
ಯಳಂದೂರು: ತಾಲ್ಲೂಕಿನ ಸುತ್ತ ಹೂವು ಅರಳಿಸಿದ ಮಾವಿನ ಮರಗಳಲ್ಲಿ ಬೂದಿ ರೋಗ ಕಂಡುಬಂದಿದೆ. ಮಾವು ಹೂವು ಬಿಡುವ ಹಂತದಲ್ಲಿ, ಬೂದಿ ಶಿಲೀಂಧ್ರ ರೋಗ ಆವರಿಸಿದೆ.
‘ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗಿದೆ. ರಾಜ್ಯ ಸೇರಿದಂತೆ ಕೊಲ್ಲಿ ದೇಶಗಳಿಗೂ ಇಲ್ಲಿನ ಹಣ್ಣುಗಳನ್ನು ರಫ್ತು ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ರೋಗ ಉಲ್ಬಣಿಸಿದರೆ ಹೂವು ಉದುರುತ್ತದೆ. ಫಸಲಿನ ಪ್ರಮಾಣ ಕುಸಿಯಲಿದೆ’ ಎಂದು ಬೆಳೆಗಾರರು ತಿಳಿಸಿದರು.
‘ಈ ಬಾರಿ ನಿಗದಿತ ಅವಧಿಯಲ್ಲಿ ಉತ್ತಮ ಹೂವು ಕಚ್ಚಿದೆ. ಪರಾಗಸ್ಪರ್ಶ ಕ್ರಿಯೆ ಸಕ್ರಿಯವಾಗಿದ್ದು, ಬಾದಾಮಿ, ತೋತಾಪುರಿ, ಮಲಗೋವ, ನೀಲಂ, ರಸಪುರಿ, ಇಮಾಂಫಸಂದ್ ಗಿಡಗಳಲ್ಲಿ ಹೂವು ಸಮೃದ್ಧವಾಗಿದೆ. ಮೋಡ ಮಸುಕಿದ ವಾತಾವರಣ, ಶೀತ, ಚಳಿ ಹೆಚ್ಚಾದಲ್ಲಿ ಬೂದಿ ರೋಗವೂ ಹೆಚ್ಚಾಗಲಿದೆ. ಹೂವು ಹಾಗೂ ಕಾಯಿ ಉದುರುವ ಆತಂಕವೂ ಕಾಡಲಿದೆ’ ಎಂದು ಅಂಬಳೆ ಮಾವು ಬೆಳೆಗಾರ ಮಹೇಶ್ ತಿಳಿಸಿದರು.
ಬೂದಿರೋಗ ಲಕ್ಷಣ
‘ಹೂವಿನ ಗೊಂಚಲು ಹಾಗೂ ಎಲೆಗಳ ಮೇಲೆ ಬೂದಿಯಂಥ ಬೆಳವಣಿಗೆ ಕಂಡುಬಂದಿದೆ. ಇದರಿಂದ ಹೂವುಗಳು ಒಣಗಿ ಬೀಳುತ್ತವೆ. ಎಳೆ ಕಾಯಿಗಳು ಉದುರುತ್ತವೆ. ಸೂಕ್ತ ಶಿಲೀಂಧ್ರ ನಾಶಕ ಬಳಕೆಯಿಂದ ಬೂದಿರೋಗ ತಡೆಯಬಹುದು. ಮಾಹಿತಿಗೆ ಬೆಳೆಗಾರರು ಅಧಿಕಾರಿಗಳನ್ನು ಸಂಪರ್ಕಿಸಬೇಕು’ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ತಿಳಿಸಿದ್ದಾರೆ.