ಚಾಮರಾಜನಗರ: ಕವಿಗಳು ಹಾಗೂ ಲೇಖಕರು ಪ್ರಭುತ್ವವನ್ನು ಓಲೈಸಬೇಕಾದ ಅಗತ್ಯವಿಲ್ಲ; ಪ್ರಭುತ್ವದ ಮೇಲೆ ಅವಲಂಬಿಸಬೇಕಾಗಿಯೂ ಇಲ್ಲ ಎಂದು ಚಿಂತಕ ಪ್ರೊ.ಮಹದೇವ ಶಂಕನಪುರ ಅಭಿಪ್ರಾಯಪಟ್ಟರು.
ಚಾಮರಾಜನಗರ ಜಿಲ್ಲಾ ಲೇಖಕರ ಸಂಘದ ವತಿಯಿಂದ ಭಾನುವಾರ ರೋಟರಿ ಭವನದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದ ಸರ್ಕಾರಗಳು ಜನರನ್ನೇ ವಂಚನೆ ಮಾಡುತ್ತಿರುವುದು ವಿಪರ್ಯಾಸ. ಚಾಮರಾಜನಗರ ಜಿಲ್ಲೆಯ ಇತಿಹಾಸದ ಅರಿವಿಲ್ಲದವರಿಂದ ಈ ಬಾರಿ ಜಿಲ್ಲಾಡಳಿತದಿಂದ ನಡೆಯಬೇಕಾಗಿದ್ದ ದಸರಾ ಮಹೋತ್ಸವ ನಿಂತುಹೋಗಬೇಕಾಯಿತು ಎಂದು ವಿಷಾದಿಸಿದರು.
ಹಿಂದೆ ಯಾವ ಸರ್ಕಾರದ ಅವಧಿಯಲ್ಲಿ ಜಿಲ್ಲಾ ದಸರಾ ಆರಂಭವಾಗಿತ್ತೊ, ಅದೇ ಸರ್ಕಾರ ಆಡಳಿತದಲ್ಲಿರುವಾಗಲೇ ಜಿಲ್ಲಾ ದಸರಾ ನಿಂತಿದೆ. ದಸರಾ ನಿಂತುಹೋದ ಅಪಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ. ಜಿಲ್ಲೆಯ ಸಚಿವರು, ಶಾಸಕರು, ಅಧಿಕಾರಿಗಳು ದಸರಾ ಉತ್ಸವವನ್ನು ಜನರಿಂದ ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂದು ಟೀಕಿಸಿದರು.
ಮೈಸೂರು ಒಡೆಯರ ಇತಿಹಾಸವೇ ಇಲ್ಲದ ತುಮಕೂರು ಜಿಲ್ಲೆಯಲ್ಲಿ ದಸರಾ ಉತ್ಸವ ನಡೆಯುತ್ತಿದೆ. ಆದರೆ, ಮೈಸೂರಿನೊಂದಿಗೆ, ಅರಸರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಚಾಮರಾಜನಗರದಲ್ಲಿ ಜಿಲ್ಲಾ ದಸರಾ ನಡೆಯದಿರುವುದು ಬೇಸರದ ಸಂಗತಿ. ಸರ್ಕಾರದಿಂದ ದಸರಾ ಮಹೋತ್ವ ನಡಸದಿದ್ದರೂ ಚಾಮರಾಜನಗರ ಜಿಲ್ಲಾ ಲೇಖಕರ ಸಂಘದಿಂದ ದಸರಾ ಕವಿಗೋಷ್ಠಿ ನಡೆಯುತ್ತಿರುವುದು ಸ್ವಾಗತಾರ್ಹ.
