ಯಳಂದೂರು ತಾಲ್ಲೂಕಿನ ಕೆರೆಯೊಂದರಲ್ಲಿ ಮೀನು ಸಾಕಣೆದಾರರು ವಿವಿಧ ತಳಿ ಮೀನುಗಳನ್ನು ಪರಿಶೀಲಿಸಿದರು
(ಸಂಗ್ರಹ ಚಿತ್ರ)
ಯಳಂದೂರು: ತಾಲ್ಲೂಕಿನ ಕೆರೆಗಳಲ್ಲಿ ಕಳೆ ಗಿಡಗಳು ಹೆಚ್ಚಾಗಿದ್ದು ನೀರಿನ ಲಭ್ಯತೆ ಕ್ಷೀಣವಾಗುತ್ತಿದ್ದು ಮತ್ಸ್ಯೋದ್ಯಮಕ್ಕೆ ತೊಡಕಾಗಿದೆ. ಜಲಮೂಲಗಳಲ್ಲಿ ಅಳಿದುಳಿದ ನೀರಿನಲ್ಲಿ ಮೀನು ಸಾಕಣೆ ನಡೆಯುತ್ತಿದೆ.
ತಾಲ್ಲೂಕಿನಲ್ಲಿ 28ಕ್ಕೂ ಹೆಚ್ಚಿನ ಕೆರೆ–ಕಟ್ಟೆಗಳಿದ್ದು ದೊಡ್ಡ ಹಾಗೂ ಸಣ್ಣ ಜಲಾವರಗಳು ಇವೆ. ನವೀನ ತಾಂತ್ರಿಕತೆಯಲ್ಲಿ ಕೊಳಗಳನ್ನು ನಿರ್ಮಿಸಿಕೊಂಡು ಮೀನು ಸಾಕುವತ್ತ ರೈತರು ಹೆಜ್ಜೆ ಇಟ್ಟಿದ್ದಾರೆ. ಈ ಬಾರಿ ಬಹುತೇಕ ಕೆರೆಗಳಲ್ಲಿ ಹೂಳು, ಕಳೆ ಗಿಡ, ತೇಲು ಕಳೆ ಬೆಳೆದಿರುವುದರಿಂದ ನೀರಿನ ಕೊರತೆ ಎದುರಾಗಿದ್ದು ಮೀನು ಸಾಕಣೆದಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಪ್ರತಿವರ್ಷ ಮೀನುಗಾರಿಕಾ ಇಲಾಖೆ ಗುತ್ತಿಗೆ ಆಧಾರದಲ್ಲಿ ಕೆರೆಗಳನ್ನು ಮೀನು ಸಾಕಣೆ ಮಾಡಲು ಹಂಚಿಕೆ ಮಾಡುತ್ತದೆ. ಗುತ್ತಿಗೆ ಪಡೆದವರು ಮೀನು ಮರಿಗಳನ್ನು ಬಿಟ್ಟು ದೊಡ್ಡವಾದ ನಂತರ ಹಿಡಿದು ಮಾರಾಟ ಮಾಡುತ್ತಾರೆ. ಆದರೆ, ಈ ಬಾರಿ ಕೆರೆ ಮತ್ತು ಕಾಲುವೆಗಳಲ್ಲಿ ನಾಡದೋಣಿಗಳು ಸರಾಗವಾಗಿ ಸಂಚರಿಸುವಷ್ಟು ನೀರಿಲ್ಲ. ಮಳೆಯ ಋತು ಪೂರ್ಣ ಪ್ರಮಾಣದಲ್ಲಿ ಆರಂಭವಾಗದೆ ಕಾಲುವೆ, ಕೆರೆಕಟ್ಟೆಗಳಿಗೆ ನೀರು ಹರಿದಿಲ್ಲ ಎನ್ನುತ್ತಾರೆ ಕೃಷಿಕರು.
ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಡಿಮೆ ನೀರಿನಲ್ಲೂ ಮೀನು ಬಿತ್ತನೆ ಮಾಡುವತ್ತ ಕೃಷಿಕರು ಮುಂದಡಿ ಇಟ್ಟಿದ್ದು ಕೃತಕ ಕೊಳ, ಬಾವಿಗಳ ನಿರ್ಮಾಣ ಮಾಡಿಕೊಂಡಿದ್ದಾರೆ. ಇಸ್ರೇಲ್ ಮಾದರಿಯ ತೊಟ್ಟಿಗಳನ್ನು ನಿರ್ಮಿಸಿಕೊಂಡು ಹೊಸ ತಳಿಯ ಮೀನುಗಳ ಸಾಕಣೆ ಆರಂಭಿಸಿದ್ದಾರೆ. ಆದರೆ, ಗ್ರಾಮೀಣ ಅಸಂಘಟಿತ ವಲಯದಲ್ಲಿರುವ ಮೀನುಗಾರರು ಕೆರೆ, ಕಟ್ಟೆಗಳನ್ನೇ ನಂಬಿದ್ದು ಮೀನುಗಾರಿಕೆ ಮಾಡುತ್ತಿದ್ದಾರೆ.
ನೀರಿನ ಕೊರತೆ ಎದುರಾದರೆ ಮೀನುಗಳ ಬೆಳವಣಿಗೆ ತಗ್ಗಿ ಉತ್ಪಾದನೆ ಕುಸಿಯಲಿದೆ. ಉತ್ತಮ ಧಾರಣೆಯೂ ಕೈಸೇರುವುದಿಲ್ಲ. ಮಾರುಕಟ್ಟೆಯಲ್ಲೂ ಮೀನುಗಳ ಮಾರಾಟವಾಗುವುದಿಲ್ಲ. ಇದರಿಂದ ಆರ್ಥಿಕತೆಗೆ ಒಡೆತ ಬೀಳಲಿದೆ ಎನ್ನುತ್ತಾರೆ ಕಂದಹಳ್ಳಿ ಬಸವಣ್ಣ.
ಕೃಷಿ ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಜಲ ಮೂಲಗಳು ನಶಿಸುತ್ತಿವೆ. ಮುಂಗಾರು ಉತ್ತಮವಾಗಿ ಸುರಿದರೆ ಮಾತ್ರ ಜಲಾವರಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಮೀನು ಬಿತ್ತನೆಗೂ ಸಹಕಾರಿ ಆಗಲಿದೆ ಎನ್ನುತ್ತಾರೆ ರೈತರು.
ಕೃತಕ ಜಲಮೂಲಗಳಲ್ಲಿ ಮೊರೆಲ್ ಮೀನು ಸಾಕಣೆಗೆ ರೈತರು ಆಸಕ್ತಿ ತೋರಿದ್ದಾರೆ. ಹೊರ ರಾಜ್ಯಗಳಲ್ಲಿ ಬೇಡಿಕೆ ಇರುವ ಮೊರೆಲ್ ಮೀನು 1 ಕೆಜಿಗೆ ₹ 300 ದರದಲ್ಲಿ ಮಾರಾಟವಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ಬೆಲೆ ಮತ್ತು ಬೇಡಿಕೆ ನಿರ್ಧಾರವಾಗುತ್ತದೆ. ಆಂಧ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಜೀವಂತ ಮೀನುಗಳನ್ನು ಸಾಗಣೆ ಮಾಡಲಾಗುತ್ತದೆ. ಮೀನು ಸಾಕಣೆಗೆ ಸರ್ಕಾರದ ಸಹಾಯಧನವೂ ಇರುವುದರಿಂದ ಮೀನುಗಾರಿಕೆ ಪದವೀದರ ಕೃಷಿಕರ ಮೆಚ್ಚಿನ ಆಯ್ಕೆಯಾಗಿದೆ ಎಂದು ಜಲ ಕೃಷಿಕ ನಟರಾಜು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.