ADVERTISEMENT

ಮನುಷ್ಯ, ದೇಶ ಉಳಿಯಬೇಕಾದರೆ ಪ್ರಕೃತಿ ಇರಬೇಕು

ವಿಶ್ವ ಪರಿಸರ ದಿನಾಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್ ಭಾಗಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 16:37 IST
Last Updated 5 ಜೂನ್ 2020, 16:37 IST
ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗಿಡ ನೆಟ್ಟು, ಅದಕ್ಕೆ ನೀರು ಎರೆದರು
ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗಿಡ ನೆಟ್ಟು, ಅದಕ್ಕೆ ನೀರು ಎರೆದರು   

ಕೊಳ್ಳೇಗಾಲ: ‘ಕಣ್ಣಿಗೆ ಕಾಣದ ವೈರಸ್‌ ಒಂದು ಇಡೀ ಮನುಕುಲವನ್ನೇ ನಡುಗಿಸಿದೆ. ಇದರ ಕಾರಣಕರ್ತ ಮನುಷ್ಯನೇ. ಪ್ರಕೃತಿ ಇದ್ದರೆ ಮಾತ್ರ ಮನುಷ್ಯ. ಇಲ್ಲವಾದರೆ ಇಡೀ ದೇಶವೇ ನಾಶವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ಹೇಳಿದರು.

ತಾಲ್ಲೂಕಿನ ಚಿಲುಕವಾಡಿ ಗ್ರಾಮದಲ್ಲಿ ಮಲೆಮಹದೇಶ್ವರ ವನ್ಯಜೀವಿ ವಿಭಾಗವು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಉತ್ತಂಬಳ್ಳಿ ಗೇಟ್‍ನಿಂದ ಟಗರುಪುರ ಮೋಳೆವರೆಗೆ 12 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರು ಕಷ್ಟ ಬಂದಾಗ ಮಾತ್ರ ಪರಿಸರವನ್ನು ನೆನೆಯುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಸಹ ಪರಿಸರದ ಪ್ರಜ್ಞೆಯನ್ನು ತಿಳಿಯಬೇಕು ಮತ್ತು ಪರಿಸರವನ್ನು ಪ್ರೀತಿಸಬೇಕು. ಕಾಡಿನ ನಾಶ, ವಾಯು ಮಾಲಿನ್ಯ, ನೀರು ಕಲುಷಿತಗೊಳಿಸುತ್ತಿರುವುದು, ಪ್ರಾಣಿಗಳ ಹತ್ಯೆ ಮಾಡುತ್ತಿರುವುದು ಮನುಷ್ಯನೇ ವಿನಾ ಬೇರಾರು ಅಲ್ಲ.ನಾವು ಪ್ರಕೃತಿಯನ್ನು ಮಗುವಂತೆ ನೋಡಿಕೊಳ್ಳಬೇಕು. ಲಾಕ್‌ಡೌನ್‌ ಜಾರಿ ಮಾಡಿದ ನಂತರ, ಮೂರು ತಿಂಗಳ ಅವಧಿಯಲ್ಲಿ ನಮ್ಮ ರಾಜ್ಯದ ನದಿಗಳು ಕಲುಷಿತವಾಗಿಲ್ಲ. ಇದಕ್ಕೆ ಕಾರಣವೂ ನಮಗೆ ತಿಳಿದಿದೆ’ ಎಂದರು.

ADVERTISEMENT

‘ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಶಾಸಕ ಎನ್.ಮಹೇಶ್ ಅವರ ಕನಸು. ಅವರ ಕನಸು ನನಸಾಗಬೇಕು. ಗಿಡಗಳನ್ನು ನೆಡುವುದು ಸುಲಭ. ಅದನ್ನು ಬೆಳೆಸಲು ಆರೈಕೆ ಮಾಡುವುದು ತುಂಬಾ ಕಷ್ಟ ಹೀಗಾಗಿ, ನೆಟ್ಟ ಗಿಡಗಳನ್ನು ಅರಣ್ಯ ಇಲಾಖೆಯವರು ಮಾತ್ರ ನೋಡಿ ಕೊಳ್ಳುವುದಲ್ಲ; ಗ್ರಾಮದ ಜನರು ಸಹ ಸಸಿಗಳನ್ನು ಮಗುವಿನಂತೆ ನೋಡಿಕೊಳ್ಳಬೇಕು. ಕೊರೊನಾ ವೈರಸ್‌ ಮನುಷ್ಯನಿಗೆ ಬುದ್ಧಿ ಕಲಿಸಿದೆ. ಆದ ಕಾರಣ ಪ್ರತಿಯೊಬ್ಬರೂ ಪ್ರಕೃತಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು’ ಎಂದರು.

ಸ್ಥಳೀಯ ಶಾಸಕ ಎನ್‌.ಮಹೇಶ್‌ ಅವರು ಮಾತನಾಡಿ, ‘ಈ 12 ಕಿ.ಮೀ ವ್ಯಾಪ್ತಿ ಕುಂತೂರು ಮತ್ತು ಟಗರುಪುರ ಪಂಚಾಯಿತಿಗಳಿಗೆ ಸೇರುತ್ತದೆ. ಈ ಎರರೂ ಪಂಚಾಯಿತಿಗಳನ್ನು ಮಾದರಿ ಪಂಚಾಯಿತಿ ಮಾಡುತ್ತೇನೆ. ಈ ಸಸಿಗಳನ್ನು ಗ್ರಾಮದ ಪ್ರತಿಯೊಬ್ಬರೂ ನೋಡಿಕೊಳ್ಳಬೇಕು’ ಎಂದರು.

ಹನೂರು ಶಾಸಕ ಆರ್.ನರೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯ ನಾಗರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಲತಾ, ಕುಂತೂರು ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್‌ ನಾರಾಯಣ ರಾವ್, ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, ಕಾವೇರಿ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ರಮೇಶ್, ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್,ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಇದ್ದರು.

ಪ್ರಶಂಸಾ ಪತ್ರ ವಿತರಣೆ

ಕಾರ್ಯಕ್ರಮದ ನಂತರ ಕೊಳ್ಳೇಗಾಲದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರೇಶ್‌ ಕುಮಾರ್‌ ಅವರು, ಇದೇ 8ರಿಂದ ಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಸ್ವಾಮಿ ದೇವಾಲಯವನ್ನು ತೆರೆಯುವ ಬಗ್ಗೆ ಹಾಗೂ ಮುಂಜಾಗ್ರತೆ ವಹಿಸಲು ಕೈಗೊಂಡಿರುವ ಬಗ್ಗೆ ಮತ್ತು ಭಕ್ತರು ಪಾಲಿಸಬೇಕಾದ ನಿಯಮಗಳ ಕುರಿತು ವಿವರಿಸಿದದರು.

ಇದೇ ಸಂದರ್ಭದಲ್ಲಿ, ಚಾಮರಾಜನಗರವು ಕೋವಿಡ್‌–19 ಮುಕ್ತ ಜಿಲ್ಲೆ ಆಗಲು ಹಗಲಿರುಳು ಶ್ರಮಿಸಿದಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಪೌರಕಾರ್ಮಿಕರಿಗೆ, ಆಶಾ ಕಾರ್ಯಕರ್ತರಿಗೆ, ಚೆಕ್ ಪೋಸ್ಟ್ ಸಿಬ್ಬಂದಿಗೆ ಪ್ರಶಂಸಾ ಪತ್ರವನ್ನು ಪ್ರಶಸ್ತಿ ಪತ್ರವನ್ನು ಸಚಿವರು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.