ಸರ್ಕಾರದ ಜನವಿರೋಧಿ ನಿಲುವುಗಳನ್ನು ಟೀಕಿಸುವ ಪರಂಪರೆ ಬೆಳೆಯಲಿ. ಕವಿಗೋಷ್ಠಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಕವಿಗಳು ಭಾಗವಹಿಸಿರುವುದು ಅಭಿನಂದನೀಯ, ಕಾವ್ಯ ಹರಿತವಾಗಲಿ, ನಮ್ಮನ್ನಾಳುವ ಜನರನ್ನು ಎಚ್ಚರಿಸುವಂತಿರಲಿ, ವೈಚಾರಿಕತೆ ಕವನದ ಕೇಂದ್ರವಾಗಲಿ. ಕವಿಗಳು ಸ್ವತಂತ್ರವಾಗಿ ಬರಹ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಮದ್ದೂರು ದೊರೆಸ್ವಾಮಿ ‘ದಸರಾ ಕವಿಗೋಷ್ಠಿ ಯಾರ ವಿರುದ್ಧವೂ ಅಲ್ಲ, ಪರವೂ ಅಲ್ಲ. ಜಿಲ್ಲೆಯ ಕವಿಗಳನ್ನು ಒಗ್ಗೂಡಿಸಿ ದಸರಾ ಸಂಭ್ರಮದಲ್ಲಿ ಕವಿತೆ ವಾಚಿಸುವ ಸಂದರ್ಭವಷ್ಟೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೇಚಂಬಳ್ಳಿ ದುಂಡಮಾದಯ್ಯ ಮಾತನಾಡಿ ಕವಿಗೋಷ್ಠಿಯಲ್ಲಿ ಸೊಗಸಾದ ಕವಿಗಳು ಮೂಡಿಬಂದಿವೆ. ಲೇಖಕರ ಸಂಘದ ಜೊತೆಗಿನ ಕವಿಗಳ ಸಂಬಂಧ ಮುಂದುವರಿಯಲಿ ಎಂದರು. ಲೇಖಕಿ ಧನಲಕ್ಷ್ಮಿ, ಶೀಲಾ ಸತ್ಯೇಂದ್ರ ಸ್ವಾಮಿ, ಕಾತ್ಯಾಯಿನಿ, ಕೋಮಲ ಸುರೇಶ್, ಡಾ.ಬಿ.ಆರ್.ಕೃಷ್ಣಕುಮಾರ್, ಸುಂದರ ಕಲಿವೀರ, ಡಾ.ಶಶಿಕಲಾ ಕೃಷ್ಣಕುಮಾರ್, ಪಿ.ಪ್ರೇಮ, ಸಿದ್ದಲಿಂಗಸ್ವಾಮಿ ಹೊಂಗನೂರು, ಫೈರೋಜ್ ಖಾನ್, ಮಂಜುಳಾ ಉಪಾಧ್ಯಾಯಿನಿ, ಕೆ.ಎನ್.ಕಾವ್ಯ, ಪ್ರಸಾದ್ ಅರಳೀಪುರ, ಮಂಜುನಾಥ್ ಕೆಸ್ತೂರು ಸೇರಿದಂತೆ 32 ಕವಿಗಳು ಕವಿತೆ ವಾಚನ ಮಾಡಿದರು. ಕವಿಗೋಷ್ಠಿಗೂ ಮುನ್ನ ಇಂಚರ ಕಲಾ ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ದಸರಾ ಕವಿಗೋಷ್ಠಿಯ ಪರಂಪರೆಯನ್ನು ಮುನ್ನೆಡೆಸುವ ಪ್ರತಿಭಾವಂತ ಕವಿಗಳಿಗೆ ವೇದಿಕೆ ನೀಡುವ ಕೆಲಸವನ್ನು ಜಿಲ್ಲಾ ಲೇಖಕರ ಸಂಘ ಮಾಡುತ್ತಿರುವುದು ಶ್ಲಾಘನೀಯ. ಕವಿಗಳು ಸಾಹಿತಿಗಳು ಸರ್ಕಾರಗಳಿಗೆ ವಿರೋಧ ಪಕ್ಷಗಳಂತೆ ಕೆಲಸ ಮಾಡಬೇಕು. ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ಅಂಕುಡೊಂಕುಗಳನ್ನು ಬರಹಗಳು ಕವಿತೆಗಳ ಮೂಲಕ ತಿದ್ದಬೇಕು. ಮಹಲುಗಳಲ್ಲಿ ಐಷಾರಾಮಿಯಾಗಿ ಬದುಕು ಸಾಗಿಸುವವರಿಗೆ ಬರಹಗಳು ಸೀಮಿತವಾಗದೆ ಬಡತನ ಜನರ ನೋವು ಸಂಕಟಗಳಿಗೆ ದನಿಯಾಗಲಿ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.