ಯಳಂದೂರು: ಇಲ್ಲಿನ ಗ್ರಾಮೀಣ ಭಾಗ, ಗುಡ್ಡಗಾಡು ಪ್ರದೇಶ, ರಸ್ತೆ ಬದಿ ಹಾಗೂ ಬಂಜರು ಭೂಮಿಗಳಲ್ಲಿ ಈಚಲ ಮರಗಳಲ್ಲಿ ಹಣ್ಣಿನ ಗೊಂಚಲು ತೂಗುತ್ತಿದೆ.
ಕಾಯಿ ಹಂತದಲ್ಲಿ ಹಸಿರು, ಬಲಿತಾಗ ಕೆಂಪು, ಹಣ್ಣಾದಾಗ ಹಳದಿ ಬಣ್ಣದ ಗೊಂಚಲು ಈಚಲು ಫಲ ಪ್ರಿಯರ ಬಾಯಲ್ಲಿ ನೀರೂರಿಸುತ್ತದೆ. ನಿಸರ್ಗದತ್ತವಾಗಿ ಬೆಳೆದು ಸಮೃದ್ಧ ಫಸಲು ನೀಡುವ ಈಚಲ ವೃಕ್ಷಗಳು ಹತ್ತಾರು ಕಾರಣಕ್ಕೆ ಮಹತ್ವ ಪಡೆದಿವೆ.
ತಾಲ್ಲೂಕಿನಲ್ಲಿ ಈಚಲು ಅಳಿನಿನಂಚಿನಲ್ಲಿವೆ. ಜನವರಿ-ಏಪ್ರಿಲ್ ನಡುವೆ ಹಣ್ಣು ನೀಡುತ್ತವೆ. ಬಯಲು ಸೀಮೆ ಮತ್ತು ಪಟ್ಟಣಿಗರ ಬಾಯಿ ರುಚಿ ತಣಿಸುವ ಈಚಲ ಹಣ್ಣನ್ನು ಮಕ್ಕಳು ಮತ್ತು ವೃದ್ಧರು ಇಷ್ಟಪಟ್ಟು ಸವಿದರೆ, ಕೆಲವರು ಬುಟ್ಟಿಯಲ್ಲಿ ತುಂಬಿ ಮಾರಾಟ ಮಾಡುತ್ತಾರೆ. ಜನವರಿ - ಏಪ್ರಿಲ್ ಸಮಯ ಕಾಫಿ ವರ್ಣಕ್ಕೆ ತಿರುಗಿದಾಗ ಕೊಯಿಲು ಮಾಡಲಾಗುತ್ತದೆ. ಹಣ್ಣು ಪಕ್ವವಾದಾಗ ನೆಲಕ್ಕೆ ಬೀಳುತ್ತದೆ. ವಿದ್ಯಾರ್ಥಿಗಳು ಭೂಮಿಗೆ ಬಿದ್ದ ಹಣ್ಣು ಶೇಖರಿಸಿ ಸಹಪಾಠಿಗಳಿಗೆ ಹಂಚುವುದೂ ಇದೆ.
ಈಚಲು ಮರ ಒರಟಾಗಿದ್ದು, ಹತ್ತುವುದು, ಇಳಿಯುವುದು ಕಷ್ಟ. ಎಂತಲೇ ಹಿರಿಯರು ದೋಟಿ ಬಳಸಿ ಈಚಲು ತಾರನ್ನು ಇಳಿಸುತ್ತಾರೆ. ನಂತರ ಮನೆಯಲ್ಲಿ ಇಟ್ಟು, ಹಣ್ಣಾದ ನಂತರ ಬಿಡಿಸಿ ಮನೆಮಂದಿಗೆ ನೀಡುತ್ತಾರೆ. ಆದರೆ, ಹಳ್ಳಿಗಳಲ್ಲಿ ಮಕ್ಕಳು ಮರವೇರಿ ಹಣ್ಣು ಕೊಯ್ಯುವುದು ಇದೆ. ಈ ವೇಳೆ ಮುಳ್ಳು ಚುಚ್ಚಿಸಿಕೊಂಡು ಗಾಯಮಾಡಿಕೊಂಡು ತೊಂದರೆ ಎದುರಿಸುವುದು ಇದೆ ಎನ್ನುತ್ತಾರೆ ಅಗ್ರಹಾರ ಗ್ರಾಮದ ರಾಮಪ್ಪ.
ಈಚಲು ಮರ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತದೆ. ಹೆದ್ದಾರಿ ಅಭಿವೃದ್ಧಿ, ಕೃಷಿ ಭೂಮಿ ವಿಸ್ತರಣೆ ಮತ್ತಿರರ ಮಾನವ ಹಸ್ತಕ್ಷೇಪಗಳಿಂದ ಮರಗಳ ಬೆಳವಣಿಗೆ ತಗ್ಗಿದೆ. ಎಲ್ಲೆಂದರಲ್ಲಿ ರಾರಾಜಿಸುತ್ತಿದ್ದ ವೃಕ್ಷಗಳು ಹಾಗೂ ವಿಶಾಲ ಈಚಲು ತೋಪುಗಳು ಈಚಿನ ವರ್ಷಗಳಲ್ಲಿ ಕಾಣದಾಗಿವೆ. ಸರ್ಕಾರಿ ಜಾಗ, ಗೋಮಾಳ ಹಾಗೂ ಕೆರೆ ಸಮೀಪಗಳಲ್ಲಿ ಉಳಿದಿದ್ದು, ಈ ಮರಗಳಿಂದಲೇ ಹಣ್ಣು ಸಂಗ್ರಹಿಸಬೇಕಿದೆ.
