ಯಳಂದೂರು: ಭೂಮಿಯು ಮಣ್ಣಿನ ಸೂಕ್ಷ್ಮ ಕಣಗಳ ಅವಿಚ್ಚಿನ ಭಾಗವಾಗಿದ್ದು ಜೀವಿ ಹಾಗೂ ಸೂಕ್ಷ್ಮ ಜೀವಾಣುಗಳ ಜೊತೆಗೂ ಮಣ್ಣು ಸಾವಯವ ಸಂಬಂಧ ಹೊಂದಿದೆ. ಮಣ್ಣಿನಿಂದಲೇ ಬದುಕು, ಆಹಾರ, ಜೀವಜಲ ಹಾಗೂ ಸಕಲವೂ ಮನುಷ್ಯನಿಗೆ ಸಿದ್ಧಿಸಿದೆ.
ನದಿ, ಬಯಲು, ಸಮುದ್ರ, ಕೃಷಿ ಭೂಮಿ, ಕಾನನ ಹೀಗೆ ಸಕಲಕ್ಕೂ ಜೀವದಾಯಿಯಾಗಿರುವ ಮಣ್ಣಿನ ಆರೋಗ್ಯ ಕುಸಿಯುತ್ತಿರುವುದು ಆತಂಕಕಾರಿ. ಬರ, ನೆರೆ ಹಾಗೂ ಮಾನವನ ಅತಿಯಾದ ಹಸ್ತಕ್ಷೇಪದಿಂದ ಮಣ್ಣಿನ ನೆಲೆಯು ಶಿಥಿಲವಾಗುತ್ತಿದ್ದು ಅಪಾಯದ ಮೂನ್ಸೂಚನೆಯಾಗಿದೆ.
ತಾಲ್ಲೂಕಿನಲ್ಲಿ 10,500 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ನಡೆಯುತ್ತಿದ್ದು ಕಪ್ಪು, ಕೆಂಪು ಮತ್ತು ಚೌಳು ಮಣ್ಣಿನಿಂದ ರಚಿತವಾದ ಭೂಮಿ ಇದೆ. ಭತ್ತ, ಕಬ್ಬು, ಮೆಕ್ಕಜೋಳ, ತೆಂಗು, ಕಂಗು, ಕಾಫಿ ಪ್ರಧಾನ ಬೆಳೆಗಳಾಗಿವೆ. ಹೆಚ್ಚಿನ ಇಳುವರಿ, ಆರ್ಥಿಕ ಲಾಭದಾಸೆಗೆ ಮಣ್ಣಿಗೆ ರಸಾಯನಿಕ ಮತ್ತು ಕ್ರಿಮಿನಾಶಕ ಸೇರುತ್ತಿದ್ದು ಮಣ್ಣಿನೊಳಗಿರುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿವೆ.
ಮತ್ತೊಂದೆಡೆ ಯಥೇಚ್ಛವಾಗಿ ಪ್ಲಾಸ್ಟಿಕ್ ಕಣಗಳು ಮಣ್ಣು ಸೇರುತ್ತಿದ್ದು, ಚರಂಡಿಗಳ ಕಲುಷಿತ ತ್ಯಾಜ್ಯವೂ ಮಣ್ಣಿನಲ್ಲಿ ಬೆರೆತು ಜೀವಸತ್ವ ಕಳೆದುಕೊಳ್ಳುತ್ತಿದೆ.
ಭೂಮಿಗೆ ಹಟ್ಟಿ (ಸಗಣಿ) ಗೊಬ್ಬರ ಬೀಳುವುದು ಕಡಿಮೆಯಾಗಿರುವುದು ಮಣ್ಣಿನ ಆರೋಗ್ಯ ಹದಗೆಡಲು ಪ್ರಮುಖ ಕಾರಣ. ಪ್ರತಿ ವರ್ಷ ಹೊಲ, ತೋಟಗಳಿಗೆ ಬಳಸುತ್ತಿದ್ದ ಕೆರೆ ಮಣ್ಣಿನ ಬಳಕೆಯೂ ಕಾಣದಾಗಿರುವುದು ಮಣ್ಣಿನ ಆರೋಗ್ಯ ಕುಸಿತಕ್ಕೆ ಕಾರಣ ಎನ್ನುತ್ತಾರೆ ಗ್ರಾಮದ ಹಿರಿಯ ರೈತರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು.
ತಾಲ್ಲೂಕಿನಲ್ಲಿ ಕಪ್ಪು ಭೂಮಿಯ ಪ್ರಮಾಣ 6 ಸಾವಿರ ಹೆಕ್ಟೇರ್‌ನಷ್ಟಿದ್ದು, ತಲಾ 2 ಸಾವಿರ ಹೆಕ್ಟೇರ್ ಕೆಂಪು ಮತ್ತು ಚೌಳು ಭೂಮಿ ಇದೆ. ಅತಿಯಾದ ನೀರು ಬಳಕೆ, ರಸಾಯನಿಕ ಗೊಬ್ಬರಗಳ ಒಳಸುರಿಯ ಹೆಚ್ಚಳದಿಂದಾಗಿ ಮಣ್ಣಿನಲ್ಲಿ ಪೊಟ್ಯಾಶ್, ರಂಜಕದ ಅಂಶ ತಗ್ಗಿದ್ದು ಸಾವಯವ ಇಂಗಾಲದ ಕೊರತೆಯೂ ಬಾಧಿಸುತ್ತಿದೆ. ಹಸಿರು ಗೊಬ್ಬರಗಳ ನಿರ್ಲಕ್ಷದಿಂದ ಮಣ್ಣಿನ ಸಾಪೇಕ್ಷ ಫಲವತ್ತತೆ ಕಡಿಮೆ ಆಗಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.
ಭೂಮಿಯ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಚಂಬೆ, ಸೆಣಬು ಮತ್ತು ದ್ವಿದಳ ಧಾನ್ಯಗಳ ಬೆಳೆಯಬೇಕು. ಶೇ 50 ಸಹಾಯಧನದಡಿ ಬೀಜಗಳನ್ನು ಪಡೆದು ಬಿತ್ತನೆ ಮಾಡಿ ಸಾವಯವ ಗೊಬ್ಬರವನ್ನು ಪೋಷಕಾಂಶವಾಗಿ ಪರಿವರ್ತಿಸಬಹುದು. ಇದರಿಂದ ಮಣ್ಣೊಳಗಿನ ಸೂಕ್ಷ್ಮ ಜೀವಿಗಳು ಉಳಿಯುತ್ತವೆ ಎನ್ನುತ್ತಾರೆ ಅಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.