ADVERTISEMENT

ಯಳಂದೂರು: ಹಸಿರು ಉಕ್ಕಿಸುವ ತವಕದಲ್ಲಿ ಅನ್ನದಾತ

ಗೌರಿ-ಗಣೇಶ ಹಬ್ಬದ ನಡುವೆ ಕೃಷಿ ಚಟುವಟಿಕೆ ಬಿರುಸು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 2:53 IST
Last Updated 27 ಆಗಸ್ಟ್ 2025, 2:53 IST
ಗೌರಿ ಹಬ್ಬದ ನಡುವೆ ಮಂಗಳವಾರ ಕಬ್ಬು ನಾಟಿಗೆ ಮುಂದಾದ ಕೃಷಿಕ ಮಹದೇವಸ್ವಾಮಿ
ಗೌರಿ ಹಬ್ಬದ ನಡುವೆ ಮಂಗಳವಾರ ಕಬ್ಬು ನಾಟಿಗೆ ಮುಂದಾದ ಕೃಷಿಕ ಮಹದೇವಸ್ವಾಮಿ   

ಯಳಂದೂರು: ಮುಂಗಾರು ಹಂಗಾಮಿನ ಸಂದರ್ಭ ಗೌರಿ-ಗಣೇಶ ಚತುರ್ಥಿ ಬಂದಿದ್ದು, ರೈತರು ನಾಟಿಗೆ ಸಿದ್ಧತೆ ನಡೆಸಿ, ಹಸಿರು ಉಕ್ಕಿಸುವ ತವಕದಲ್ಲಿದ್ದಾರೆ. ಮಹಿಳೆಯರು ಮನೆಯಲ್ಲಿ ಹಬ್ಬದ ಆಚರಣೆಯಲ್ಲಿ ಮಗ್ನರಾಗಿದ್ದಾರೆ.  

ತಾಲ್ಲೂಕಿನಲ್ಲಿ 10,500 ಹೆಕ್ಟೇರ್ ಕೃಷಿ ಭೂಮಿ ಇದ್ದು, 6 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಮತ್ತು ಕಬ್ಬು ಬಿತ್ತನೆ ನಡೆದಿದೆ. ನಾಲೆ, ಕೆರೆ, ಕಟ್ಟೆ ಮತ್ತು ಕೊಳವೆ ಬಾವಿಯಲ್ಲಿ ನೀರು ಬಳಸಿಕೊಂಡು ನಾಟಿ ಮಡಿಯಲ್ಲಿ ಪೈರು ಬೆಳೆಯಲಾಗಿದೆ. ಅರೆ ನೀರಾವರಿ ಪ್ರದೇಶದಲ್ಲಿ ಕಬ್ಬು ಬಿತ್ತನೆಗೂ ಆದ್ಯತೆ ನೀಡಿದ್ದಾರೆ. ಭೂಮಿ ಹದಗೊಳಿಸುವ, ಉತ್ತುವ, ಬಿತ್ತುವ ಚಟುವಟಿಕೆಗಳು ಹಬ್ಬದ ನಡುವೆಯೂ ಸಾಗಿದೆ.

‘ಯಂತ್ರಗಳನ್ನು ಬಳಸಿ ಬಿತ್ತನೆ ನಡೆಯುತ್ತಿದೆ. ಹಬ್ಬವಿರುವುದರಿಂದ ಕಳೆ ತೆಗೆಯಲು ಶ್ರಮಿಕರ ಕೊರತೆ ಎದುರಾಗಿದ್ದು, ಕೃಷಿಕ ಕುಟುಂಬಗಳೇ ತೆವರು ತಿಟ್ಟು ಹಸನುಗೊಳಿಸಬೇಕಾಗಿದೆ. ಗೌರಿಹಬ್ಬದ ಪ್ರಯುಕ್ತ ಹೆಣ್ಣಾಳುಗಳ ಕೊರತೆಯೂ ಕಾಡುತ್ತಿದೆ’ ಎನ್ನುತ್ತಾರೆ ಅಗರ ಕೃಷಿಕ ವೆಂಕಟೇಶ್.

ADVERTISEMENT

‘ಬೆಲ್ಲ ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿಗೆ ಬೇಡಿಕೆ ಹೆಚ್ಚಾಗಿರುರುವುದರಿಂದ ಹೈಬ್ರಿಡ್ ತಳಿಯ ಕಬ್ಬು ಸಾಗುವಳಿಗೆ ರೈತರು ಆದ್ಯತೆ ನೀಡಿದ್ದಾರೆ. ಮುಂಗಾರು ರೈತರ ಕೈಹಿಡಿಯುವ ನಿರೀಕ್ಷೆ ಮೂಡಿಸಿದ್ದು, ಬಾಳೆ, ತೆಂಗು, ಕಂಗು ನಾಟಿಗೂ ಒಲವು ತೋರಿದ್ದಾರೆ’ ಎನ್ನುವರು ರೈತ ಅಂಬಳೆ ಮಹದೇವಸ್ವಾಮಿ.

ಅಗರ ಮತ್ತು ಕಸಬಾ ಹೋಬಳಿ ಸುತ್ತಮುತ್ತ ಕಾಲುವೆ ನೀರು ಹೆಚ್ಚಾಗಿ ಹರಿಯುವ ಪ್ರದೇಶದಲ್ಲಿ ಭತ್ತ ನಾಟಿ ವಿಸ್ತೀರ್ಣ ಹೆಚ್ಚಿದೆ. ಸುವರ್ಣಾವತಿ ನದಿಯ ಸುತ್ತಮುತ್ತಲಿನ ಹೊಲ ಗದ್ದೆಗಳಲ್ಲಿ ಕೊಳವೆ ನೀರು ಪಡೆಯುವ ರೈತರು ಕಬ್ಬು ಮತ್ತು ತೋಟಗಾರಿಕಾ ಬೆಳೆಗೆ ಆದ್ಯತೆ ನೀಡಿದ್ದಾರೆ. ಕಾರ್ಮಿಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಯಂತ್ರಗಳ ಬಳಕೆ ವ್ಯಾಪಕವಾಗುತ್ತಿದೆ.

4 ತಳಿ ಬಿತ್ತನೆ ಭತ್ತ ವಿತರಣೆ:

‘ಗುಣಮಟ್ಟದ ಭತ್ತ ಮತ್ತು ಬಹು ಬೇಡಿಕೆ ಇರುವ ಜ್ಯೋತಿ ಐಆರ್-20 ಎಂಟಿಯೂ-1010 ಹಾಗೂ ಆರ್‌ಎನ್ಆರ್-15048 ತಳಿಗಳನ್ನು ರೈತರಿಗೆ ವಿತರಿಸಲಾಗಿದೆ. ನಾಲೆ ನೀರು ಸಕಾಲದಲ್ಲಿ ಹರಿದಿದ್ದು ಮಳೆಯೂ ಬಂದಿರುವುದು ವರದಾನವಾಗಿದೆ. ಗೌರಿ ಹಬ್ಬದ ಸಂದರ್ಭ ನಾಟಿ ಮಾಡಿದರೆ ಹೆಚ್ಚಿನ ಇಳುವರಿ ಸಿಗಲಿದೆ’ ಎಂದು ಕೃಷಿ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.