ವರ್ಷಕ್ಕೆ ಒಮ್ಮೆ ಮರದ ಬುಡದಲ್ಲಿ ಅಡ್ಡಾಡುತ್ತೇವೆ. ಮರದ ಬಗ್ಗೆ ಅರಿವು ಇದ್ದರೆ ಸಂಚರಿಸಲು ಅಡ್ಡಿ ಇಲ್ಲ. ಹೊಸಬರು ಮರದ ಕೆಳಗೆ ತೆರಳಬಾರದು. ಈಚಲು ಸೋಗು ಉದುರಿದಾಗ ಜೊತೆಯಲ್ಲಿ ಚೂಪಾದ ಮುಳ್ಳುಗಳು ಇದ್ದು, ಸ್ವಲ್ಪ ವ್ಯತ್ಯಾಸವಾದರೂ ಕಾಲಿಗೆ ಚುಚ್ಚಿಕೊಳ್ಳುತ್ತದೆ. ರಕ್ತಸ್ರಾವ ಆಗುತ್ತದೆ. ಚಳಿಗಾಲದಲ್ಲಿ ಗಾಯ ಬೇಗ ಮಾಗುವುದಿಲ್ಲ ಎನ್ನುತ್ತಾರೆ ಹಿರಿಯರಾದ ದುಗ್ಗಹಟ್ಟಿ ನಂಜಪ್ಪ.
ಈಚಲು ಮರವನ್ನು ಯಾರೂ ನೆಡುವುದಿಲ್ಲ. ಬಿತ್ತಿ ಬೆಳೆಯುವುದಿಲ್ಲ. ಪ್ರಕೃತಿದತ್ತವಾಗಿ ಬೆಳೆಯುತ್ತವೆ. ಮಳೆಗಾಲದಲ್ಲಿ ಬೀಜಕ್ಕೆ ಅಲ್ಪ ತೇವಾಂಶ ಸಿಕ್ಕರೂ ಚಿಗುರಿ ದೃಢವಾಗಿ ನಿಲ್ಲುತ್ತದೆ. ಬರ ನೆರೆ ಎನ್ನದೆ ನೂರಾರು ವರ್ಷ ಬದುಕುತ್ತದೆ. ಭೂ ಸವಕಳಿ ತಪ್ಪಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಹಾಗಾಗಿ, ಸಾಗುವಳಿದಾರರು ಹಿಂದೆ ಹೊಲ ಗದ್ದೆ ಬದುವು, ಸಂಪುಗಳ ಬಳಿ ಮರವನ್ನು ಉಳಿಸಿಕೊಳ್ಳುತ್ತಿದ್ದರು ಎಂಬುದು ಕೃಷಿಕರ ಮಾತು.
ಗ್ರಾಮೀಣರು ಈಚಲ ಹಣ್ಣನ್ನು ಬಯಲು ಸೀಮೆಯ ಖರ್ಜೂರ ಎನ್ನುತ್ತಾರೆ. ಈಚಲು ಕೇವಲ ಹಣ್ಣು ಮಾತ್ರ ನೀಡದೆ ಇದರ ಎಲೆ (ಸೋಗೆ ಗರಿ) ಬಿಡಿಸಿ ಬಳಸಿ ಚಾಪೆ ತಯಾರಿಸುತ್ತಿದ್ದರು. ದಂಟಿನಿಂದ ಬುಟ್ಟಿ ಮಕ್ಕರಿ ಹೆಣೆಯುತ್ತಿದ್ದರು. ವೃಕ್ಷದ ಸುಳಿಯಲ್ಲಿ ಸಿಗುವ ಬಿಳಿ ಗೆಡ್ಡೆಯನ್ನು ತಿನ್ನುತ್ತಿದ್ದರು. ದೊಡ್ಡ ತೋಪುಗಳಲ್ಲಿ ಮರದಿಂದ ನೈಸರ್ಗಿಕ ನೀರಾ ತಯಾರಿಸುತ್ತಿದ್ದರು. ಆದರೆ ಮರಗಳ ಸಂಖ್ಯೆ ಕಡಿಮೆಯಾದಂತೆ ಅವುಗಳ ಬಳಕೆಯೂ ತಗ್ಗಿದೆ’ ಎಂದು ಗೌಡಹಳ್ಳಿ ಗ್ರಾಮದ ಕೃಷಿಕ ದೊರೆಸ್ವಾಮಿ ಈಚಲಿನ ಉಪಯೋಗನ್ನು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.