ADVERTISEMENT

ಜಗತ್ತಿಗೆ ಬೆಳಕು ನೀಡಿದ ಭಾಷೆ: ಡಾ.ಕೃಷ್ಣಮೂರ್ತಿ ಹನೂರು ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 16:33 IST
Last Updated 21 ಫೆಬ್ರುವರಿ 2022, 16:33 IST
ವಿಶ್ವ ಮಾತೃಭಾಷಾ ದಿನದಲ್ಲಿ ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು ಅವರು ಮಾತನಾಡಿದರು. ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಡಾ.ಮಹೇಶ್‌ ಇದ್ದರು
ವಿಶ್ವ ಮಾತೃಭಾಷಾ ದಿನದಲ್ಲಿ ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು ಅವರು ಮಾತನಾಡಿದರು. ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಡಾ.ಮಹೇಶ್‌ ಇದ್ದರು   

ಚಾಮರಾಜನಗರ:’ಭಾಷೆ ಎನ್ನುವುದು ಭಾವುಕ ಸಂಗತಿ. ಅದನ್ನು ಮಾತೃವಿಗೆ (ತಾಯಿಗೆ) ಹೋಲಿಸಿದ್ದಾರೆ. ತಾಯಿಯ ಮಡಿಲಿನಲ್ಲಿ ಮಕ್ಕಳು ಮೊದಲ ಪದವನ್ನು ಕಲಿಯುತ್ತವೆ. ಹೀಗಾಗಿ ಭಾಷೆಗೆ ಮಾತೃ ಸ್ಥಾನ ಕೊಟ್ಟಿರುವುದು ಬಹಳ ಅರ್ಥಪೂರ್ಣ‘ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ ಹನೂರು ಅವರು ಸೋಮವಾರ ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್, ರಂಗವಾಹಿನಿ ವತಿಯಿಂದನಗರದ ಹೊರವಲಯದಲ್ಲಿರುವ ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’2000 ವರ್ಷಗಳ ಹಿಂದೆ ಸಂಸ್ಕೃತದ ಕವಿಯೊಬ್ಬ ಮಾತೃಭಾಷೆ ಎಂಬುದು ಜಗತ್ತಿನ ದೀಪ ಎಂದು ಹೇಳಿದ್ದ. ಅದಿಲ್ಲದೇ ಹೋದರೆ ಜಗತ್ತು ಕತ್ತಲೆಯಲ್ಲಿ ಕಳೆಯಬೇಕಾಗುತ್ತದೆ ಎಂದು ವಿವರಿಸಿದ್ದ. ಎಲ್ಲ ಭಾಷೆಗಳೂ ಬೆಳಕನ್ನು ನೀಡಿವೆ.ಭಾಷೆ ಎಂಬುದು ಭಾವುಕತೆಯ ಸಂಗತಿಯಾಗಿದ್ದು, ಅದರಲ್ಲಿ ನಾಗರಿಕತೆ, ಸಂಸ್ಕೃತಿ ಇಲ್ಲವೂ ಅಡಗಿ‌ದೆ‘ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ ಅವರು ಮಾತನಾಡಿ, ’ಯಾವುದೇ ಭಾಷೆಯನ್ನು ಪ್ರೀತಿ, ಅಭಿಮಾನದಿಂದ ಕಲಿತಾಗ ಅದು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಯಾವುದೇ ಭಾಷೆಯನ್ನು ನಿರಂತರವಾಗಿ ಅಧ್ಯಯನ ಮಾಡಿದಾಗ ಉತ್ಕೃಷ್ಟತೆ ಹೆಚ್ಚಾಗುತ್ತ ಹೋಗುತ್ತದೆ. ಮೊದಲು ತಾಯಿಯ ಭಾಷೆಕಲಿಕೆಗೆ ಆದ್ಯತೆ ನೀಡಬೇಕು‘ ಎಂದರು.

ಕೇಂದ್ರದ ನಿರ್ದೇಶಕ ಡಾ.ಆರ್.ಮಹೇಶ್ ಅವರು ಮಾತನಾಡಿದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಸದಸ್ಯ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.