೆ ತಕ್ಕಂತೆ ಉದ್ಯಮ ಬೆಳೆಸುತ್ತಿದ್ದಾರೆ.

‘ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಗುಣಮಟ್ಟದ ಉತ್ಪನ್ನ ನೀಡಿದರೆ ಗ್ರಾಹಕರು ಖರೀದಿಸುತ್ತಾರೆ. ಸಾಲ ಸಿಗುತ್ತದೆ ಎಂದು ಪಡೆದ ಸಾಲವನ್ನೆಲ್ಲ ಬಂಡವಾಳ ಹೂಡಬಾರದು. ಅದರಲ್ಲಿ ಸ್ವಲ್ಪ ಹಣವನ್ನು ಮಾತ್ರ ಖರ್ಚು ಮಾಡಬೇಕು. ಇದು ನನ್ನ ನಿಯಮ. ಕೆಲಸಕ್ಕೆ ಬರುವ ಹೆಣ್ಣು ಮಕ್ಕಳಿಗೆ ಸಂಬಳ ನೀಡಿ, ನನ್ನ ಖರ್ಚು ಹೋಗುತ್ತದೆ. ಮನೆಯ ನಿರ್ವಹಣೆಯ ಜೊತೆಗೆ ಬ್ಯಾಗ್‌ ತಯಾರಿಕಾ ಕೆಲಸವನ್ನು 16 ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಕಲಿತ ವಿದ್ಯೆ, ಪಟ್ಟ ಶ್ರಮ ವ್ಯರ್ಥವಾಗಲಿಲ್ಲ. ನನ್ನ ಕೆಲಸದಲ್ಲಿ ತೃಪ್ತಿ ಇದೆ’ ಎಂದು ಹೇಳುತ್ತಾರೆ ಪದ್ಮಜಾ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.